ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಮ್ಮು ಕಾಶ್ಮೀರ ಸರ್ಕಾರವು ತಲಾ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಈ ಭಯೋತ್ಪಾದಕ ದಾಳಿಯಿಂದ 28 ಪ್ರವಾಸಿಗರು ಮೃತಪಟ್ಟಿದ್ದಾರೆ.
ಪರಿಹಾರದ ಬಗ್ಗೆ ಘೋಷಣೆ ಮಾಡಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ನಿನ್ನೆ ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ದಾಳಿಯಿಂದ ತೀವ್ರ ಆಘಾತ ಮತ್ತು ದುಃಖವಾಗಿದೆ. ಅಮಾಯಕ ನಾಗರಿಕರ ವಿರುದ್ಧದ ಈ ಅನಾಗರಿಕ ಮತ್ತು ಅರ್ಥಹೀನ ಕ್ರೌರ್ಯದ ಕೃತ್ಯಕ್ಕೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ನಾವು ಈ ದಾಳಿಯನ್ನು ಪ್ರಬಲವಾಗಿ ಖಂಡಿಸುತ್ತೇವೆ. ಮೃತರಾದ ಅಮೂಲ್ಯ ಜೀವಗಳಿಗೆ ನಾವು ಶೋಕ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಮೂವರು ಭಯೋತ್ಪಾದಕರ ರೇಖಾಚಿತ್ರ ಬಿಡುಗಡೆ
“ಪ್ರೀತಿಪಾತ್ರರ ನಷ್ಟಕ್ಕೆ ನಾವು ಹಣ ನೀಡಿ ಸರಿದೂಗಿಸಲು ಎಂದಿಗೂ ಸಾಧ್ಯವಿಲ್ಲ. ಆದರೆ ಆದರೆ ಬೆಂಬಲ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸುತ್ತೇವೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದರು. ಮೃತದೇಹಗಳನ್ನು ಗೌರವಯುತವಾಗಿ ಅವರ ಮನೆಗಳಿಗೆ ಸಾಗಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದೂ ಅಬ್ದುಲ್ಲಾ ಹೇಳಿದರು.
“ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ದುಃಖಿತ ಕುಟುಂಬಗಳಿಗೆ ಸಂತಾಪಗಳು. ನಿಮ್ಮ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ. ಈ ಕರಾಳ ಸಮಯದಲ್ಲಿ ನಿಮ್ಮೊಂದಿಗೆ ನಿಲ್ಲುತ್ತೇವೆ” ಎಂದಿದ್ದಾರೆ.
