ಮೈಸೂರಿನಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿಯವರೊಂದಿಗೆ ಸಭೆ ನಡೆಸಿ ಮಾತನಾಡಿದ ಹುಣಸೂರು ಶಾಸಕ ಜಿ. ಡಿ. ಹರೀಶ್ ಗೌಡ ಬಿ ಖಾತಾ ಆಂದೋಲನ ಅರಂಭವಾದ ನಂತರ ಮೈಸೂರು ಜಿಲ್ಲೆಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ೬ ವರ್ಷಗಳ ದುಪ್ಪಟ್ಟು ಕಂದಾಯ ವಸೂಲಾತಿಗೆ ಜಿಲ್ಲಾಧಿಕಾರಿಗಳು ಮೌಖಿಕ ಆದೇಶ ಹೊರಡಿಸಿದ್ದರು. ಈ ಕುರಿತು ಹುಣಸೂರು ನಗರದ ನಾಗರಿಕರು ಮತ್ತು ಜನಪ್ರತಿನಿಧಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ಬಳಿ ಈ ಬಗ್ಗೆ ದೂರುಗಳು ಬಂದಿದ್ದವು. ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ತಿಳಿಸಿದ್ದೆ.
ಅದರಂತೆ, ಸೋಮವಾರ ಜಿಲ್ಲಾಧಿಕಾರಿಗಳು ಸಮಯ ನಿಗದಿ ಮಾಡಿದ್ದರಿಂದ ಹುಣಸೂರು ನಗರಸಭೆಯ ಕೌನ್ಸಿಲರ್ ಗಳು ಮತ್ತು ನಾಗರೀಕರನ್ನೊಳಗೊಂಡು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಲಾಯಿತು.
ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪ್ರಸ್ತುತ ವರ್ಷದ ಕಂದಾಯವನ್ನು ಮಾತ್ರ ದುಪ್ಪಟ್ಟು ಪ್ರಮಾಣದಲ್ಲಿ ವಸೂಲಾತಿ ಮಾಡಲು ಮತ್ತು ೬ ವರ್ಷಗಳ ದುಪ್ಪಟ್ಟು ಕಂದಾಯವನ್ನು ರದ್ದುಗೊಳಿಸಲು ಕ್ರಮವಹಿಸಿ ಇನ್ನೆರೆಡು ದಿನಗಳಲ್ಲಿ ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಚೆಟ್ಟಳ್ಳಿಯಲ್ಲಿ ಮರಬಿದ್ದು ಕಾರ್ಮಿಕ ಸಾವು
ಭೇಟಿಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಗಣೇಶ್, ಕುಮಾರಸ್ವಾಮಿ, ಸತೀಶ್ ಕುಮಾರ್, ಮಾಲಿಕ್ ಪಾಷಾ, ರಾಣಿ ಪೆರುಮಾಳ್, ಶ್ರೀನಾಥ್, ದೇವನಾಯ್ಕ, ಮುಖಂಡ ನಿಂಗರಾಜು ಇದ್ದರು.