ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಅದಾದ ಬೆನ್ನಲ್ಲೇ ಅವರನ್ನು ಬಿಜೆಪಿಯಿಂದ ಹೊರಹಾಕಲಾಗಿದೆ.
ಬಿಜೆಪಿ ಮುಖಂಡ ಸುರೇಶ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 74 (ಮಹಿಳೆಯ ಮಾನಹಾನಿ ಮಾಡುವ ಉದ್ದೇಶದಿಂದ ಬಲವಂತ), ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಗಾಯತ್ರಿ ತಿವಾರಿ ಸೋಮವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾಗೆಯೇ ಸಂಪೂರ್ಣ ತನಿಖೆಯ ನಂತರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ | ಬಾಲಕಿ ಮೇಲೆ 64 ಕಾಮುಕರಿಂದ ಲೈಂಗಿಕ ದೌರ್ಜನ್ಯ
ಈ ನಡುವೆ ಬಿಜೆಪಿಯ ಸಿಧಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿರುವ ಸುರೇಶ್ ಸಿಂಗ್ ಅವರನ್ನು ಭಾನುವಾರ ರಾಜ್ಯ ಘಟಕದ ಮುಖ್ಯಸ್ಥ ವಿಡಿ ಶರ್ಮಾ ಅವರು ಹುದ್ದೆಯಿಂದ ತೆಗೆದುಹಾಕಿರುವುದಾಗಿ ಹೇಳಿದ್ದಾರೆ.
ಇನ್ನು ಸುರೇಶ್ ಸಿಂಗ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಇವೆಲ್ಲವೂ ಆರೋಪಗಳು ಎಂದಿದ್ದಾರೆ. ಪಕ್ಷದ ಸಹೋದ್ಯೋಗಿ ರಚಿಸಿರುವ ಪಿತೂರಿ. ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಸೇನೆಯಿಂದ ನಿವೃತ್ತರಾದ ನಂತರ ಕಳೆದ ಎರಡು ದಶಕಗಳಿಂದ ನಾನು ಪಕ್ಷಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಕ್ರಮ ಕೈಗೊಳ್ಳುವ ಮೊದಲು ಪಕ್ಷವು ನನ್ನಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಕೇಳಿಲ್ಲ. ತನಿಖೆಗೆ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ” ಎಂದು ತಿಳಿಸಿದ್ದಾರೆ.
