ಏಪ್ರಿಲ್ 23 ರಂದು ಬೆಂಗಳೂರಿನಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮ ದಿನದ ಅಂಗವಾಗಿ ಕೋಮುವಾದ ದಿಕ್ಕರಿಸಿ, ಸಂವಿಧಾನ ರಕ್ಷಿಸಿ, ದಲಿತರ ಅಭಿವೃದ್ಧಿಗಾಗಿ ಬೃಹತ್ ಜನಕ್ರಾಂತಿ ಸಮಾವೇಶ ನಡೆಯಲಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಿಎಸ್ಎಸ್
ತಾಲೂಕು ಸಂಘಟನಾ ಸಂಚಾಲಕ ಹರಿವೇಸಂದ್ರ ಕೃಷ್ಣಪ್ಪ ಮನವಿ ಮಾಡಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ನೇತೃತ್ವದಲ್ಲಿ ನಡೆಯಲಿರುವ ಜನಕ್ರಾಂತಿ ಸಮಾವೇಶದಲ್ಲಿ ದಲಿತರ 15 ಹಕ್ಕೋತ್ತಾಯಗಳನ್ನು ಮಂಡಿಸಲಾಗುತ್ತದೆ. ಪ್ರಗತಿಪರ ಸಂಘಟನೆಗಳು, ದಲಿತ ಮುಖಂಡರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರಬೇಕೆಂದು ತಿಳಿಸಿದರು.
ಡಿಎಸ್ಎಸ್ ಮುಖಂಡ ಸಿ ಎಸ್ ಪುರ ಬೆಟ್ಟಸ್ವಾಮಿ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಅಲ್ಲಿಂದ ಇಲ್ಲಿಯವರೆಗೂ ಕೆಲವು ಕೋಮುವಾದಿ ಸಂಘಟನೆಗಳು ಸಂವಿಧಾನವನ್ನು ವಿರೋಧಿಸಿಕೊಂಡೇ ಬರುತ್ತಿವೆ. ಸಂವಿಧಾನದ ಉಳಿವಿಗಾಗಿ ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಕೈಜೋಡಿಸಬೇಕು ಜನಕ್ರಾಂತಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್ಎಸ್ ತಾಲೂಕು ಉಸ್ತುವಾರಿ ನರೇಂದ್ರ ಕುಮಾರ್, ನಗರ ಸಂಚಾಲಕ ಜಿ ಎಚ್ ಕೃಷ್ಣಸ್ವಾಮಿ ಸೇರಿದಂತೆ ಹಲವು ದಲಿತ ಮುಖಂಡರು ಹಾಜರಿದ್ದರು.