ಮಂಗಳವಾರ, ಕಾಶ್ಮೀರದ ಪಹಲ್ಗಾಮ್‌ನಲ್ಲಿನ ಆರೋಗ್ಯ ರೆಸಾರ್ಟ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಈ ಅತ್ಯಂತ ಭೀಕರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ ಕನಿಷ್ಠ 24 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆದ ಪಹಲ್ಗಾಮ್‌ಗೆ ತೆರಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ತೆರಳಿದ್ದಾರೆ. ಸೌದಿ ಅರೇಬಿಯಾಕ್ಕೆ ತೆರಳಿದ್ದ ಪ್ರಧಾನಿ ಮೋದಿ ಭಾರತಕ್ಕೆ ಮರಳಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಗಳ ಸನ್ನದ್ಧತೆಯನ್ನು ಪರಿಶೀಲಿಸಿದ ಕೇವಲ ಎರಡೇ ವಾರಗಳಲ್ಲಿ ಈ ಮಾರಕ ದಾಳಿ ನಡೆದಿದೆ. ದಾಳಿ ನಡೆಸಿದವರು ಪಾಕಿಸ್ತಾನ ಮೂಲದ ದುಷ್ಕರ್ಮಿಗಳು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಹಿಂದೆ ಪುಲ್ವಾಮ ದಾಳಿ ನಡೆದಾಗ ಹುಸಿ ಪ್ರತಿದಾಳಿ ನಡೆಸಿದ್ದ ಕೇಂದ್ರ ಸರ್ಕಾರ, ಈಗಲಾದರೂ ಎಚ್ಚೆತ್ತುಕೊಂಡು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ದುಷ್ಕರ್ಮಿಗಳನ್ನು ಹತ್ತಿಕ್ಕಬೇಕು ಎಂಬ ಒತ್ತಡ ಹೆಚ್ಚಾಗಿದೆ.
ದಾಳಿಯ ಮಾಹಿತಿ ಬಂದ ಕೂಡಲೇ ವೈದ್ಯಕೀಯ, ಪೊಲೀಸ್ ಹಾಗೂ ಅಧಿಕಾರಿಗಳ ತಂಡ ಧಾವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಭಾರತೀಯ ಸೇನೆಯು ಶೋಧ ಕಾರ್ಯಾಚರಣೆ ಆರಂಭಿಸಿದೆ.
ದಾಳಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಕರ್ರಾ, ಎನ್‌ಸಿ ಮುಖ್ಯಸ್ಥ ಸಜಾದ್ ಲೋನ್, ಹಿರಿಯ ಬಿಜೆಪಿ ನಾಯಕ ರವೀಂದರ್ ರೈನಾ ಹಾಗೂ ಇತರ ರಾಜಕೀಯ ನಾಯಕರು ಖಂಡಿಸಿದ್ದಾರೆ. ಇಂದು ಕಾಶ್ಮೀರ ಬಂದ್‌ಗೆ ಕರೆಕೊಡಲಾಗಿದೆ.
ದಾಳಿಯಲ್ಲಿ ಮೃತಪಟ್ಟವರನ್ನು ಇಬ್ಬರು ವಿದೇಶಿ ಪ್ರವಾಸಿಗರು, ಕರ್ನಾಟಕದ ಇಬ್ಬರು ಹಾಗೂ ಮಹಾರಾಷ್ಟ್ರ ಮತ್ತು ಒಡಿಶಾದ ಮೂಲದ ಕೆಲವರು ಇದ್ದಾರೆಂದು ಗುರುತಿಸಲಾಗಿದೆ. ಕರ್ನಾಟಕದ ಬೆಂಗಳೂರಿನ ಭರತ್ ಭೂಷಣ್ ಮತ್ತು ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮೃತದೇಹವನ್ನು ರಾಜ್ಯಕ್ಕೆ ತರಲು ಮತ್ತು ಕಾಶ್ಮೀರದಲ್ಲಿರುವ ಕನ್ನಡಿಗರನ್ನು ರಕ್ಷಿಸಲು ರಾಜ್ಯ ಸರ್ಕಾರ ತಂಡವನ್ನು ಕಾಶ್ಮೀರಕ್ಕೆ ಕಳಿಸಿದೆ.
ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ‘ಲಷ್ಕರ್-ಎ-ತಯ್ಯಿಬಾ’ದ ಒಂದು ಘಟಕವಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಈ ದಾಳಿಯನ್ನು ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾಶ್ಮೀರದಲ್ಲಿ ಜನಸಂಖ್ಯಾ ಬದಲಾವಣೆಯು ತಮಗೆ ಅಪಾಯವೊಡ್ಡುತ್ತದೆ ಎಂದು ಟಿಆರ್‍ಎಫ್ ದಾಳಿ ಮಾಡಿದೆ ಎಂದು ಹೇಳಲಾಗಿದೆ.
”ಕಳೆದ ಎರಡು ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೆ 83,742 ನಿವಾಸ ಪ್ರಮಾಣಪತ್ರಗಳನ್ನು ನೀಡಲಾಗಿದೆ” ಎಂದು ಇತ್ತೀಚೆಗೆ ನಡೆದ ಜಮ್ಮು-ಕಾಶ್ಮೀರ ವಿಧಾನಸಭಾ ಅಧಿವೇಶನದಲ್ಲಿ ಮಾಹಿತಿ ನೀಡಲಾಗಿತ್ತು.
ಸ್ಥಳೀಯರಲ್ಲದವರು ಪ್ರವಾಸಿಗರಂತೆ ಕಾಶ್ಮೀರಕ್ಕೆ ಬಂದು, ಇಲ್ಲಿ ನಿವಾಸಗಳನ್ನು ಪಡೆದು, ನಂತರ ಭೂಮಿಯ ಮಾಲೀಕರಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಸ್ಥಳೀಯರಲ್ಲದವರು ಕಾಶ್ಮೀರದಲ್ಲಿ ನೆಲೆಸದಂತೆ ತಡೆಯಲು, ಭಯ ಬಿತ್ತಲು ಹಿಂಸಾಚಾರ ನಡೆಸಿರುವುದಾಗಿ ಟಿಆರ್‍ಎಫ್ ಹೇಳಿಕೊಂಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಟಿಆರ್‍ಎಫ್ ಸಮರ್ಥಿಸಿಕೊಂಡಿದೆ, ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದೆ ಎಂಬುದಕ್ಕೆ ಖಚಿತ ಮೂಲಗಳು ಲಭ್ಯವಾಗಿಲ್ಲ.
ದಾಳಿಗೆ ಸಂಬಂಧಿಸಿದಂತೆ ಹಲವಾರು ವಿವರಗಳನ್ನು ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದಾರೆ. ”ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದು” ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಹಿಂಸಾಚಾರವನ್ನು ಖಂಡಿಸಿದ್ದಾರೆ.
ಭೀಕರ ದಾಳಿ ನಡೆದ ಪಹಲ್ಗಾಮ್‌ಗೆ ಭೇಟಿ ನೀಡಲು ಅಮಿತ್ ಶಾ ಶ್ರೀನಗರಕ್ಕೆ ತೆರಳಿದ್ದಾರೆ. ಅವರೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವು ತೆರಳಿಸಿದ್ದು, ತನಿಖೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ.
ಈ ವರದಿ ಓದಿದ್ಧೀರಾ?: ಮಂಗಳೂರು ಗ್ಯಾಂಗ್‌ರೇಪ್ | ಮೌನಕ್ಕೆ ಜಾರಿದ ಬಿಜೆಪಿ, ಸಂಘಪರಿವಾರ; ಕಾರಣ ಏನು ಗೊತ್ತೇ?
ಮಂಗಳವಾರ ಮಧ್ಯಾಹ್ನ ಸೌದಿ ಅರೇಬಿಯಾದ ಜೆಡ್ಡಾಗೆ ತೆರಳಿದ್ದ ಮೋದಿ, ದಾಳಿ ಬೆನ್ನಲ್ಲೇ ಭಾರತಕ್ಕೆ ಮರಳಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಭೆ ನಡೆಸಿದ್ದಾರೆ.
