ಚುನಾವಣೆಯ ನಂತರ ಮೂವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ದೊರಕಿದೆ ಹಾಗೂ ಯು.ಟಿ. ಖಾದರ್ ಅವರು ವಿಧಾನಸಭೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಎರಡು ಧಾರ್ಮಿಕ ಸಮುದಾಯಗಳು ನೀಡಿದ ಅಭೂತಪೂರ್ವ ಬೆಂಬಲಕ್ಕೆ ಹೋಲಿಸಿದರೆ ಕಾಂಗ್ರೆಸ್‌ನ ಈ ಅತ್ಯಲ್ಪ ಕೊಡುಗೆಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪ್ರಜಾಪ್ರಭುತ್ವದಲ್ಲಿ ಇರುವ ರಾಜಕೀಯ ಒಡಂಬಡಿಕೆ ಶಕ್ತಿಯು ಎಷ್ಟು ದುರ್ಬಲವಾಗಿದೆ ಎನ್ನುವುದು ತಿಳಿದುಬರುತ್ತದೆ.
ಕರ್ನಾಟಕದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನಗಳೊಂದಿಗೆ ಪಡೆದ ಅಪೂರ್ವ ವಿಜಯಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಲಾಗುತ್ತಿದೆ. ನಿರ್ದಿಷ್ಟ ಗುರಿ ಇಟ್ಟುಕೊಂಡು ನಡೆಸಿದ ಬಿಗಿಯಾದ ಪ್ರಚಾರ, ಐದು ಗ್ಯಾರಂಟಿಗಳ ಭರವಸೆ, ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಮಾಡಿದ ಗಂಬೀರ ಆರೋಪಗಳು, ಲಿಂಗಾಯತ ಸಮುದಾಯದ ಒಂದು ವರ್ಗ ತನ್ನ ನಿಷ್ಠೆಯನ್ನು ಕಾಂಗ್ರೆಸ್ ಕಡೆಗೆ ತಿರುಗಿಸಿದ್ದು, ದಲಿತರು-ಹಿಂದುಳಿದ ವರ್ಗಗಳು, ಬುಡಕಟ್ಟು ಸಮುದಾಯಗಳು ಮತ್ತು ಬಹುತೇಕ ಎಲ್ಲಾ ಜಾತಿ ಸಮುದಾಯಗಳ ಬಡವರ ಮತಗಳು ಕಾಂಗ್ರೆಸ್ ಪರವಾಗಿ ಧೃವೀಕರಣಗೊಳ್ಳುವಂತೆ ಮಾಡಿದ ಪ್ರಯತ್ನಗಳು, ಇತ್ಯಾದಿ ಆ ಕಾರಣಗಳಲ್ಲಿ ಹಲವು.
ಆದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಂದ ಕಾಂಗ್ರೆಸ್‌ಗೆ ದೊರೆತ ಅವಿಚಲಿತ ಬೆಂಬಲವನ್ನು ಈ ವಿಶ್ಲೇಷಣೆಗಳು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆಯ ಮೊದಲು ಲೋಕನೀತಿ-ಸಿಎಸ್‌ಡಿಎಸ್ ಹಾಗೂ ಇತರೆ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳಲ್ಲಿ ಮುಸ್ಲಿಮರು ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಸೂಚನೆ ಸಿಕ್ಕಿತ್ತು. ಸಮೀಕ್ಷೆಯ ಮಾದರಿ ಲೋಪವನ್ನು ಹೊರತುಪಡಿಸಿ ಹೇಳಿದರೂ, ಮತಹಾಕಿದವರ ಸಂಖ್ಯೆ ಬಹುದೊಡ್ಡ ಪ್ರಮಾಣದಲ್ಲಿದೆ. ಅಂದರೆ, ಕರ್ನಾಟಕದಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದರು ಎಂದು ಸರಳವಾಗಿ ಹೇಳಬಹುದು. ಆ ಸಮೀಕ್ಷೆಗಳಲ್ಲಿ ಕ್ರೈಸ್ತ ಸಮುದಾಯದ ಇಂಗಿತವನ್ನು ಪ್ರತ್ಯೇಕವಾಗಿ ದಾಖಲಿಸಲಿಲ್ಲ. ಆದರೆ, ನಿರೂಪಣೆಗಳಲ್ಲಿ ವ್ಯಕ್ತವಾಗಿರುವ ಮಾಹಿತಿಯನ್ನು ಗಮನಿಸಿದರೆ ಕ್ರೈಸ್ತರೂ ಕೂಡ ಸಾರಾಸಗಟಾಗಿ ಕಾಂಗ್ರೆಸ್‌ಅನ್ನು ಬೆಂಬಲಿಸಿರುವುದನ್ನು ಕಾಣುತ್ತೇವೆ.
