ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬೆಣಚಗೆರೆಯಲ್ಲಿ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಹನ್ನೆರಡನೇಯ ಶತಮಾನದ ಹೊಯ್ಸಳರ ಕಾಲದ ಶಾಸನವೊಂದು ದೊರೆತಿದೆ. ಇಲ್ಲಿನ ಅಗ್ರಹಾರ (ಬೆಣಚಗೆರೆ) ಗ್ರಾಮವನ್ನು ಇಲ್ಲಿನ ಬ್ರಾಹ್ಮಣರಿಗೆ ಮತ್ತು ಇಲ್ಲಿನ ಬ್ರಹ್ಮೇಶ್ವರ ದೇವಸ್ಥಾನಕ್ಕೆ ಬೊಮ್ಮಲಾದೇವಿ ದಾನ ನೀಡಿದ ಕುರಿತು ಶಾಸನ ಹೇಳುತ್ತದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
“ಹೊಯ್ಸಳರ ಅರಸ ವಿಷ್ಟುವರ್ಧನನ ಕೊನೆಯ ಪಟ್ಟದ ರಾಣಿ ಬೊಮ್ಮಲಾದೇವಿಯು ದಾನ ನೀಡಿದ ಕುರಿತು ಶಾಸನದಲ್ಲಿದೆ. ರಾಣಿ ಬೊಮ್ಮಲಾದೇವಿಯು ಶಾಂತಲೆಯ ನಂತರದ ಪಟ್ಟದ ರಾಣಿಯಾಗಿದ್ದು, ವಿಷ್ಟುವರ್ಧನ ತನ್ನ ಕೊನೆಯ ದಿನಗಳನ್ನು ಬೊಮ್ಮಲಾದೇವಿಯೊಂದಿಗೆ ಹಾನುಂಗಲ್ (ಇಂದಿನ ಹಾನಗಲ್) ಪ್ರದೇಶದಲ್ಲಿ ನೆಲೆಗೊಂಡಿದ್ದನು” ಎಂದು ಇತಿಹಾಸ ಉಪನ್ಯಾಸಕ ಎ ಜಿ ಶ್ರೀನಿವಾಸ್ ಹೇಳಿದರು.
“ಶಾಸನದ ತುದಿಯಲ್ಲಿ ಸೂರ್ಯ ಚಂದ್ರ ಅದರ ಕೆಳಭಾಗದಲ್ಲಿ ನಂದಿ, ಶಿವಲಿಂಗ, ಪಕ್ಕದಲ್ಲಿ ಪೂಜಿಸುವ ಯತಿ ಕೆತ್ತಲಾಗಿದೆ. ನಂದಿಯ ಮೇಲೆ ಚಾಕುವಿನ ಗುರುತಿದೆ. ಇದರಲ್ಲಿ, ನಂದಿ ಮತ್ತು ಶಿವಲಿಂಗ ಕೆತ್ತನೆಯು ಶೈವಧರ್ಮದ ಸೂಚಕವಾಗಿದ್ದು, ಈ ದಾನವು ಸೂರ್ಯ ಚಂದ್ರರು ಇರುವವರೆಗೂ ಶಾಶ್ವತವಾಗಿರಲೆಂದು ಇದರಲ್ಲಿನ ಸೂರ್ಯ, ಚಂದ್ರ ಕೆತ್ತನೆಗಳು ಸೂಚಿಸುತ್ತವೆ.
ಚೋಳರು ಮತ್ತು ಗಂಗರನ್ನು ಸೋಲಿಸಿ ಈ ಭಾಗದಲ್ಲಿ ಅವರಿಂದ ವಶಪಡಿಸಿಕೊಂಡ ಪ್ರದೇಶಗಳ ಉಲ್ಲೇಖವೂ ಇದೆ.”
“ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿತ್ತು. ಬೆಣಚಗೆರೆ ಗ್ರಾಮದ ರೈತ ಕಾಂತರಾಜು ಅವರು ತಮ್ನ ತೋಟದಲ್ಲಿ ಬದು ನಿರ್ಮಾಣ ಮಾಡುವ ಸಂದರ್ಭದಲ್ಲಿ ಶಾಸನ ಪತ್ತೆಯಾಗಿದೆ. ಸ್ಥಳಕ್ಕೆ ನಿವೃತ್ತ ಕನ್ನಡ ಉಪನ್ಯಾಸಕ ಸಂಗಪ್ಪ, ನಿವೃತ್ತ ಸೈನ್ಯಾಧಿಕಾರಿ ರಾಜಶೇಖರ್ ಶಶಿಭೂಷಣ್, ಸಂಗಮೇಶ್ವರ ಸ್ವಾಮಿ, ಸಂಗಪ್ಪ, ರಘು ಸೇರಿದಂತೆ ಗ್ರಾಮಸ್ಥರ ನೆರವಿನಿಂದ ಶಾಸನವನ್ನು ರಕ್ಷಿಸಿಡಲಾಗಿದೆ. ಒಂದು ಗ್ರಾಮದ ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸುತ್ತವೆ. ಕರ್ನಾಟಕದಲ್ಲಿ ದಾನ ಶಾಸನಗಳೇ ಹೆಚ್ಚಾಗಿದ್ದು, ಇಲ್ಲಿನ ಶಾಸನ ದಾನ ಶಾಸನವಾಗಿದ್ದು ಅನೇಕ ವಿಶೇಷಗಳಿಗೆ ಸಾಕ್ಷಿಯಾಗಿದೆ” ಎಂದು ಇತಿಹಾಸ ಉಪನ್ಯಾಸಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ವರದಿ: ಲಕ್ಷ್ಮೀಕಾಂತರಾಜು ಎಂ ಜಿ