ಮಸೂದೆ ಅಂಗೀಕಾರಕ್ಕೆ ಕಾಲಮಿತಿ ನಿಗದಿ ಮಾಡಿ ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ತನ್ನ ವಿವೇಚನಾಧಿಕಾರವನ್ನು ಸುಪ್ರೀಂ ಕೋರ್ಟ್ ಬಳಸಿದ್ದರಲ್ಲಿ ತಪ್ಪೇನೂ ಇಲ್ಲ
ಸುಪ್ರೀಂಕೋರ್ಟ್ ಮತ್ತು ಸಂಸತ್ತಿನ ನಡುವೆ ತಿಕ್ಕಾಟ ಶುರುವಾಗಿದೆ. ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಧ್ಯಕ್ಷ ಜಗದೀಪ್ ಧನಕರ್ ಅವರು ನೇರಾನೇರ ಸುಪ್ರೀಂಕೋರ್ಟ್ ವಿರುದ್ಧ ಮಾತನಾಡಿದ್ದಾರೆ. ರಾಜ್ಯ ಸರ್ಕಾರಗಳು ಕಳುಹಿಸಿದ ಮಸೂದೆಗಳಿಗೆ ಅಂಕಿತ ಹಾಕದೆ ವಿಳಂಬ ನೀತಿ ಅನುಸರಿಸುವ ರಾಜ್ಯಪಾಲರ ನಡೆಯಲ್ಲಿ ಬದಲಾವಣೆಯನ್ನು ತರುವ ನಿಟ್ಟಿಯಲ್ಲಿ ಮಹತ್ವದ ತೀರ್ಪನ್ನು ‘ತಮಿಳುನಾಡು ಸರ್ಕಾರ ವರ್ಸಸ್ ರಾಜ್ಯಪಾಲ’ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಏಪ್ರಿಲ್ 8ರಂದು ನೀಡಿತು. ಆದರೆ ಈ ತೀರ್ಪಿನ ವಿರುದ್ಧ ಅಸಹನೆಯನ್ನು ಧನಕರ್ ಹೊರಹಾಕಿದ್ದಾರೆ.
ರಾಷ್ಟ್ರಪತಿಗಳ ಪರಿಶೀಲನೆಗೆ ಯಾವುದಾದರೂ ಮಸೂದೆಯನ್ನು ರಾಜ್ಯಪಾಲರು ಕಳುಹಿಸಿದ್ದರೆ, ಅದಕ್ಕೆ ಅಂಕಿತ ಹಾಕಲು ಸರ್ವೋಚ್ಚ ನ್ಯಾಯಾಲಯ ಕಾಲಮಿತಿ ವಿಧಿಸಿದೆ. ಈ ಕಾರಣಕ್ಕೆ ಧನಕರ್ ಸೇರಿದಂತೆ ಬಿಜೆಪಿ ನಾಯಕರು ಟೀಕಾಪ್ರಹಾರ ಶುರು ಮಾಡಿದ್ದಾರೆ.
ಭಾರತ ಸಂವಿಧಾನದ ವಿಧಿ 142 ಸುಪ್ರೀಂಕೋರ್ಟ್‌ಗೆ ನೀಡಿರುವ ವಿವೇಚನಾಧಿಕಾರದ ಮೇಲೆ ಹರಿಹಾಯ್ದಿರುವ ಧನಕರ್, ”ಸುಪ್ರೀಂಕೋರ್ಟ್ ಅಣ್ವಸ್ತ್ರ ಕ್ಷಿಪಣಿ ಉಡಾಯಿಸುತ್ತಾ, ಸಂಸತ್ತಿಗೂ ಮಿಗಿಲಾಗಿ ವರ್ತಿಸುತ್ತಿದೆ” ಎಂದಿದ್ದಾರೆ.
“ಕಾನೂನು ರೂಪಿಸುವ, ಕಾರ್ಯಾಂಗದ ಕೆಲಸಗಳನ್ನು ಮಾಡುವ, ಸಂಸತ್ತಿಗಿಂತ ಮಿಗಿಲಾಗಿ ವರ್ತಿಸುವ ಮತ್ತು ಯಾವ ಉತ್ತರದಾಯಿತ್ವವೂ ಇರದ ನ್ಯಾಯಮೂರ್ತಿಗಳನ್ನು ನಾವು ಹೊಂದಿದ್ದೇವೆ. ಏಕೆಂದರೆ ದೇಶದ ಕಾನೂನು ಅವರಿಗೆ ಅನ್ವಯವಾಗುವುದಿಲ್ಲ” ಎಂದು ಟೀಕಿಸಿದ್ದಾರೆ.