ಸರಳ ಬಹುಮತ ವ್ಯವಸ್ಥೆಯನ್ನು (ಎಲ್ಲರಿಗಿಂತ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು) ಅನುಸರಿಸುವ ಭಾರತದಲ್ಲಿ, ವಿಜಯೀ ಅಭ್ಯರ್ಥಿಯ ಗೆಲುವಿನ ಅಂತರ ತೆಳುವಾಗಿರುವ (ಕಡಿಮೆ ಇರುವ) ಸಂದರ್ಭಗಳೇ ಹೆಚ್ಚು. ಇಂತಹ ವ್ಯವಸ್ಥೆಯಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಈ ಎರಡು ಸಮುದಾಯಗಳ ಮತಗಳನ್ನು ಒಟ್ಟು ಸೇರಿಸಿ ಪರಿಶೀಲಿಸಿದರೆ ಮಾತ್ರ ಈ ಸಮುದಾಯಗಳು ಮತ ಗಳಿಕೆಯ ಮೇಲೆ ಬೀರಿರುವ ಪರಿಣಾಮವನ್ನು ಸರಿಯಾಗಿ ಗ್ರಹಿಸಲು ಸಾದ್ಯವಾಗುತ್ತದೆ. ರಾಜ್ಯದ 92 ಕ್ಷೇತ್ರಗಳಲ್ಲಿ ಈ ಸಮುದಾಯಗಳ ಒಟ್ಟು ಜನಸಂಖ್ಯೆ ಶೇ.10ರಿಂದ 20 ಇದೆ; 21 ಕ್ಷೇತ್ರಗಳಲ್ಲಿ ಇದು ಶೇ.20ರಿಂದ 30 ಇದೆ; 10 ಕ್ಷೇತ್ರಗಳಲ್ಲಿ ಶೇ.30ರಿಂದ 40 ಇದೆ; 5 ಕ್ಷೇತ್ರಗಳಲ್ಲಿ ಶೇ.40ರಿಂದ 50 ಇದೆ; 3 ಕ್ಷೇತ್ರಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚಿದೆ (ಮಂಗಳೂರು, ಪುಲಕೇಶಿನಗರ ಮತ್ತು ಕಲ್ಬುರ್ಗಿ ಉತ್ತರ).
ಈ ಧಾರ್ಮಿಕ ಅಲ್ಪಸಂಖ್ಯಾತರು ಕಾಂಗ್ರೆಸ್‌ಅನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಲು ಕಾರಣವೇನು? 2019ರಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯು ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತು. ಆಗ ಯಡಿಯೂರಪ್ಪ ಕೈಗೊಂಡ ಮೊದಲ ನಿರ್ಧಾರಗಳಲ್ಲಿ ಟಿಪ್ಪು ಜಯಂತಿಯನ್ನು ರದ್ದು ಪಡಿಸಿದ್ದೂ ಒಂದಾಗಿತ್ತು. ಅವರ ಅವಧಿಯಲ್ಲಿ ಗೋಹತ್ಯೆ ನಿಷೇಧ ಕಾಯಿದೆಯನ್ನು (ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಗೋ ಸಂರಕ್ಷಣೆ ಕಾಯಿದೆ, 2020) ಜಾರಿಗೆ ತರಲಾಯಿತು. ಯಡಿಯೂರಪ್ಪ ತಮ್ಮ ಅವಧಿಯಲ್ಲಿ ಸಂಘ ಪರಿವಾರದ ಶಕ್ತಿಗಳು ನಿಯಂತ್ರಣ ಮೀರದಂತೆ ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದರಾದರೂ, 2021ರ ಮಧ್ಯದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದಾಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಯಡಿಯೂರಪ್ಪನವರ ಲಿಂಗಾಯತ ಸಹೋದ್ಯೋಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ನೇಮಕಗೊಂಡ ಕೂಡಲೆ ಕರಾವಳಿ ಕರ್ನಾಟಕದಲ್ಲಿ ಗೋರಕ್ಷಕರ (ಪ್ರಮುಖವಾಗಿ ಹಿಂದೂಗಳ) ವರ್ತನೆಗಳನ್ನು ಸಮರ್ಥಿಸುವ ಮೂಲಕ ತಮ್ಮ ಕಠೋರ ಸೈದ್ಧಾಂತಿಕ ನಿಲುವನ್ನು ಪ್ರದರ್ಶಿಸಿದರು.
