ಎಚ್.ಎನ್.ವ್ಯಾಲಿ ನೀರು ಜಿಲ್ಲೆಯ ದುರಂತ…ವ್ಯಾಲಿ ನೀರಿನಿಂದ ರೈತರ ಬೆಳೆಗೆ ಸರಿಯಾದ ಫಸಲು ಬರುತ್ತಿಲ್ಲ. ಜನ – ಜಾನುವಾರುಗಳು ಕಾಯಿಲೆಗೆ ತುತ್ತಾಗುತ್ತಿವೆ ಎಂದು ಶಿಡ್ಲಘಟ್ಟ ಶಾಸಕ ರವಿಕುಮಾರ್ ಆರೋಪಿಸಿದರು. ಇದಕ್ಕೆ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಈ ರೀತಿಯ ಹೇಳಿಕೆಗಳು ಸಲ್ಲದು ಎಂದು ಗುಡುಗಿದರು.
ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಎಚ್.ಎನ್.ವ್ಯಾಲಿ, ಕೆ.ಸಿ.ವ್ಯಾಲಿ ಯೋಜನೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ದೊಡ್ಡ ದುರಂತ. ಶಿಡ್ಲಘಟ್ಟ ತಾಲ್ಲೂಕಿನ ಸುಗುಟೂರು ಗ್ರಾಮದಲ್ಲಿ ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ನವ ವಿವಾಹಿತರಿಗೆ ಮಕ್ಕಳಾಗುತ್ತಿಲ್ಲ. ಎಚ್.ಎನ್.ವ್ಯಾಲಿ ನೀರಿನಿಂದ ಗಂಭೀರ ಸಮಸ್ಯೆಗಳಾಗುತ್ತಿವೆ. ರೈತರ ಬೆಳೆಗೆ ಸರಿಯಾದ ಫಸಲು ಬರುತ್ತಿಲ್ಲ. ಹಣ್ಣು ತರಕಾರಿಗಳು ವಿಷವಾಗುತ್ತಿವೆ ಎಂದು ಶಾಸಕ ರವಿಕುಮಾರ್ ಗಂಭೀರ ಆರೋಪ ಮಾಡಿದರು.

ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ನವ ವಿವಾಹಿತರಿಗೆ ಸಂತಾನ ಆಗದೇ ಇರುವುದಕ್ಕೆ ಎಚ್.ಎನ್.ವ್ಯಾಲಿ ನೀರು ಕಾರಣ ಅಲ್ಲ. ಇದು ಸಾಧ್ಯವೇ ಇಲ್ಲ. ಈ ರೀತಿ ಹೇಳಿದರೆ ಈ ಭಾಗಕ್ಕೆ ಹೆಣ್ಣು ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕೃಷಿ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಸುಗುಟೂರು ಭಾಗದ ಬೆಳೆ, ಜಾನುವಾರಗಳ ಕಾಯಿಲೆ ಇತ್ಯಾದಿ ಸ್ಯಾಂಪಲ್ ಗಳನ್ನು ಪಡೆದು ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಹವಾಮಾನಾಧಾರಿತ ಬೆಳೆಗಳಿಗೆ ಶೇ.12ರಷ್ಟು ಬೆಳೆ ವಿಮೆ ಮಾಡಿಸಲಾಗಿದೆ. ಕಳೆದ ತಿಂಗಳಲ್ಲಿ ಚಿಂತಾಮಣಿಯಲ್ಲಿ ಬಿದ್ದ ಮಳೆಯಿಂದ ಕೆಲ ರೈತರ ಬೆಳೆ ಹಾನಿಯಾಗಿತ್ತು. ಹಾನಿಗೊಳಗಾದ ರೈತರ ಬೆಳೆಗಳನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹಾಯಧನದಡಿ ಅಳವಡಿಸುವ ಹನಿನೀರಾವರಿ ಪೈಪ್ ಹಾಗೂ ಇತರೆ ಸಲಕರಣೆಗಳ ಗುಣಮಟ್ಟವನ್ನು ಪರಿಶೀಲಿಸಲು ಅಧಿಕಾರಿಗಳು ಕಂಪನಿ ಹೆಸರಿನ ಬದಲಿಗೆ ಕೋಡ್ ನೀಡಿ ಲ್ಯಾಬ್‌ಗೆ ಕಳಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ಕಂಪನಿಗಳ ಹೆಸರನ್ನು ಗೌಪ್ಯವಾಗಿಡಬೇಕು. ಇದರಿಂದ ಆಗುವ ಅನಾನುಕೂಲಗಳನ್ನು ತಪ್ಪಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗೆ ಸಲಹೆ ನೀಡಿದರು.