“ಈಚಿನ ತೀರ್ಪೊಂದರಲ್ಲಿ ರಾಷ್ಟ್ರಪತಿಯವರಿಗೆ ಒಂದು ನಿರ್ದೇಶನ ಇದೆ. ನಾವು ಎತ್ತ ಸಾಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ? ನಾವು ಬಹಳ ಸೂಕ್ಷ್ಮವಾಗಿ ಇರಬೇಕು. ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕೋ ಬೇಡವೋ ಎಂಬ ಪ್ರಶ್ನೆ ಇದಲ್ಲ. ಈ ಬಗೆಯ ಪ್ರಜಾತಂತ್ರವನ್ನು ನಾವು ಯಾವತ್ತೂ ಬಯಸಿರಲಿಲ್ಲ…”‘ ಎಂದಿದ್ದಾರೆ ಧನಕರ್.
“ರಾಷ್ಟ್ರಪತಿಯವರ ಸ್ಥಾನವು ಬಹಳ ಉನ್ನತವಾದುದು. ರಾಷ್ಟ್ರಪತಿಯವರು ಸಂವಿಧಾನವನ್ನು ರಕ್ಷಿಸಲು ಪ್ರತಿಜ್ಞೆ ಸ್ವೀಕರಿಸಿರುತ್ತಾರೆ. ಸಚಿವರು, ಉಪ ರಾಷ್ಟ್ರಪತಿ, ಸಂಸದರು ಮತ್ತು ನ್ಯಾಯಮೂರ್ತಿಗಳು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿರುತ್ತಾರೆ” ಎಂದೂ ಹೇಳಿದ್ದಾರೆ. ಹೀಗೆ ಮುಂದುವರಿದಿದೆ ಧನಕರ್ ವಾಗ್ದಾಳಿ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಭಾರತೀಯ ಸಮಾಜದಲ್ಲಿ ಬ್ರಾಹ್ಮಣ್ಯ-ಮನುವಾದ ಮರುಕಳಿಸುತ್ತಿದೆಯೇ?
ಸುಪ್ರೀಂಕೋರ್ಟ್ ತನ್ನ ವಿವೇಚನಾಧಿಕಾರವನ್ನು ಸರಿಯಾಗಿ ಬಳಸಿದೆಯೇ ಎಂಬುದು ನಮ್ಮ ಮುಂದಿರುವ ನ್ಯಾಯಯುತ ಪ್ರಶ್ನೆ. 142ನೇ ವಿಧಿಯ ಪ್ರಕಾರ, ”ಸುಪ್ರೀಂ ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸುವಾಗ, ತನ್ನ ಮುಂದೆ ಬಾಕಿ ಇರುವ ಯಾವುದೇ ಪ್ರಕರಣ ಅಥವಾ ವಿಷಯದಲ್ಲಿ ಸಂಪೂರ್ಣ ನ್ಯಾಯವನ್ನು ನೀಡಲು ಅಗತ್ಯವಾದ ಆದೇಶವನ್ನು ಹೊರಡಿಸಬಹುದು ಅಥವಾ ಆದೇಶವನ್ನು ನೀಡಬಹುದು”. ಅಂದರೆ ಸಂಪೂರ್ಣ ನ್ಯಾಯ ನೀಡಬೇಕಾದ ಪ್ರಕರಣಗಳಲ್ಲಿ ವಿವೇಚನಾಧಿಕಾರವನ್ನು ಬಳಸುವ ಅಧಿಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಇದೆ.
ಸಂವಿಧಾನದ ವಿಧಿ 200ರ ಪ್ರಕಾರ, ರಾಜ್ಯ ಸರ್ಕಾರ ಕಳುಹಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಂಗೀಕಾರ ಹಾಕಬಹುದು, ಅಥವಾ ಪುನರ್ ಪರಿಶೀಲನೆಗೆ ಕಳುಹಿಸಬಹುದು. ರಾಜ್ಯ ಸರ್ಕಾರ ಮರುಪರಿಶೀಲನೆ ಮಾಡಿ ಕಳುಹಿಸಿದಾಗ ಅಂಕಿತ ಹಾಕಬೇಕಾಗುತ್ತದೆ. ಅಥವಾ ಹೈಕೋರ್ಟ್‌ನ ಅಧಿಕಾರವನ್ನು ಮಸೂದೆ ಮೀರುವಂತಿದ್ದರೆ ಅದನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ರವಾನಿಸಬಹುದು.
