ಆರ್‌ಸಿಬಿ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ತವರಿನಲ್ಲಿ ಸತತ ಪಂದ್ಯಗಳನ್ನು ಸೋತಿರುವ ಬೆಂಗಳೂರು ತಂಡ, ತವರಿನಾಚೆ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಈ ಹಿಂದಿನ ಐಪಿಎಲ್‌ನಲ್ಲಿರುವ ತಂಡಕ್ಕಿಂತ ಈ ಬಾರಿಯ ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಟಾರ್ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಬೆಂಗಳೂರು ತಂಡ ಪ್ಲೇ ಆಫ್‌ಗೆ ಹತ್ತಿರವಾಗಿದೆ. ಆದರೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಇನ್ನು ಮಹತ್ವದ ಮೈಲಿಗಲ್ಲು ಸಾಧಿಸಬೇಕಿದೆ.
ನ್ಯೂ ಚಂಡೀಗಡ್ ಅಂಗಳದಲ್ಲಿ ಆರ್‌ಸಿಬಿ , ಪಂಜಾಬ್ ವಿರುದ್ಧ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಬೆಂಗಳೂರು ತಂಡ, ಅರ್ಹ ಜಯ ಸಾಧಿಸಿದೆ. ಇಷ್ಟೇ ಅಲ್ಲದೆ ರನ್ ರೇಟ್‌ನಲ್ಲಿ ಪಂಜಾಬ್‌ಗಿಂತ ಬಲಿಷ್ಠವಾಗಿದ್ದರಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ತವರಿನ ಆಚೆ ಮೈ ಚೆಳಿ ಬಿಟ್ಟು ಆಡುವ ಬೆಂಗಳೂರು ತಂಡದ ಆಟಗಾರರು ತವರಿನಲ್ಲೂ ಇಂತಹದ್ದೇ ಪ್ರದರ್ಶನ ನೀಡಬೇಕಿದೆ. ತವರಿನಲ್ಲಿ ಆಡಿದ 3 ಪಂದ್ಯಗಳಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಆದರೆ ತವರಿನಾಚೆ ಈ ಸ್ಟಾರ್ ಪ್ಲೇಯರ್‌ಗಳ ಪ್ರದರ್ಶನ ಅಮೋಘವಾಗಿದೆ. ಆರ್‌ಸಿಬಿ ತವರಿನಲ್ಲಿ ಇನ್ನು ನಾಲ್ಕು ಪಂದ್ಯಗಳನ್ನು ಆಡಬೇಕಿದೆ. ತವರಿನ ಕೋಟೆಯಲ್ಲಿ ರಾಜನಂತೆ ಮೆರೆಯಲು ಬೇಕಿರುವ ತಯಾರಿಯನ್ನು ಆರ್‌ಸಿಬಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ಖಾತೆಯನ್ನು ತೆರೆಯಬೇಕಿದೆ. ಆರ್‌ಸಿಬಿ ಮುಂದಿನ ಪಂದ್ಯವನ್ನು ತವರು ಅಂಗಳದಲ್ಲೇ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ಅನಿವಾರ್ಯತೆಯಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡಕ್ಕೆ ಸಾಲು ಸಾಲು ಸವಾಲುಗಳಿವೆ. ಚೆನ್ನೈ, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ವಿರುದ್ಧ ಆರ್‌ಸಿಬಿ ತವರಿನಲ್ಲಿ ಕಾದಾಟ ನಡೆಸಲಿದೆ. ಈ ಪಂದ್ಯ ರೋಚಕತೆಯಿಂದ ಕೂಡಿರಲಿದೆ. ಕಾರಣ ಆ ಹಂತಕ್ಕೆ ಆಗಲೇ ಪ್ಲೇ ಆಫ್ ಲೆಕ್ಕಾಚಾರ ಚುರುಕು ಪಡೆದಿರುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಪ್ರದರ್ಶನ ನೋಡಿದರೆ ಪ್ಲೇ ಆಫ್‌ಗೆ ಹೋಗುವುದು ಕಷ್ಟವೇನಿಲ್ಲ. ಆದರೆ ಬೆಂಗಳೂರು ತಂಡದ ಪ್ಲೇ ಆಫ್ ರೀಚ್ ಆಗುವುದುನ್ನು ಗುರಿ ಮಾಡುವುದನ್ನು ಬಿಟ್ಟು, ಅಗ್ರ ಎರಡು ಸ್ಥಾನದ ಮೇಲೆ ಚಿತ್ತ ನೆಡಬೇಕಿದೆ. ಅಂದಾಗ ಫೈನಲ್ ಪ್ರವೇಶಿಸುವ ಅವಕಾಶ ಹೆಚ್ಚಾಗಿರುತ್ತದೆ.
