ಡಾ. ರಾಜಕುಮಾರ್ ಅವರಿಗೆ ದೂರದೃಷ್ಟಿ ಇತ್ತು. ಒಂದು ಪ್ರದೇಶ, ಒಂದು ಭಾಷೆ ಮತ್ತು ಒಂದು ಪ್ರದೇಶದ ಜನಗಳ ಅಭಿಮಾನ ಗಳಿಸುವಂತಹ ದೃಢ ನಿರ್ಧಾರ ಇತ್ತು. ಹಾಗಾಗಿಯೇ ಅವರು ವರನಟರಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ದೊಡ್ಡ ಹುಲ್ಲೂರು ರಕ್ಕೋಜಿಯವರು ಸ್ಮರಿಸಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹುಣ್ಣಿಮೆ ಪ್ರಕಾಶನದಿಂದ ಏಪ್ರಿಲ್ 24ರ ಡಾ ರಾಜ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಅವನಿ ಮನೆಯಂಗಳದಲ್ಲಿ ನಾಡು ನುಡಿ ಆಸ್ಮಿತೆ ಡಾ. ರಾಜಕುಮಾರ್ ನೆನಪಿನ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೊಡ್ಡ ಹುಲ್ಲೂರು ರಕ್ಕೋಜಿಯವರು ಮಾತನಾಡಿ, “ರಾಜ್‌ಕುಮಾರ್ ಅವರ ಬಾಲ್ಯದ ಹೆಸರು ಮುತ್ತುರಾಜ್ ಅಂತ ಅವರ ತಂದೆ ಪುಟ್ಟಸ್ವಾಮಿ ಗೌಡರು. ಒಮ್ಮೆ ಒಂದು ಕುಸ್ತಿ ಪಂದ್ಯದಲ್ಲಿ ಮುತ್ತುರಾಜ್ ಮತ್ತು ವೆಂಕಟರಾಜ್ ಇಬ್ಬರೂ ಕುಸ್ತಿಯಾಡಬೇಕಾದ ಸಂದರ್ಭ ಬರುತ್ತೆ, ಆಗ ಇದಕ್ಕೆ ನಮ್ಮ ತಂದೆ ಒಪ್ಪುವುದಿಲ್ಲ ಅಂತ ರಾಜಕುಮಾರ್ ಅಂದುಕೊಂಡಿರ್ತಾರೆ, ಆದರೆ ಅವರ ತಂದೆ ಮುತ್ತುರಾಜ್ ಆಡೋ ಕುಸ್ತಿಯ ಅಂತ ಹೇಳ್ತಾರೆ, ಆಗ ರಾಜಕುಮಾರ್ ಅವರು ಅಯ್ಯೋ, ನಮ್ಮಪ್ಪ್ನೇ ನನ್ನ ಕುಸ್ತಿಗೆ ನೂಕಿಬಿಟ್ಟರಲ್ಲ, ಏನುಮಾಡೋದು ಅಂತ ಯೋಚನೆ ಮಾಡ್ತಾರೆ. ವೆಂಕಟರಾಜ್ ತುಂಬಾ ಬಲಾಢ್ಯ” ಎಂದರು.