ಆದರೆ ರಾಷ್ಟ್ರಪತಿಯವರಿಗೆ ಕಳುಹಿಸಿದ ಮಸೂದೆಯನ್ನು ಇಂತಿಷ್ಟೇ ದಿನಗಳಲ್ಲಿ ಹಿಂತಿರುಗಿಸಬೇಕೆಂಬ ನಿಯಮವಿಲ್ಲ. ಈ ಅವಕಾಶವನ್ನು ಬಳಸಿಕೊಂಡು ವಿಳಂಬ ನೀತಿಯನ್ನು ಅನುಸರಿಸುವುದು ರಾಜಕೀಯ ಪ್ರೇರಿತವಾಗಿ ಕಂಡರೆ ಆಶ್ಚರ್ಯದ ಸಂಗತಿಯೇನಲ್ಲ.
ಕೇಂದ್ರದಲ್ಲಿ ಒಂದು ಪಕ್ಷ, ರಾಜ್ಯದಲ್ಲಿ ಬೇರೊಂದು ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯಪಾಲರು ಮಸೂದೆಯನ್ನು ಅನಿರ್ದಿಷ್ಟಾವಧಿ ತಡೆಹಿಡಿಯುವುದು ಸಾಮಾನ್ಯವಾಗಿಬಿಟ್ಟಿದೆ. ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರವೊಂದು ರೂಪಿಸಿದ ಮಸೂದೆಯು ನನೆಗುದಿಗೆ ಬೀಳುವುದು, ಅದು ಜಾರಿಯಾಗದಂತೆ ವಿಳಂಬ ನೀತಿ ಅನುಸರಿಸುವುದು ಎಷ್ಟು ಸರಿ? ಇಲ್ಲಿ ರಾಜಕೀಯದ ವಾಸನೆ ಕಂಡುಬರುವುದು ಸಹಜ.
ತಮಿಳುನಾಡು, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ರಾಜ್ಯಪಾಲರು ಇಲ್ಲಿನ ಸರ್ಕಾರಗಳಿಗೆ ಹೇಗೆಲ್ಲ ಕಿರಿಕಿರಿ ಉಂಟು ಮಾಡಿದ್ದಾರೆ, ಪಕ್ಷಪಾತಿಯಾಗಿ ನಡೆದುಕೊಂಡಿದ್ದಾರೆಂಬುದು ಸ್ಪಷ್ಟವಾಗಿ ನಮ್ಮ ಕಣ್ಣುಮುಂದಿದೆ. ರಾಜ್ಯ ಸರ್ಕಾರದ ಕಾಲುಗಳನ್ನು ಮುರಿಯುವ ಕೆಲಸವನ್ನು ಕೇಂದ್ರದ ಆಣತಿಯಂತೆ ರಾಜ್ಯಪಾಲರು ಮಾಡುತ್ತಾರೆಂಬುದು ರಾಜಕೀಯದ ಎಬಿಸಿಡಿ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಿರುವ ಸುಪ್ರೀಂಕೋರ್ಟ್ ತನ್ನ ವಿವೇಚನಾಧಿಕಾರವನ್ನು ಬಳಸಿ ಮಸೂದೆ ಅಂಗೀಕಾರಕ್ಕೆ ಕಾಲಮಿತಿಯನ್ನು ವಿಧಿಸಿರುವುದು ಸ್ವಾಗತಾರ್ಹ ನಿರ್ಧಾರ ಮತ್ತು ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ರೂಪಿಸುವ ಕಾನೂನುಗಳನ್ನು ಜಾರಿಗೆ ಬರದಂತೆ ತಡೆಹಿಡಿಯುವುದನ್ನು ತಪ್ಪಿಸುವುದು ನಿಜವಾದ ಪ್ರಜಾತಾಂತ್ರಿಕ ನಡೆ. ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಬಹಳ ತಡ ಮಾಡಿದೆ ಎಂದಷ್ಟೇ ಜನರು ಯೋಚಿಸಬಹುದು. ಇಂದಿರಾ ಗಾಂಧಿಯವರ ಕಾಲದಿಂದಲೂ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳ ಮೇಲೆ ಕೇಂದ್ರವು ಗದಾಪ್ರಹಾರ ಮಾಡಿರುವ ಇತಿಹಾಸವಿರುವಾಗ ಸುಪ್ರೀಂಕೋರ್ಟ್ ನಿರ್ಧಾರವು