ಈ ಸುದ್ದಿ ಓದಿದ್ದೀರಾ? ಸೋತ ಆರ್‌ಸಿಬಿಯಿಂದ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ನಿರ್ಮಾಣ
ಐಪಿಎಲ್‌ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ತಲುಪುವ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿ ಆಗುತ್ತವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಇರುತ್ತದೆ. ಎಲಿಮಿನೇಟರ್‌ನಲ್ಲಿ ಜಯ ಸಾಧಿಸಿರುವ ತಂಡದ ವಿರುದ್ಧ ಎರಡನೇ ಕ್ವಾಲಿಫೈರ್ ಆಡುವ ಅವಕಾಶವನ್ನು ಪಡೆಯುತ್ತದೆ. ಹೀಗಾಗಿ ಆರ್‌ಸಿಬಿ ಮೊದಲೆರೆಡು ಸ್ಥಾನಗಳಲ್ಲಿ ಲೀಗ್ ಹಂತವನ್ನು ಮುಗಿಸುವ ಕನಸು ಕಾಣುತ್ತಿದೆ.
ಆರ್‌ಸಿಬಿ ಮುಂದಿನ ದಿನಗಳಲ್ಲಿ ಇನ್ನು ಆರು ಪಂದ್ಯಗಳನ್ನು ಆಡಲಿದೆ. ಹಾಫ್ ವೇ ಮಾರ್ಕ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕುಳಿತುಕೊಳ್ಳಲು ಮುಂದಿನ ಆರು ಪಂದ್ಯಗಳಲ್ಲಿ ಕನಿಷ್ಠ 4 ರಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಈ ವೇಳೆ 2 ತವರಿನಾಚೆ ಪಂದ್ಯಗಳು ನಡೆದರೆ, ನಾಲ್ಕು ಪಂದ್ಯಗಳು ತವರಿನಲ್ಲಿ ನಡೆಯಲಿವೆ. ಆರ್‌ಸಿಬಿ ತವರಿನಲ್ಲೂ ಗೆಲುವಿನ ರಣ ತಂತ್ರವನ್ನು ಹೆಣೆದುಕೊಂಡು, ಸಾಧ್ಯವಾದಷ್ಟು ಬೆಂಗಳೂರಿನಲ್ಲಿ ಪಂದ್ಯಗಳನ್ನು ಗೆದ್ದಾಗ ಮಾತ್ರ ಅಂಕ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ನಿಲ್ಲಲು ಸಾಧ್ಯ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯಗಳು
ಏ. 24, ರಾಜಸ್ಥಾನ ರಾಯಲ್ಸ್, ಬೆಂಗಳೂರು, ಸಂಜೆ 7.30
ಏ.27, ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ, ಸಂಜೆ 7.30
ಮೇ 3, ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು, ಸಂಜೆ 7.30
ಮೇ 9, ಲಖನೌ ಸೂಪರ್ ಜೈಂಟ್ಸ್, ಲಖನೌ, ಸಂಜೆ 7.30
ಮೇ 13, ಸನ್‌ರೈಸರ್ಸ್ ಹೈದರಾಬಾದ್, ಬೆಂಗಳೂರು, ಸಂಜೆ 7.30
ಮೇ 17, ಕೋಲ್ಕತ್ತಾ ನೈಟ್ ರೈಡರ್ಸ್, ಬೆಂಗಳೂರು, ಸಂಜೆ 7.30