ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ ಎ ಓದುತ್ತಿರುವ ದಲಿತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ವಿದ್ಯಾರ್ಥಿನಿ ದೂರು ನೀಡಿದರೂ ವಿಶ್ವವಿದ್ಯಾಲಯದ ಆಡಳಿತ ವರ್ಗ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಡಾ. ಪಿ ನಂದಕುಮಾರ್ ಆರೋಪಿಸಿದ್ದಾರೆ.
“ವಿಶ್ವವಿದ್ಯಾಲಯದ ಒಳಗೆ ಆಂಧ್ರಪ್ರದೇಶದ ಆದಿಕೇಶವಲು ಎಂಬ ಬಿಜೆಪಿ ಮುಖಂಡನಿಗೆ ಕ್ಯಾಂಟಿನ್ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಈತ ವಿದ್ಯಾರ್ಥಿನಿಯನ್ನು ಪ್ರತ್ಯೇಕ ಕೋಣೆಗೆ ಕರೆದು, ʼನಿನ್ನನ್ನು ನೋಡಿದರೆ ಮೂಡ್ ಬರುತ್ತೆʼ ಎಂಬ ಅಸಭ್ಯ ಮಾತುಗಳನ್ನು ಆಡುತ್ತ ಕೆನ್ನೆಗೆ ಮತ್ತು ಕುತ್ತಿಗೆಗೆ ಮುತ್ತು ಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ” ಎಂದರು.
“ಈ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವಿದ್ಯಾರ್ಥಿನಿ ಸ್ವತಃ ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ ಕುಬಕಡ್ಡಿಯವರಿಗೆ ದೂರು ಕೂಡ ನೀಡಿದ್ದಾಳೆ. ಆದರೆ ವಿಶ್ವವಿದ್ಯಾಲಯದ ಆಡಳಿತ ವರ್ಗ ಈವರೆಗೂ ಈ ವ್ಯಕ್ತಿಯ ಮೇಲೆ ಪೊಲೀಸ್ ಪ್ರಕರಣ ದಾಖಲಿಸುವುದಾಗಲಿ, ಟೆಂಡರ್ ರದ್ದುಗೊಳಿಸುವುದಾಗಲಿ ಯಾವುದೇ ರೀತಿಯ ಕ್ರಮ ಜರುಗಿಸದೆ, ಈತನ ದುಷ್ಕೃತ್ಯಗಳನ್ನು ಪ್ರಚೋದಿಸುತ್ತಿರುವ ಆಡಳಿತ ವರ್ಗ ವಿದ್ಯಾರ್ಥಿನಿಗೆ ಬೆದರಿಕೆ ಒಡ್ಡಿ ಭಯದ ವಾತಾವರಣ ಸೃಷ್ಟಿಸಿದ್ದಾರೆ” ಎಂದು ದೂರಿದರು.

“ಮಹಿಳಾ ಆಯೋಗ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿನಿಗೆ ಭದ್ರತೆಯ ಜತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು” ಎಂದು ಡಾ. ಪಿ ನಂದಕುಮಾರ್ ಆಗ್ರಹಿಸಿದ್ದಾರೆ.
ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಪುಂಕಾನುಪುಂಕವಾಗಿ ಪುಂಗುವ ಬಿಜೆಪಿ ನಾಯಕ ಮೋದಿಜಿಯವರು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಾಮುಕರ ಕೈಗೆ ಆಡಳಿತ ನೀಡುವುದರಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಜಾತಿ ಧರ್ಮಗಳ ರಾಜಕಾರಣ ಮಾಡುತ್ತಿರುವ ಬಿಜೆಪಿಗರಿಗೆ ಇಂತಹ ಸೂಕ್ಷ್ಮ ವಿಚಾರಗಳು ತಿಳಿಯುವುದೇ ಇಲ್ಲ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿಯ ಪ್ರೇಮಕಥನ ‘ಅಮರ ಪ್ರೇಮಿ ಅರುಣ್’ ತೆರೆಗೆ ಬರಲು ಸಿದ್ಧ
ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ತಡೆಗೆ ಮುಂದಾಗದ ಬಿಜೆಪಿಗರು ಜನಿವಾರದ ವಿವಾದ ಹಬ್ಬಿಸುತ್ತ ಒಬ್ಬರಿಗೊಬ್ಬರನ್ನು ಎತ್ತಿಕಟ್ಟುತ್ತಿದ್ದಾರೆ. ಹೆಣಗಳ ಮೇಲೆ ರಾಜಕೀಯ ಮಾಡುವ ಬಿಜೆಪಿಗೆ ಹೆಣ್ಣುಮಕ್ಕಳ ಸುರಕ್ಷತೆ, ರಕ್ಷಣೆ, ಸ್ವಾತಂತ್ರ್ಯ ಬೇಕಿಲ್ಲ. ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಆದಿಕೇಶವಲು ಎಂಬ ಬಿಜೆಪಿ ಮುಖಂಡನ ಕ್ಯಾಂಟಿನ್ ಟೆಂಡರ್ ಪರವಾನಗಿ ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.