ಚಾಮರಾಜನಗರ ಜಿಲ್ಲೆ,ಹನೂರು ಪಟ್ಟಣದಲ್ಲಿ ಪ್ರಬುದ್ಧ ಎಜುಕೇಶನಲ್ ಮತ್ತು ಚಾರಿಟೆಬಲ್ ಸೊಸೈಟಿ, ಜೇತವನ ಬುದ್ಧವಿಹಾರ ಭಾರತೀಯ ಬೌದ್ಧ ಮಹಾಸಭಾ, ಡಾ.ಬಿ.ಆರ್. ಅಂಬೇಡ್ಕರ್ ಸಂಘಗಳ ಒಕ್ಕೂಟಗಳ ವತಿಯಿಂದ ಬಿಹಾರದ ಬುದ್ಧಗಯಾ ವಿಹಾರವನ್ನು ಬೌದ್ಧರ ಸುಪರ್ಧಿಗೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನಾ ಜಾಥಾ ನಡೆಸಿದರು.
” ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬೇರೆ ದೇಶಗಳಿಗೆ ಹೋದಾಗ ನಾನು ಬುದ್ಧನ ದೇಶದಿಂದ ಬಂದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ‘ ಬಿಹಾರದ ಬುದ್ಧಗಯಾ ಮಹಾಬೋಧಿ ಮಹಾವಿಹಾರ ‘ ವನ್ನು ಸಂಪೂರ್ಣವಾಗಿ ಬೌದ್ಧರ ಸುರ್ಪದಿಗೆ ವಹಿಸಬೇಕೆಂದು ” ಜೇತವನ ಬುದ್ಧ ವಿಹಾರದ ಮನೋರಂಖಿತ ಬಂತೇಜಿ ಒತ್ತಾಯಿಸಿದರು.
” 1949 ರ ಈಬಿಟಿಎಂಸಿ (ಬುದ್ಧಿಸ್ಟ್ ಟೆಂಪಲ್ ಮ್ಯಾನೇಜೆಂಟ್ ಕಮಿಟಿ) ಕಾಯ್ದೆಯ ಪ್ರಕಾರ 4 ಜನ ಹಿಂದೂ ಪುರೋಹಿತ ಶಾಹಿಗಳು, 4 ಬೌದ್ಧ ಭಿಕ್ಕುಗಳು ಹಾಗೂ ಒಬ್ಬರು ಜಿಲ್ಲಾ ಅಧಿಕಾರಿಗಳು ಒಟ್ಟು ಒಂಭತ್ತು ಜನರ ಒಳಗೊಂಡ ಸಮಿತಿಯು ಇದನ್ನು ನಿರ್ವಹಿಸಿಕೊಂಡು ಬರುತ್ತಿದೆ. ಆದರೆ, ಇದರಲ್ಲಿ ಬೌದ್ಧರಿಗೆ ಅನ್ಯಾಯ ಆಗುತ್ತಿದೆ. ಈ ಸ್ಥಳದಲ್ಲಿ ಪುರೋಹಿತ ಶಾಹಿಗಳ ಪ್ರಾಬಲ್ಯ ಹೆಚ್ಚಾದಂತೆ ಬುದ್ಧನ ಪವಿತ್ರ ಸ್ಥಳ ನಾಶವಾಗುತ್ತಿದೆ. ಚರ್ಚ್‌ಗಳು ಕ್ರಿಶ್ಚಿಯನ್ನರ ಸುಪರ್ದಿಗೆ, ಮಸೀದಿಗಳು ಮುಸ್ಲಿಮರ ಸುಪರ್ದಿಗೆ, ಹಿಂದೂ ದೇವಸ್ಥಾನಗಳು ಪುರೋಹಿತರ ಸುಪರ್ದಿಗೆ ವಹಿಸಿದೆಯೋ ಹಾಗೆಯೇ ಬುದ್ಧಗಯಾ ಮಹಾಬೋಧಿ ಮಹಾವಿಹಾರವನ್ನು ಸಂಪೂರ್ಣ ಬೌದ್ಧರ ಸುಪರ್ದಿಗೆ ವಹಿಸಬೇಕು ” ಎಂದು ಆಗ್ರಹಿಸಿದ್ದಾರೆ.

ದಮ್ಮ ತಿಸ್ಸ ಬಂತೇಜಿ ಮಾತನಾಡಿ, ” ಭಗವಾನ್ ಬುದ್ಧರ ಭೋಧಿ ಪ್ರಾಪ್ತಿ ಪಡೆದ ಪವಿತ್ರ ಪುಣ್ಯ ಭೂಮಿಯಾದ ಬುದ್ದಗಯಾ ಮಹಾಬೋಧಿ ಮಹಾ ವಿಹಾರ ಮುಕ್ತಿಗಾಗಿ ಸುಮಾರು ಎರಡು ದಶಕಗಳಿಂದ ಬೌದ್ಧ ಬಿಕ್ಕುಗಳು ಮತ್ತು ಉಪಾಸಕರು ಒಡಗೂಡಿ ಹೋರಾಟಗಳು ನಡೆಯುತ್ತಿವೆ. ಈ ಹೋರಾಟದ ಉದ್ದೇಶವೆಂದರೆ ಬಿಹಾರ ರಾಜ್ಯದ ಬುದ್ಧಗಯಾ ಮಹಾಬೋಧಿ ಮಹಾ ವಿಹಾರವನ್ನು ಬೌದ್ಧರಿಗೆ ವಹಿಸಬೇಕು ಹಾಗೂ 1949 ರ ಈಬಿಟಿಎಂಸಿ ಕಾಯ್ದೆ ರದ್ದು ಪಡಿಸಬೇಕು ಎಂಬುದಾಗಿದೆ. ಪುರೋಹಿತ ಶಾಹಿಗಳು, ಅದರಲ್ಲೂ, ಬ್ರಾಹ್ಮಣರು 50 ಪೈಸೆ ಕುಂಕಮದ ತಿಲಕ, ದಾನವಾಗಿ ಬಂದ ಸೀರೆ ಸುತ್ತಿ ಬುದ್ಧರ ಮೂರ್ತಿ, ತತ್ವ ಸಿದ್ದಾಂತಗಳನ್ನು ವಿಕಾರಗೊಳಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ಬೌದ್ಧ ಸಿದ್ಧಾಂತವನ್ನು ಮತ್ತೊಮ್ಮೆ ದೇಶದಿಂದ ಹೊರ ಹಾಕುವ ಉನ್ನಾರ ನಡೆದಿದೆ.
ನಾವೇ ಬುದ್ಧರ ಪಂಚಶೀಲ ತೊಡಿಸಿರುವುದರಿಂದ ನಮ್ಮ ಜನತೆ ಶಾಂತವಾಗಿದ್ದಾರೆ. ಇತಿಹಾಸದ ಪುಟಗಳನ್ನು ಒಮ್ಮೆ ಅವಲೋಕಿಸಿ ನೋಡಿ ನಾವು ಉಗ್ರರೂಪ ತಾಳುವ ಮೊದಲೇ ರಾಜ್ಯ ಸರ್ಕಾರ ರೆವಲ್ಯೂಶನ್ ಮಾಡಿ ಕೇಂದ್ರಕ್ಕೆ ಕಳುಹಿಸಬೇಕು. ಕೇಂದ್ರ ಸರ್ಕಾರ ವಿಶ್ವಸಂಸ್ಥೆಯಿಂದ ಛೀ ಮಾರಿ ಹಾಕಿಸಿಕೊಳ್ಳುವ ಮೊದಲು ಈ ಬಗ್ಗೆ ಕ್ರಮವಹಿಸಬೇಕೆಂದು ” ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಮೆರವಣಿಗೆ ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ಮುಖ್ಯ ರಸ್ತೆಯಿಂದ ಸಾಗಿ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆ ಮುಖಾಂತರ ತೆರಳಿ ತಹಶೀಲ್ದಾರ್ ವೈ.ಕೆ. ಗುರುಪ್ರಸಾದ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ನಾಗೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ನಡೆ ಖಂಡಿಸಿದ ಬೌದ್ಧ ಬಿಕ್ಕುಗಳು ಪ್ರತಿಭಟನೆ ಮೆರವಣಿಗೆ ಬಗ್ಗೆ ಕಳೆದ ಒಂದು ವಾರದಿಂದಲೇ ಮಾಹಿತಿ ನೀಡಲಾಗಿತ್ತು. ಇಷ್ಟಿದ್ದರೂ ಕೂಡ ಅವರು ಬೌದ್ಧ ಬಿಕ್ಕುಗಳು, ದಲಿತ ಸಂಘಟನೆಗಳ ಬಗ್ಗೆ ತಾತ್ಸಾರ, ವಿರೋಧ ನೀತಿಯಿಂದ ಸಚಿವ ಸಂಪುಟ ಸಿದ್ಧತೆ ನೆಪ ಹೇಳಿ ಸ್ಥಳಕ್ಕೆ ಬಂದಿಲ್ಲ. ಅದೇ ಒಬ್ಬ ರಾಜಕಾರಣಿ, ಇತರೆ ಸಮುದಾಯದ ಮಠಾಧಿಪತಿಗಳು ಇದ್ದರೆ ಪ್ರತಿಭಟನೆ ಮತ್ತು ಹೋರಾಟ ನಡೆಸುತ್ತಿದ್ದರೆ ಬರುತ್ತಿರಲಿಲ್ಲವೇ? ಈ ದಲಿತ ವಿರೋಧಿ ನೀತಿ ಖಂಡನೀಯ ಮುಂದಿನ ದಿನಗಳಲ್ಲಿ ಈ ತಾರತಮ್ಯ ವಿರೋಧ ನೀತಿ ಅನುಸರಿಸಿದರೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಪ್ರತಿಭಟನಾಕರರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕುಡಿತಕ್ಕೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ

ಪ್ರತಿಭಟನೆಯಲ್ಲಿ ವಿಜ್ಞಾನಿ ಚನ್ನಕೇಶವ್, ಸಿದ್ದರಾಜು ದಲಿತ್, ಡಿಎಸ್ಎಸ್ ಮೈಸೂರು ವಿಭಾಗಿಯ ಸಂಚಾಲಕ ದೊಡ್ಡಿoದುವಾಡಿ ಸಿದ್ದರಾಜು, ಪ್ರಬುದ್ಧ ಎಜುಕೇಷನಲ್ ಮತ್ತು ಚಾರಿಟೆಬಲ್ ಸೊಸೈಟಿ, ಜೇತವನ ಬುದ್ಧವಿಹಾರ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ), ಮಹಿಳಾ ಸಂಘಗಳ ಒಕ್ಕೂಟ, ಭಾರತೀಯ ಬೌದ್ಧ ಮಹಾಸಭಾ, ಡಾ.ಬಿ.ಆರ್. ಅಂಬೇಡ್ಕರ್ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.