ದಕ್ಷಿಣ ಭಾರತದ ಭಾಷೆಯ ಸಿನಿಮಾಗಳಲ್ಲಿ ಪ್ರತಿಭಾನ್ವಿತನಾಗಿರುವ ಕನ್ನಡಿಗ ನಟ ಕಿಶೋರ್. ಚಿತ್ರರಂಗ ಮಾತ್ರವಲ್ಲದೆ ಸಮಾಜದ ಅವ್ಯವಸ್ಥೆಯ ವಿರುದ್ಧವೂ ಆಗಾಗ ಸಿಡಿದೆದ್ದು ಪ್ರತಿರೋಧ ತೋರಿಸುತ್ತಲೆ ಇರುತ್ತಾರೆ. ಅವರು ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯ.
ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಾಗೂ ಬಹಿರಂಗವಾಗಿ ದಾಖಲಿಸುತಿರುತ್ತಾರೆ. ಕೇಂದ್ರ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ಹೆಚ್ಚು ಟೀಕಿಸುವ ಕಾರಣದಿಂದಲೇ ಕೆಲವು ತಿಂಗಳ ಹಿಂದೆ ಅವರ ಟ್ವಿಟರ್ ಅಕೌಂಟ್ಅನ್ನು ಅಮಾನತುಗೊಳಿಸಲಾಗಿತ್ತು. ಆದರೂ ಕಿಶೋರ್ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವುದನ್ನು ನಿಲ್ಲಿಸಿರಲಿಲ್ಲ.
ಇದೀಗ ಕಿಶೋರ್ ಅವರು ಮಣಿಪುರ ಹಿಂಸಾಚಾರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇದು ಸ್ಟೇಷನ್ ಮಾಸ್ಟರ್ ಮಾಡುವ ಕೆಲಸ; ಪ್ರಧಾನಿಯ ವಂದೇ ಭಾರತ್ ಉದ್ಘಾಟನೆ ಛೇಡಿಸಿದ ಪ್ರಕಾಶ್ ರೈ
”ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್. ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು? ನೂರ ನಲವತ್ತು ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದಲ್ಲಿ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002 ರಲ್ಲಿ ಗುಜರಾತ್, 2023 ರಲ್ಲಿ ಮಣಿಪುರ .. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ. ಇತಿಹಾಸಕ್ಕೆ ಮರೆವಿಲ್ಲ ನೆನಪಿರಲಿ” ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಮಣಿಪುರ ಹಿಂಸಾಚಾರದ ಬಗ್ಗೆ ಬರೆದುಕೊಂಡಿದ್ದ ಕಿಶೋರ್, ”ಒಂದು ಕರೆಯಲ್ಲಿ ಉಕ್ರೇನ್ ಯುದ್ಧ ನಿಲ್ಲಿಸಿದವೆಂದು ಬಡಾಯಿ ಕೊಚ್ಚುವ ಜನ, ಮಣಿಪುರವನ್ನು ತಿಂಗಳಿಂದ ಹೊತ್ತಿ ಉರಿಯಲು ಬಿಟ್ಟದ್ದೇಕೆ. ಲಾಭ ಲಾಭ ಲಾಭ, ಎಲ್ಲದರಲ್ಲೂ ಲಾಭ. ಪಾಪದ ಜನರ ಸಾವಿನಲ್ಲೂ ಲಾಭದ ಧಂದೆ ಮಾಡುವ ವ್ಯಾಪಾರಿಯ ಕೈಗೆ ದೇಶ ಕೊಟ್ಟಂತಾಯ್ತು. ಜನ ಸಾಯುತ್ತಲೇ ಇರಲಿ ಗುಜರಾತಿನಲ್ಲೊ, ಪುಲ್ವಾಮದಲ್ಲೊ, ಒಡಿಶಾದಲ್ಲೊ, ಮಣಿಪುರದಲ್ಲೊ, ದೇಶದ ಮೂಲೆ ಮೂಲೆಯಲ್ಲಿ ಹಿಂಸೆಯ ರೋಗವನ್ನು ಹರಡಿ ಲಾಭ ಹೆಕ್ಕುತ್ತಲೇ ಇರುತ್ತಾರೆ ದ್ವೇಷದ ವ್ಯಾಪಾರಿಗಳು, ಯಾರೂ ಪ್ರಶ್ನಿಸಬೇಡಿ .. ಪತ್ರಿಕೆಯಾದರೂ ಸರಿ ಟ್ವಿಟರ್ನಲ್ಲಾದರೂ ಸರಿ, ತುಮ್ ಬಸ್ ಚುಪ್ ರಹೋ ಯೇ ಉನ್ ಕೀ ಮನ್ ಕೀ ಬಾತ್ ಹೈ” ಎಂದು ಮಾಧ್ಯಮಗಳ ವಿರುದ್ಧವು ಆಕ್ರೋಶ ಹೊರ ಹಾಕಿದ್ದರು.