ನಿಜಕ್ಕೂ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುವಂತಹದ್ದು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಹುಬ್ಬಳ್ಳಿ, ಮಂಗಳೂರು ಅತ್ಯಾಚಾರ ಪ್ರಕರಣ; ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು
ಧನಕರ್ ಅವರು ಈ ಮೊದಲು ಕೂಡ ಸುಪ್ರೀಂಕೋರ್ಟ್‌ನ ಮೇಲೆ ಹರಿಹಾಯ್ದದ್ದು ಇದೆ. ಜಗತ್ತಿನ ಎಲ್ಲಾ ಕಡೆ ಶಾಸಕಾಂಗಕ್ಕೆ ಪರಮಾಧಿಕಾರವಿದೆ, ಅದರ ಸಾರ್ವಭೌಮತೆಗೆ ನ್ಯಾಯಾಂಗ ಅಡ್ಡಬರಬಾರದು ಎಂಬುದು ಧನಕರ್ ವಾದ. ಆದರೆ ನಮ್ಮಲ್ಲಿ ಶಾಸಕಾಂಗಕ್ಕಿಂತ ಸಂವಿಧಾನದ ಆಶಯವೇ ಪ್ರಧಾನ. ಸಂವಿಧಾನದಲ್ಲಿ ತಿದ್ದುಪಡಿಗಳನ್ನು ತಂದರೂ, ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗುವಂತಿಲ್ಲ ಎನ್ನುತ್ತದೆ ಕೇಶವಾನಂದ ಭಾರತೀ ಪ್ರಕರಣ. ಇದನ್ನೂ ನಾವು ಗಮನಿಸಬೇಕಾಗುತ್ತದೆ.
ಇಂದಿರಾಗಾಂಧಿಯವರು ನ್ಯಾಯಾಂಗದ ವಿರುದ್ಧವಾಗಿ ನಡೆದುಕೊಂಡು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು ಎಂದು ಪ್ರಚಾರ ಮಾಡುವ ಬಿಜೆಪಿಯವರು, ಈಗ ನ್ಯಾಯಾಂಗ ಮಾಡಿದ ಮಹತ್ವದ ಸಾಂವಿಧಾನಿಕ ವಿಶ್ಲೇಷಣೆಯನ್ನು ವಿರೋಧಿಸುತ್ತಿರುವುದು ಏತಕ್ಕೆ? ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ, ಅದನ್ನು ವಿಶ್ಲೇಷಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ. ಈಗ ನೀಡಿರುವ ತೀರ್ಪಿನ ವಿರುದ್ಧ ಗದಾಪ್ರಹಾರ ಮಾಡುವಲ್ಲಿ, ರಾಜ್ಯಪಾಲ, ರಾಷ್ಟ್ರಪತಿ ಹುದ್ದೆಗಳ ಮೂಲಕ ರಾಜಕಾರಣ ಮಾಡುವ ಹಿತಾಸಕ್ತಿ ಗೋಚರಿಸುತ್ತದೆ. ಒಕ್ಕೂಟ ವ್ಯವಸ್ಥೆಯನ್ನು ಛಿದ್ರ ಮಾಡಿ, ಕೇಂದ್ರ ಸರ್ಕಾರವೇ ಎಲ್ಲದರ ಮೇಲೂ ಹಿಡಿತ ಹೊಂದಿರಬೇಕೆಂಬ ಮನಸ್ಥಿತಿ ಎದ್ದು ಕಾಣುತ್ತದೆ. ಮುಖ್ಯವಾಗಿ ಧನಕರ್ ಅವರು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸ್ಪೀಕರ್ ಆಗಿದ್ದಾರೆ. ತೀರ್ಪಿನ ವಿಚಾರದಲ್ಲಿ ಅವರು ತಟಸ್ಥತೆಯನ್ನು ಕಾಯ್ದುಕೊಳ್ಳಬೇಕಿತ್ತು ಎಂದು ಪ್ರತಿಪಕ್ಷಗಳ ನಾಯಕರು ಅಭಿಪ್ರಾಯಪಡುತ್ತಿರುವುದನ್ನು ಅವರು ಕೇಳಿಸಿಕೊಳ್ಳಬೇಕಾಗಿದೆ.