ರಸಗೊಬ್ಬರ, ಕೀಟನಾಶಕಗಳು ಮತ್ತು ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಮಳಿಗೆಗಳ ಮುಂಭಾಗದಲ್ಲಿ ದರಗಳ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರಂತರ ನಿಗಾ ಇಡಬೇಕು. ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ, ಲೇಬಲ್ ಇಲ್ಲದೆ ಹಾಗೂ ಬ್ಯಾನ್ ಮಾಡಿರುವ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಕಾನೂನು ಕ್ರಮ ಜರುಗಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಜಾವಿದಾ ನಸೀಮಾ ಖಾನಂ ಪ್ರತಿಕ್ರಿಯಿಸಿ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡುವ 10 ಅನಧಿಕೃತ ಮಳಿಗೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. MRP ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ 60 ಮಳಿಗೆಗಳ ಮಾಲೀಕರಿಗೆ ನೊಟೀಸ ನೀಡಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.

ಕೃಷಿ ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಯಗಳ ಸಹಕಾರ ಪಡೆದು 1000 ರೈತರಿಗೆ ಎರೆಹುಳು ಸಾಕಾಣಿಕೆಗೆ ಸಾಲ ನೀಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥರಿಗೆ ಸಚಿವರು ಸೂಚಿಸಿದರು.
ಕೃಷಿ ಹೋಂಡಗಳಿಗೆ ಬಿದ್ದು, ಸಾವನ್ನಪ್ಪಿರುವ ಘಟನೆಗಳು ಜಿಲ್ಲೆಯಲ್ಲಿ ಜರುಗಿವೆ. ಇನ್ನುಮುಂದೆ ಇಂತಹ ಘಟನೆಗಳು ಜರುಗದಂತೆ ಕೃಷಿ ಹೋಂಡಗಳಿಗೆ ತಂತಿ ಬೇಲಿ ನಿರ್ಮಿಸಲು ರೈತರನ್ನು ಪ್ರೆರೇಪಿಸಬೇಕು. ಈ ಸಂಬಂಧ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕೃ಼ಷಿ ಹೋಂಡಗಳಿಗೆ ಬಿದ್ದು, ಪ್ರಾಣ ಕಳೆದುಕೊಂಡಿರುವವರಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಮಣ್ಣಿನ ಪರೀಕ್ಷೆ ವಿಚಾರವಾಗಿ ಸರಿಯಾದ ಮಾಹಿತಿ ಕೊಡದ ಕೃಷಿ ಇಲಾಖೆ ಅಧಿಕಾರಿ ವಿರುದ್ಧ ಸಚಿವರು ಗರಂ ಆದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಬರಬೇಕು ಎಂದು ಖಡಕ್ ಸೂಚನೆ ನೀಡಿದರು.
ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಿರ್ಮಿಸಲು ಸದ್ಯದಲ್ಲೆ ಶಂಕುಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಮೇ ತಿಂಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳ ದಿನಾಂಕ ಪಡೆದು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾತನಾಡಿ, ಬಾಗೇಪಲ್ಲಿಯ ಒಂದೇ ಪಂಚಾಯಿತಿಯಲ್ಲಿ ಸಾಕಷ್ಟ ರೈತರಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ. ಒಬ್ಬೊಬ್ಬರಿಗೂ ಒಂದೊಂದು ರೀತಿ ಪರಿಹಾರ ಬರುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿ ತಾಂತ್ರಿಕ ದೋಷದ ಕಾರಣ ಈ ರೀತಿ ಆಗಿರಬಹುದು. ಶೀಘ್ರ ಪರಿಹರಿಸಲಾಗುವುದು ಎಂದು ಹೇಳಿದರು.
ದೇಸಿ ತಳಿ ಹಸುಗಳ ಸಂಖ್ಯೆ ಕ್ಷೀಣ :
ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಅಧಿಕಾರಿ ಮಾತನಾಡಿ, ಸೀಮೆ ಹಸುಗಳ ಸಂಖ್ಯೆ ಹೆಚ್ಚಾಗಿರವುದರಿಂದ ದೇಸಿ ತಳಿ ಹಸುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ನಾಟಿ ಹಸುಗಳು ಕಣ್ಮರೆಯಾಗುತ್ತಿವೆ. ಕುರಿಗಳ ಸಂಖ್ಯೆಯಲ್ಲಿ 8-10ಲಕ್ಷ ಏರಿಕೆಯಾಗಿದೆ. ಕೋಳಿಗಳ ಸಂಖ್ಯೆಯಲ್ಲಿ ಮೂರು ಪಟ್ಟು ಏರಿಕೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ಸಂವಿಧಾನವೇ ಸಾರ್ವಭೌಮ’ ಎನ್ನುವ ಸತ್ಯ ಮರೆತರೇ ಧನಕರ್?
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಂ.ಮಲ್ಲೇಶ್ ಬಾಬು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪವಿಭಾಗಧಿಕಾರಿ ಡಿ.ಹೆಚ್. ಅಶ್ವಿನ್, ಉಪ ಕಾರ್ಯದರ್ಶಿ ಅತಿಕ್ ಪಾಷ, ಮುಖ್ಯ ಯೋಜನಾಧಿಕಾರಿ ಎಸ್.ವೈ.ಬಸವರಾಜಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.