ಇದನ್ನು ಓದಿದ್ದೀರಾ?: ಪ್ರಧಾನಿಯಾಗಿ ನರೇಂದ್ರ ಮೋದಿ ಒಂಬತ್ತು ವರ್ಷದಲ್ಲಿ ಸಾಧಿಸಿದ್ದೇನು? ಭಾಗ-1
ಈ ಮೊದಲು ಜನತಾ ಪರಿವಾರದಲ್ಲಿ ಇದ್ದಾಗ ಮೈಗೂಡಿಸಿಕೊಂಡಿದ್ದ ಸಮಾಜವಾದಿ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡ ಬೊಮ್ಮಾಯಿ, ತಮ್ಮ ಮಾತು ಅಥವಾ ಮೌನದ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂದುತ್ವವಾದಿಗಳ ಹಲ್ಲೆಗಳಿಗೆ ಮತ್ತಷ್ಟು ಶಕ್ತಿ ತುಂಬಿದರು. ಇವರ ಕಾಲಾವಧಿಯಲ್ಲಿ ಜಾರಿಗೆ ಬಂದ ಮತಾಂತರ ನಿಷೇಧ ಕಾಯಿದೆ ಎಂದು ಹೆಸರಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಕಾಯಿದೆ, 2022ರ ನಂತರ ಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ಅನೇಕ ಹಲ್ಲೆಗಳು ನಡೆದವು. ಯಾವ ಪ್ರಕರಣವನ್ನೂ ಸರಿಯಾದ ತನಿಖೆಗೆ ಒಳಪಡಿಸಲೇ ಇಲ್ಲ. ಆನಂತರ ಮುಸ್ಲಿಮರ ಧಾರ್ಮಿಕ ಆಚರಣೆಗೆ ಅನೇಕ ತೊಡಕುಗಳು ಎದುರಾದವು. ಮುಸ್ಲಿಂ ಯುವತಿಯರು ಹಿಜಾಬ್ ಧರಿಸದಂತೆ ಅಡ್ಡಿಪಡಿಸಲಾಯಿತು; ಹಲಾಲ್ ಮಾಂಸದ ವಿರುದ್ಧ ಬಲಪಂಥೀಯ ಗುಂಪುಗಳು ಅಪಪ್ರಚಾರ ನಡೆಸಿದವು; ಮುಸ್ಲಿಂ ವ್ಯಾಪಾರಿಗಳಿಗೆ ಗಂಭೀರ ತಡೆಯೊಡ್ಡಿದ್ದಲ್ಲದೆ ಹಲ್ಲೆಗಳನ್ನು ನಡೆಸಲಾಯಿತು; ಆಝಾನ್ ಅನ್ನು ವಿರೋಧಿಸಲಾಯಿತು. ಇಂತಹ ಎಲ್ಲ ಪ್ರಕರಣಗಳಲ್ಲೂ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧವಾದ ನಿಲುವನ್ನೇ ತಳೆಯಿತು.
ಮುಂದುವರೆದು, ಮುಸ್ಲಿಮರು ಮತ್ತು ಒಕ್ಕಲಿಗರ ನಡುವಿನ ಮಧುರ ಸಂಬಂಧವನ್ನು ಹಾಳುಮಾಡುವ ಸಲುವಾಗಿ ಟಿಪ್ಪು ಸುಲ್ತಾನನನ್ನು ಇಬ್ಬರು ಒಕ್ಕಲಿಗ ಯೋಧರು ಕೊಂದರು ಎಂಬ ಕಟ್ಟುಕಥೆಯನ್ನು ತೇಲಿಬಿಟ್ಟರು ಬಿಜೆಪಿ ನಾಯಕರು. ಚುನಾವಣೆ ಹತ್ತಿರವಾದಂತೆ, ಮುಸ್ಲಿಮರಿಗೆ ಪ್ರತ್ಯೇಕವಾಗಿ ನೀಡಿರುವ ಶೇ.4ರ ಮೀಸಲಾತಿಯನ್ನು ಕಿತ್ತು ಹಾಕಿದರು. ಬಿಜೆಪಿಯ ಇಂತಹ ಎಲ್ಲ ಅವಮಾನಕಾರಿ ಹಾಗೂ ಘಾತಕಾರಿ ನಡೆಗಳಿಂದಾಗಿ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಅವರ ಬಗ್ಗೆ ಕೋಪ ಹೊಗೆಯಾಡುತ್ತಿತ್ತು. ಇದರಿಂದಾಗಿ, ಮುಸ್ಲಿಮರು ಮತ್ತು ಕ್ರೈಸ್ತರು ತಮ್ಮ ಸಮುದಾಯದೊಳಗೆ ನಡೆದ ನಿಶ್ಯಬ್ದ ಪ್ರಚಾರ ಹಾಗೂ ನಾಗರಿಕ ಗುಂಪುಗಳು ನಡೆಸಿದ ಬಹಿರಂಗ ಪ್ರಚಾರಗಳಿಂದ ಪ್ರೇರಿತರಾಗಿ ಜನತಾದಳ (ಎಸ್) ಸ್ಪಷ್ಟವಾಗಿ ಮುಂಚೂಣಿಯಲ್ಲಿದ್ದ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಕಾಂಗ್ರೆಸ್‌ಗೆ ತಮ್ಮ ಮತ ನೀಡಿದರು. ತಮ್ಮ ಸಮುದಾಯದ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಅವಕಾಶವನ್ನು ನೀಡದೆ ಹೋದರೂ ಈ ಸಮುದಾಯಗಳು ಕಾಂಗ್ರೆಸ್‌ಅನ್ನು ಬೆಂಬಲಿಸಿದ್ದು ಗಮನಾರ್ಹ ಸಂಗತಿ. ಕಾಂಗ್ರೆಸ್ 15 ಜನ ಮುಸ್ಲಿಮರಿಗೂ, ಮೂವರು ಕ್ರೈಸ್ತರಿಗೂ ಅವಕಾಶ ನೀಡಿತ್ತು. ಅದರಲ್ಲಿ 9 ಮುಸ್ಲಿಂ ಅಭ್ಯರ್ಥಿಗಳು ಮತ್ತು ಒಬ್ಬರು ಕ್ರೈಸ್ತ ಅಭ್ಯರ್ಥಿ ಆಯ್ಕೆಯಾದರು.