“ರಾಜಕುಮಾರ್ ಅವರು ತುಂಬಾ ತೆಳ್ಳಗೆ ಇರ್ತಾರೆ ಸರಿಯಾಗಿ ಊಟ ಇರೋದಿಲ್ಲ. ಹಾಗಾಗಿ ಇಂತಹ ಬಲಾಢ್ಯರ ಜತೆ ಹೇಗೆ ಕುಸ್ತಿ ಆಡೋದು ಅಂದುಕೊಂಡು ಅಕಾಡಕ್ಕೆ ಇಳೀತಾರೆ. ಆದರೆ ಅವರು ಸೋಲುವಂತೆ ಕಾಣುತ್ತೆ, ತಂದೆ ಕೂಗಿ ಹೇಳುತ್ತಾರೆ, ʼಲೋ ಮುತ್ತುರಾಜ್ ನೀನು ಸೋತರೆ ಅದೇ ಮರಳಲ್ಲಿ ಹೂತುಬಿಡುತ್ತೇನೆʼ ಅಂತ ಗದರುತ್ತಾರೆ. ಇದರಿಂದ ರಾಜಕುಮಾರ್ ಅವರು, ಹೀಗೆ ಇದ್ದರೆ ವೆಂಕಟರಾಜ್ ಹೊಡೆದು ಸಾಯಿಸ್ತಾನೆ, ಸೋತರೆ ಅಪ್ಪ ಸಾಯಿಸುತ್ತಾರೆ ಅಂದುಕೊಂಡಿದ್ದೆ ಎಲ್ಲಿತ್ತೊ ರೋಷ ಅವರಿಗೆ ವೆಂಕಟರಾಜ್ ಅವರನ್ನು ಮೇಲಕ್ಕೆ ಎತ್ತಿ ಗಿರಗಿರನೆ ಎರಡು ಸುತ್ತು ಸುತ್ತಿಸಿ ಕೆಳಕ್ಕೆ ಬಿಸಾಕುತ್ತಾರೆ. ಅಯ್ಯೋ ಕೂಸೆ ನನ್ನೇ ಎತ್ತಿ ಎಸಿತೀಯ ಅಂದ ವೆಂಕಟರಾಜ್ ಮೇಲೇಳುವಷ್ಟರಲ್ಲಿ ರಾಜಕುಮಾರ್ ಹೋಗಿ ಅವರ ಮೇಲೆ ಕುಳಿತುಕೊಂಡು ಉಸಿರು ಗಟ್ಟಿಸಿಬಿಡುತ್ತಾರೆ. ಆಗ ದೊಡ್ಡವರೆಲ್ಲ ಓಡಿಹೋಗಿ ಇಬ್ಬರನ್ನೂ ಬಿಡಿಸಿ ಸುಧಾರಿಸುತ್ತಾರೆ. ಅಂತಹ ನೋವಿನಲ್ಲಿಯೂ ತಂದೆ ಭೇಷ್ ಮಗನೆ ನನಗೆ ಗೊತ್ತಿತ್ತು, ನೀನು ಗುಲ್ಲುತ್ತೀಯ ಅಂತ ಹೇಳ್ತಾರೆ. ಇದರಿಂದ ರಾಜ್ ಕುಮಾರ್ ಅವರಿಗೆ ತಂದೆ ಭೇಷ್ ಅಂದಿದ್ದು ತುಂಬಾ ಸಂತೋಷ ಆಗುತ್ತೆ. ಅಂದಿನಿಂದ ಅವರು ನಾನು ಏನನ್ನಾದರೂ ಸಾಧಿಸಬಲ್ಲೆ ಅಂದುಕೊಳ್ಳುತ್ತಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಹುತೇಕ ಸರ್ಕಾರಿ ನೌಕರರ ಪ್ರಾಮಾಣಿಕ ಕರ್ತವ್ಯ ಪ್ರಜ್ಞೆಯಿಂದ ರಾಜ್ಯ ಆರ್ಥಿಕ ಪ್ರಗತಿ ಸಾಧಿಸಿದೆ: ಸಿಎಂ
ಚಲನಚಿತ್ರ ನಿರ್ಮಾಪಕ ಗಾಜನೂರು ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಪ್ರಸಿದ್ಧ ಕಥೆಗಾರ ಜಿ ವಿ ಆನಂದಮೂರ್ತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ಹುಣ್ಣಿಮೆ ಪ್ರಕಾಶನದ ಎನ್ ಆರ್ ತಿಪ್ಪೇಸ್ವಾಮಿ, ನಿಸರ್ಗ ಗೋವಿಂದರಾಜು ಸ್ವಾಗತಿಸಿ ವಂದಿಸಿದರು.
ರಾಮಚಂದ್ರ, ರಂಗಸ್ವಾಮಿ, ಮಧುಮತಿ, ಗಂಗಾಧರ, ಸಂಪತ್ ಕುಮಾರ್, ನಾಗೇಶ್ ಇತರ ಸಾಹಿತ್ಯ ಆಸಕ್ತರು ಇದ್ದರು.