ಭಾರತ ದೇಶಕ್ಕೆ ಅಮೆರಿಕ ದೇಶದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಭೇಟಿ ನೀಡಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಸಿದೆ. ರಾಯಚೂರು ಜಾಲಹಳ್ಳಿ ಘಟಕ ವತಿಯಿಂದ ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಮೂಲಕ ಭಾರತ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿ, ವ್ಯಾನ್ಸ್ ಅವರ ಭೇಟಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ.
ಕೆಪಿಆರ್ಎಸ್ ರಾಯಚೂರು ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ ಮಾತನಾಡಿ, “ಭಾರತವು ಮಾರಾಟಕ್ಕಿಲ್ಲ ಎಂಬ ಬಲವಾದ ಸಂದೇಶ ರವಾನಿಸಲು, ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ಮೂಲಕ ಭಾರತದ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆ ಯನ್ನು ಆಮೇರಿಕಾ ದೇಶದ ಉತ್ಪನ್ನಗಳಿಗೆ ಸುಂಕ ರಹಿತವಾಗಿ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದೆ” ಎಂದು ಆರೋಪಿಸಿದರು.
ಈ ಬೆನ್ನಲ್ಲೇ ಅಮೇರಿಕಾ ಉಪಾಧ್ಯಕ್ಷ ಭೇಟಿ ಮತ್ತು ವಾಣಿಜ್ಯ ಮಾತುಕತೆ ಭಾರತದ ಕೋಟ್ಯಾಂತರ ರೈತಾಪಿ ಸಮುದಾಯಕ್ಕೆ ಮರಣ ಶಾಸನವಾಗಲಿದೆ, ಆದ್ದರಿಂದ ಈ ಭೇಟಿ ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಟ್ರಂಪ್ -ವಾನ್ಸ್ ಪ್ರತಿಕೃತಿ ದಹಿಸಿ ತೀವ್ರ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆರೆಯಲ್ಲಿ ಬಿದ್ದು 10 ವರ್ಷದ ಬಾಲಕ ಸಾವು
ಇಂತಹ ಸಂದರ್ಭದಲ್ಲಿ ಈ ವಲಯಗಳು ಸೇರಿದಂತೆ ವಿವಿಧ ರೀತಿಯ ತೋಟಾಗಾರಿಕೆ ಉತ್ಪನ್ನಗಳ ಸುಂಕ ರಹಿತ ಅಮದು ಈ ಎಲ್ಲಾ ರೈತರನ್ನು ಸಂಪೂರ್ಣವಾಗಿ ದಿವಾಳಿಯೆಬ್ಬಿಸಿ ರಾಜ್ಯದ ರೈತರನ್ನು ನಿರುದ್ಯೋಗ-ಸಾಲಭಾಧೆಗೆ ಸಿಲುಕಿಸಲಿದೆ. ವಿಶೇಷವಾಗಿ ರಾಜ್ಯದ ಹೈನುಗಾರಿಕೆಗೆ ಮತ್ತು ಕರ್ನಾಟಕ ಹಾಲು ಒಕ್ಕೂಟ (KMF) ಕ್ಕೆ ಈ ಅಮದು ಸುಂಕ ನಿರ್ಧಾರ ಶವಪಟ್ಟಿಗೆಗೆ ಹೊಡೆಯುವ ಕೊನೆ ಮೊಳೆ ಆಗಲಿದೆ ಹಾಗಾಗಿ ಯಾವುದೇ ಒತ್ತಡಕ್ಕೂ ಮಣಿಯದೇ ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ ಸೇರಿದಂತೆ ಒಟ್ಟಾರೆ ಕೃಷಿಯನ್ನು ವಾಣಿಜ್ಯ ಮಾತುಕತೆಗಳಿಂದ ಹೊರಗಿಡಬೇಕು ಎಂದು ನರೇಂದ್ರ ಮೋದಿ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಗೋವಿಂದರಾಜ, ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷ ದುರ್ಗಪ್ಪ ವರಟಿ, ಕಾರ್ಯದರ್ಶಿ ರಂಗನಾಥ ಬುಂಕಲದೊಡ್ಡಿ, ಶಬ್ಬೀರ್ ಜಾಲಹಳ್ಳಿ , ಗ್ರಾಮ ಪಂಚಾಯಿತಿ ಸದಸ್ಯರಾದ ಮಕ್ತುಂಪಾಷಾ, ಬಸವರಾಜ ವಂದಲಿ, ಹನುಮಂತ, ರಿಯಾಜ್ ಖುರೇಷಿ, ಸೇರಿದಂತೆ ಇತರರು ಇದ್ದರು.