ಚುನಾವಣೆಯ ನಂತರ ಮೂವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ದೊರಕಿದೆ ಹಾಗೂ ಯು.ಟಿ. ಖಾದರ್ ಅವರು ವಿಧಾನಸಭೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಎರಡು ಧಾರ್ಮಿಕ ಸಮುದಾಯಗಳು ನೀಡಿದ ಅಭೂತಪೂರ್ವ ಬೆಂಬಲಕ್ಕೆ ಹೋಲಿಸಿದರೆ ಕಾಂಗ್ರೆಸ್‌ನ ಈ ಅತ್ಯಲ್ಪ ಕೊಡುಗೆಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪ್ರಜಾಪ್ರಭುತ್ವದಲ್ಲಿ ಇರುವ ರಾಜಕೀಯ ಒಡಂಬಡಿಕೆ ಶಕ್ತಿಯು ಎಷ್ಟು ದುರ್ಬಲವಾಗಿದೆ ಎನ್ನುವುದು ತಿಳಿದುಬರುತ್ತದೆ. ಚುನಾವಣೆಗಳ ಸ್ಪರ್ಧೆಗಳು ಜಾತಿಗಳು ಮತ್ತು ಸಮುದಾಯಗಳ ಜೊತೆಗೆ ಒಪ್ಪಂದಗಳನ್ನು- ಪ್ರತ್ಯಕ್ಷ ಅಥವಾ ಪರೋಕ್ಷ- ಮಾಡಿಕೊಳ್ಳುವ ಕ್ಷೇತ್ರಗಳಾಗಿ ಬೆಳೆದುಬಂದಿವೆ. ಇಡೀ ದೇಶದಲ್ಲಿ ಎಲ್ಲಿಯೂ ಒಬ್ಬರಾದರೂ ಮುಸ್ಲಿಂ ಸಂಸತ್ ಸದಸ್ಯ ಅಥವಾ ಶಾಸಕರನ್ನು ಹೊಂದಿಲ್ಲದ ಬಿಜೆಪಿಯಂತೂ ತನ್ನ ನಿಲುವನ್ನು ಸ್ಪಷ್ಟವಾಗಿಯೇ ಬಹಿರಂಗಪಡಿಸಿದೆ. ಆದರೆ, ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯವು ನಮ್ಮ ಧರ್ಮವನ್ನು ಪಾಲಿಸಲು ನಮಗೆ ನೆಮ್ಮದಿಯ ಅವಕಾಶ ನೀಡುವುದಾದರೆ ನೀವು ಕೊಟ್ಟಷ್ಟೇ ಪ್ರಾತಿನಿಧ್ಯ ನಮಗೆ ಸಾಕು ಎನ್ನುವ ಅನ್ಯಾಯದ ಒಪ್ಪಂದವೊಂದನ್ನು ‘ಧರ್ಮನಿರಪೇಕ್ಷ’ ಪಕ್ಷಗಳೊಂದಿಗೆ ಮಾಡಿಕೊಂಡಿವೆ. ಇದು ನಮ್ಮ ಪ್ರಜಾಪ್ರಭುತ್ವವು ತಲುಪಿರುವ ಅವನತಿಯನ್ನು ಎತ್ತಿ ತೋರುತ್ತದೆ.

ಪ್ರೊ. ಎಸ್ ಜಾಫೆಟ್
ನಿವೃತ್ತ ಕುಲಪತಿಗಳು, ರಾಷ್ಟ್ರೀಯ ಕಾನೂನು ಶಾಲೆಯ ಹಾಲಿ ಪ್ರಾಧ್ಯಾಪಕರು