ಇತ್ತೀಚೆಗೆ ನಡೆಯುತ್ತಿರುವ ದಾಳಿಗಳು ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ಭದ್ರತಾ ವೈಫಲ್ಯಗಳನ್ನು ಎತ್ತಿ ತೋರಿಸುತ್ತವೆ. ಇಂತಹ ದಾಳಿಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತಿವೆ. ಈ ಇಬ್ಬರಿಂದಲೂ ರಾಜೀನಾಮೆ ಪಡೆಯಬೇಕು ಎಂಬ ಆಕ್ರೋಶ, ಆಗ್ರಹಗಳು ಕೇಳಿಬಂದಿವೆ.
ಸಂವೇದನೆ ಮರೆತ ಮಾಧ್ಯಮಗಳು
ದಾಳಿಯ ಬೆನ್ನಲ್ಲೇ ಮಾಧ್ಯಮಗಳು ಹಿಂಸಾಚಾರವನ್ನು ಸಂಭ್ರಮಿಸುವಂತೆ ವರ್ತಿಸುತ್ತಿವೆ. ದಾಳಿಗೆ ಸಂಬಂಧಿಸಿದಂತೆ ಪ್ರಸಾರವಾಗುತ್ತಿರುವ ಸುದ್ದಿಗಳಲ್ಲಿ ಸುಳ್ಳುಗಳನ್ನು ಹರಡುತ್ತಿವೆ. ಸಂತ್ರಸ್ತರ ಹೇಳಿಕೆಗಳನ್ನು ತಿರುಚುತ್ತಿವೆ.
ಭಯೋತ್ಪಾದಕ ದಾಳಿಯಲ್ಲಿ ಹತ್ಯೆಗೀಡಾದ ಕರ್ನಾಟಕದ ಉದ್ಯಮಿಯ ಪತ್ನಿ ಪಲ್ಲವಿ ಮಾತನಾಡಿದ್ದನ್ನು ಕನ್ನಡದ ಮಾಧ್ಯಮಗಳು ಸೇರಿದಂತೆ ಹಲವಾರು ಮಾಧ್ಯಮಗಳು ತಿರುಚಿ, ಕೋಮುದ್ವೇಷಪೂರಿತ ಸುದ್ದಿಯನ್ನು ಪ್ರಕಟಿಸಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಲ್ಲವಿ, “ಭಯೋತ್ಪಾದಕ ದಾಳಿ ಆದ ಮೇಲೆ ನಮ್ಮ ಸಹಾಯಕ್ಕೆ ಮೂವರು ಸ್ಥಳೀಯ ಮುಸ್ಲಿಮರು ಧಾವಿಸಿದರು. ಅವರು ‘ಬಿಸ್ಮಿಲ್ಲಾ… ಬಿಸ್ಮಿಲ್ಲಾ..’ ಎನ್ನುತ್ತಾ ಕಷ್ಟದ ಸಂದರ್ಭದಲ್ಲಿ ನಮ್ಮನ್ನು ರಕ್ಷಿಸಲು ನೆರವಾದರು. ಅವರು ನನ್ನ ಅಣ್ಣಂದಿರು ಅಂತಾನೇ ಹೇಳಬಹುದು” ಎಂದು ಹೇಳಿದ್ದರು.
ಆದರೆ, ಪತ್ರಿಕಾ ನೈತಿಕತೆಯನ್ನೇ ಮರೆತಿರುವ ಮಾಧ್ಯಮಗಳು, ”ಮೂವರು ಮುಸ್ಲಿಂ ದಾಳಿಕೋರರು ‘ಬಿಸ್ಮಿಲ್ಲಾ… ಬಿಸ್ಮಿಲ್ಲಾ..’ ಎನ್ನುತ್ತಾ ದಾಳಿ ನಡೆಸಿದರೆಂದು ಪಲ್ಲವಿ ಹೇಳಿದ್ದಾರೆ” ಎಂಬುದಾಗಿ ತಿರುಚಿದ ವರದಿ ಪ್ರಕಟಿಸಿವೆ. ಇಂತಹ ಹಲವಾರು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸಿವೆ. ಇಡೀ ದೇಶವೇ ಖಂಡಿಸಬೇಕಾದ ದಾಳಿ ಇದು. ಆದರೆ, ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತಲು ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ.