ಹೆಸರಾಂತ ಕ್ರಿಕೆಟ್ ವೀಕ್ಷಕ ವಿವರಣೆಕಾರರಾದ ಹರ್ಷ ಭೋಗ್ಲೆ ಮತ್ತು ಸೈಮನ್ ಡೌಲ್ ಅವರನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಪಂದ್ಯಗಳ ಕುರಿತು ವ್ಯಾಖ್ಯಾನಕಾರರಾಗಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಲಾಗಿದೆ.
ಇವರಿಬ್ಬರನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಪಂದ್ಯಗಳ ಕುರಿತು ವ್ಯಾಖ್ಯಾನಕಾರರಾಗಿ ಕಾರ್ಯನಿರ್ವಹಿಸುವುದನ್ನು ನಿಷೇಧಿಸಿ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಪತ್ರ ಬರೆದಿತ್ತು. ಕುತೂಹಲ ಸಂಗತಿ ಎಂದರೆ ಸೋಮವಾರ ನಡೆದ ಕೆಕೆಆರ್ ಹಾಗೂ ಗುಜರಾತ್ ಟೈಟಾನ್ಸ್ ಪಂದ್ಯದಲ್ಲಿ ಇವರಿಬ್ಬರು ವೀಕ್ಷಕ ವಿವರಣೆಕಾರರಾಗಿ ಕಾಣಿಸಿಕೊಂಡಿರಲಿಲ್ಲ.
ಫ್ರಾಂಚೈಸಿಯ ಬೇಡಿಕೆಗಳಿಗೆ ಅನುಗುಣವಾಗಿ ಪಿಚ್‌ಗಳನ್ನು ಸಿದ್ಧಪಡಿಸುವಲ್ಲಿ ತವರು ಕ್ಯುರೇಟರ್ ಸಹಕಾರ ನೀಡುತ್ತಿಲ್ಲ ಎಂದು ಡೌಲ್ ಮತ್ತು ಹರ್ಷ ಭೋಗ್ಲೆ ಟೀಕಿಸಿದ ನಂತರ ಸಿಎಬಿ ಈ ಮನವಿ ಮಾಡಿತ್ತು. ಕೆಕೆಆರ್ ತಂಡಕ್ಕೆ ಬೇಕಾದ ಪಿಚ್ ತಯಾರಿಸಲು ಕ್ಯುರೇಟರ್ ಸಹಾಯ ಮಾಡದಿದ್ದರೆ, ತಂಡವು ಬೇರೆಡೆಗೆ ಸ್ಥಳಾಂತರಗೊಳ್ಳಬೇಕು ಎಂದು ಸೈಮನ್ ಡೌಲ್ ಸಲಹೆ ನೀಡಿದ್ದರು. ಹರ್ಷ ಭೋಗ್ಲೆ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರಿಂದ ಕೆರಳಿದ ಸಿಎಬಿ, ಈ ಇಬ್ಬರು ವ್ಯಾಖ್ಯಾನಕಾರರನ್ನು ಈಡನ್ ಗಾರ್ಡನ್ಸ್‌ನಲ್ಲಿ ಕಮೆಂಟರಿ ಮಾಡದಂತೆ ನಿಷೇಧಿಸಲು ಬಿಸಿಸಿಐಗೆ ಪತ್ರ ಬರೆಯಲಾಗಿತ್ತು.
ಬಂಗಾಳ ಕ್ರಿಕೆಟ್ ಸಂಸ್ಥೆ, ಬಿಸಿಸಿಐಗೆ ಪತ್ರ ಬರೆದು, ಹರ್ಷ ಭೋಗ್ಲೆ ಮತ್ತು ಸೈಮನ್ ಡೌಲ್ ಅವರನ್ನು ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಯಾವುದೇ ಪಂದ್ಯಗಳಿಗೆ ವ್ಯಾಖ್ಯಾನಕಾರರಾಗಿ ಬರದಂತೆ ತಡೆಯಲು ಒತ್ತಾಯಿಸಿತ್ತು.
ಈ ಸುದ್ದಿ ಓದಿದ್ದೀರಾ? ಐಪಿಎಲ್‌ನಲ್ಲಿ ಮೋಸದಾಟದ ಘಾಟು: ಫ್ರಾಂಚೈಸಿ ತಂಡಗಳು, ಆಟಗಾರರಿಗೆ ಬಿಸಿಸಿಐ ಖಡಕ್ ಎಚ್ಚರಿಕೆ
ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಸೈಮನ್ ಡೌಲ್ ‘ತಂಡದ ಮಾಲೀಕರು ಕ್ಯುರೇಟರ್‌ಗೆ ಹಣ ನೀಡುತ್ತಾರೆ. ಆದರೂ, ಅವರು ತಂಡಕ್ಕೆ ಬೇಕಾದ ಪಿಚ್ ತಯಾರಿಸದಿದ್ದರೆ, ಕೆಕೆಆರ್ ಬೇರೆಡೆಗೆ ಹೋಗುವುದು ಉತ್ತಮʼ ಎಂದು ಹೇಳಿದ್ದರು. ಅಂದರೆ, ‘ಕ್ಯುರೇಟರ್, ಆತಿಥೇಯ ತಂಡದ ಮಾತನ್ನು ಕೇಳದಿದ್ದರೆ, ಅವರು ಕ್ರೀಡಾಂಗಣದ ಶುಲ್ಕವನ್ನು ಪಾವತಿಸುತ್ತಾರೆ. ಐಪಿಎಲ್‌ನಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಹಣ ನೀಡುತ್ತಾರೆ. ಆದರೂ ಅವರು ಆತಿಥೇಯ ತಂಡದ ಮಾತನ್ನು ಕೇಳದಿದ್ದರೆ, ಫ್ರಾಂಚೈಸ್ ಅನ್ನು ಬೇರೆಡೆಗೆ ಸ್ಥಳಾಂತರಿಸಿ. ಆಟದ ಬಗ್ಗೆ ಅಭಿಪ್ರಾಯ ಹೇಳುವುದು ಅವರ ಕೆಲಸವಲ್ಲ. ಅದಕ್ಕಾಗಿ ಅವರಿಗೆ ಹಣ ನೀಡಲಾಗುವುದಿಲ್ಲʼ ಎಂದು ಡೌಲ್ ಅಭಿಪ್ರಾಯಪಟ್ಟಿದ್ದರು.
ಹರ್ಷ ಭೋಗ್ಲೆ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದರು. ‘ತಮ್ಮ ಬೌಲರ್‌ಗಳಿಗೆ ಸೂಕ್ತವಾದ ಪಿಚ್ ಅನ್ನು ಆತಿಥೇಯ ತಂಡವು ಪಡೆಯಬೇಕು. ಅವರು ಮನೆಯಲ್ಲಿ (ತವರು ಮೈದಾನ) ಆಡುತ್ತಿದ್ದರೆ, ಅವರ ಬೌಲರ್‌ಗಳಿಗೆ ಸೂಕ್ತವೆಂದು ಅವರು ಭಾವಿಸುವ ಪಿಚ್‌ಗಳನ್ನು ಪಡೆಯಬೇಕು. ಕೆಕೆಆರ್ ಕ್ಯುರೇಟರ್ ಹೇಳಿದ್ದರ ಬಗ್ಗೆ ನಾನು ನೋಡಿದೆʼ ಎಂದು ಭೋಗ್ಲೆ ಹೇಳಿದ್ದರು.
ಆದರೆ, ಸಿಎಬಿ ಕ್ಯುರೇಟರ್ ಮುಖರ್ಜಿ ಅವರ ಪರವಾಗಿ ನಿಂತಿದೆ. ‘ಅವರು ಯಾವುದೇ ತಪ್ಪು ಮಾಡಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರವೇ ಅವರು ಪಿಚ್ ತಯಾರಿಸುತ್ತಿದ್ದಾರೆ. ಯಾವುದೇ ಫ್ರಾಂಚೈಸಿ, ಪಿಚ್ ಹೇಗೆ ತಯಾರಾಗಬೇಕು ಎಂದು ಹೇಳಲು ಸಾಧ್ಯವಿಲ್ಲʼ ಎಂಬುದು ಬಿಸಿಸಿಐ ನಿಯಮ. ಕ್ಯುರೇಟರ್ ವಿಕೆಟ್ ಅನ್ನು ಹೇಗೆ ತಯಾರಿಸಬೇಕೆಂಬ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆ ಎಂದು ಸಿಎಬಿ ಅಭಿಪ್ರಾಯಪಟ್ಟಿದೆ.
ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ಸ್ಪಿನ್ ಬೌಲಿಂಗ್‌ಗೆ ನೆರವಾಗುವ ಪಿಚ್ ತಯಾರಿಸಲು ಮುಖರ್ಜಿ ಅವರನ್ನು ಕೇಳಿದ್ದರು. ಇದರಿಂದ ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಅವರಂತಹ ಸ್ಪಿನ್ನರ್‌ಗಳಿಗೆ ಅನುಕೂಲವಾಗುತ್ತದೆ ಎಂಬುದು ಅವರ ಆಶಯವಾಗಿತ್ತು. ಆದರೆ, ಪಿಚ್ ವೇಗದ ಬೌಲಿಂಗ್‌ಗೆ ಹೆಚ್ಚು ನೆರವಾಗುವಂತೆ ತಯಾರಿಸಲಾಗಿತ್ತು. ಇದರಿಂದ ಹೆಚ್ಚು ರನ್ ಗಳಿಸುವ ಪಂದ್ಯಗಳು ನಡೆದವು. ಈ ಬಗ್ಗೆ ನಾಯಕ ಅಜಿಂಕ್ಯಾ ರಹಾನೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.
