ಜೂನ್ ತಿಂಗಳು ಕಳೆದರೂ, ಮುಂಗಾರು ಮಳೆತರುವ ನೈರುತ್ಯ ಮಾರುತಗಳ ಕಾಣೆಯಾಗಿವೆ. ಎಲ್ಲೆಡೆ ಬರದ ಛಾಯೆ ಕಾಣಿಸುತ್ತಿದೆ. ಜಲಾಶಯ, ನದಿ, ಕೆರೆ, ಕಟ್ಟೆಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಜನರೂ ಸೇರಿದಂತೆ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಹಾವೇರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಈಗಾಗಲೇ ಕೆರೆ-ಕಟ್ಟೆ ಸಂಪೂರ್ಣ ಬರಿದಾಗಿದ್ದು, ಜಿಲ್ಲೆಯ ಅರಳೇಶ್ವರ ಗ್ರಾಮದ ರೈತರೊಬ್ಬರು ಜಾನುವಾರು ಮತ್ತು ಪಕ್ಷಿಗಳ ದಾಹ ತಣಿಸಲು ತಮ್ಮ ಪಂಪ್‌ಸೆಟ್‌ನಿಂದ ಕೆರೆಗೆ ನೀರು ಹರಿಸುತ್ತಿದ್ದಾರೆ.
ಗ್ರಾಮದ ರೈತ ರವಿ ತಿರುಮಲೆ ಅವರು ಕಳೆದ ಎರಡು ತಿಂಗಳಿಂದ ಚಿಕ್ಕಕೆರೆಗೆ ನೀರು ಹರಿಸುತ್ತಿದ್ದಾರೆ. ರವಿ ಅವರಿಗೆ ನಾಲ್ಕು ಎಕರೆ ಕೃಷಿ ಭೂಮಿ ಮತ್ತು ಒಂದು ಬೋರ್‌ವೆಲ್ ಇದೆ. ಕಳೆದ 15 ವರ್ಷಗಳಿಂದ ಬೋರ್‌ವೆಲ್ ಮೂಲಕ ಜಮೀನಿಗೆ ನೀರುಣಿಸುತ್ತಾ ಕೃಷಿ ಮಾಡುತ್ತಿದ್ದಾರೆ.
ಅವರ ಕೃಷಿ ಭೂಮಿಯ ಪಕ್ಕದಲ್ಲೇ ಇರುವ ಸಣ್ಣ ಕೆರೆ ಬತ್ತಿ ಹೋಗಿದೆ. ಜಾನುವಾರುಗಳುಮ ಪಕ್ಷಿಗಳು ಹಾಗೂ ಇತರ ಪ್ರಾಣಿಗಳಿಗೆ ಕುಡಿಯುವ ನೀರು ದೊರೆಯದೆ ಕಷ್ಟಕರವಾಗಿದೆ. ಇದನ್ನು ಕಂಡ ರವಿ, ಬಾಯಾರಿದ ಜಾನುವಾರುಗಳಿಗೆ ನೆರವಾಗಲು ತಮ್ಮ ಬೋರ್‌ವೆಲ್‌ನಿಂದ ಕೆರೆಗೆ ನೀರು ಬಿಡುತ್ತಿದ್ದಾರೆ.
“ಸಾಮಾನ್ಯವಾಗಿ, ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಬರುತ್ತದೆ. ಆದರೆ, ಈ ವರ್ಷ ಮುಂಗಾರು ಒಂದು ತಿಂಗಳು ವಿಳಂಬವಾಗಿದೆ. ಜಾನುವಾರು, ಪಕ್ಷಿ ಸಂಕುಲಕ್ಕೆ ತೊಂದರೆಯಾಗಿದೆ. ಕಳೆದ ಎರಡು ತಿಂಗಳಿಂದ ಕೆರೆಗೆ ನೀರು ಹರಿಸುತ್ತಿದ್ದೇನೆ. ನನ್ನ ಪಂಪ್‌ಸೆಟ್‌ನಲ್ಲಿ ಉತ್ತಮವಾರಿ ನೀರು ಬರುತ್ತಿದೆ. ಕಷ್ಟಕಾಲದಲ್ಲಿ ಅದನ್ನು ಎಲ್ಲರಿಗೂ ಉಪಯೋಗವಾಗುವಂತೆ ಬಳಸುವುದು ಒಳ್ಳೆಯದು” ಎಂದು ರವಿ ಹೇಳಿದ್ದಾರೆ.
“ನಮ್ಮೂರಲ್ಲಿ ಹಲವಾರು ಜಾನುವಾರುಗಳಿವೆ. ಆದರೆ, ಅವುಗಳಿಗೆ ನೀರು ಸಿಗುವುದು ಕಷ್ಟವಾಗಿತ್ತು. ರವಿ ಅವರು ಕೆರೆಗೆ ನೀರು ಬಿಡುತ್ತಿರುವುದರಿಂದ ಈಗ ನಿರಾಳರಾಗಿದ್ದೇವೆ. ಇದರಿಂದ ನಮಗೆ ಸಾಕಷ್ಟು ಸಹಾಯವಾಗುತ್ತಿದೆ” ಎಂದು ಗ್ರಾಮಸ್ಥರು ಹೇಳಿದ್ದಾರೆ.