ಬಗರ್ಹುಕುಂ ಭೂಮಿ ವಿಷಯದಲ್ಲಿ ಅರಣ್ಯ ಇಲಾಖೆಯ ವರ್ತನೆಗಳನ್ನು ಗಮನಿಸಿದರೆ, ಕಂದಾಯ ಇಲಾಖೆಯು ಬೇರೆ ದೇಶದ ಅಥವಾ ಬೇರೊಂದು ಸರ್ಕಾರದ ಇಲಾಖೆಯೇನೋ ಎಂಬಂತಿವೆ! ಹಿಂದಿನ ಸರ್ಕಾರ ಈ ಸಮಸ್ಯೆ ಬಗ್ಗೆ ಬರೀ ಮಾತಾಡಿದ್ದೇ ಬಂತು. ಈ ಸರ್ಕಾರವಾದರೂ ಪರಿಹರಿಸಲು ಮುಂದಾಗಲಿ
ಸಕಲೇಶಪುರ ತಾಲೂಕಿನ ಮೂರುಕಣ್ಣು ಗುಡ್ಡದ ಶೋಲಾ ಕಾಡು (ಬೆಟ್ಟದ ಕಣಿವೆಗಳಲ್ಲಿ ಬೆಳೆಯುವ ದಟ್ಟ ಅರಣ್ಯ) ಒತ್ತುವರಿಗೆ ಸಂಬಂಧಿಸಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಣ ಜಟಾಪಟಿ ತಾರಕಕ್ಕೇರಿದೆ. ಈ ಸಮಸ್ಯೆಯ ಮೂಲ ಶುರುವಾಗುವುದು 1920ರಲ್ಲಿ. ಆಗಿನ ಬ್ರಿಟಿಷ್ ಸರ್ಕಾರವು, ‘ಮೈಸೂರು ಅರಣ್ಯ ನಿಯಮ’ಗಳನ್ನು ಬಳಸಿ, ಇಲ್ಲಿನ 7,983 ಎಕರೆಯನ್ನು ಅರಣ್ಯ ಎಂದು ನೋಟಿಫಿಕೇಶನ್ ಮಾಡುತ್ತದೆ. ಆ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಹಳ್ಳಿಗರು ಪ್ರತಿಭಟಿಸಿದ ನಂತರ, ಅರಣ್ಯ ವ್ಯಾಜ್ಯಗಳ ನಿರ್ವಹಣಾ ಅಧಿಕಾರಿಯೊಬ್ಬರನ್ನು (ಎಸ್ಎಫ್ಒ) ನೇಮಕ ಮಾಡಲಾಗುತ್ತದೆ. ಗ್ರಾಮಸ್ಥರ ಅಳಲನ್ನು ಆಲಿಸಿ, ಹಳ್ಳಿಗಳಿಗೆ ಯಾವ ಬಗೆಯಲ್ಲಿ ಎಷ್ಟು ಭೂಮಿಯನ್ನು ಬಿಟ್ಟುಕೊಡಬಹುದು ಎಂಬ ವಿವರವಿದ್ದ ವರದಿಯನ್ನು ಅಧಿಕಾರಿ 1923ರಲ್ಲಿ ಸಲ್ಲಿಸುತ್ತಾರೆ. ಅದನ್ನು ಆಧರಿಸಿ ಹೊಸ ನೋಟಿಫಿಕೇಶನ್ ಹೊರಡಿಸಲಾಗುತ್ತದೆ. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಈ ನೋಟಿಫಿಕೇಶನ್ ದಾಖಲೆ ಈಗ ಕಾಣೆಯಾಗಿದೆ ಎಂದು ಹೇಳಲಾಗುತ್ತಿದೆ.
ಅಸಲಿಗೆ, 7,983 ಎಕರೆಯಷ್ಟಿರುವ ಈ ಶೋಲಾ ಕಾಡಿನಲ್ಲಿ ಬರೋಬ್ಬರಿ ಎರಡು ಸಾವಿರ ಎಕರೆ ಒತ್ತುವರಿಯಾಗಿದೆ ಎಂಬುದು ಅರಣ್ಯ ಇಲಾಖೆಯ ಲೆಕ್ಕ. ಇದರಲ್ಲಿ 1,510 ಎಕರೆಯನ್ನು ಖುದ್ದು ಕಂದಾಯ ಇಲಾಖೆಯೇ ವಿವಿಧೋದ್ದೇಶಗಳಿಗೆ ಬಳಕೆಗೆ ಮಂಜೂರು ಮಾಡಿದೆ ಎಂಬುದು ಅರಣ್ಯ ಇಲಾಖೆಯ ದೂರು. ಈ ಒತ್ತುವರಿಯನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿರುವುದು ಮತ್ತು ಒತ್ತುವರಿ ತೆರವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಆದರೆ, ಇದೇ ಉತ್ಸಾಹದಲ್ಲಿ ಹಳ್ಳಿಗಳು ಮತ್ತು ಬಡ ರೈತರ ಬಗರ್ಹುಕುಂ ಭೂಮಿಯನ್ನೂ ‘ಒತ್ತುವರಿ’ ಎಂದು ಪರಿಗಣಿಸುವುದು ಅವಿವೇಕ ಮತ್ತು ಅತಿರೇಕ ಕೂಡ.
ಈ ಸಂಪಾದಕೀಯ ಓದಿದ್ದೀರಾ?: ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನಿನ ಅಗತ್ಯವಿದೆ
ಒಂದು ವೇಳೆ, 1923ರಲ್ಲಿ ಎಸ್ಎಫ್ಒ ಸಲ್ಲಿಸಿದ ವರದಿಯಲ್ಲಿ ಹಳ್ಳಿಗಳ ಕುರಿತು ಕಠಿಣ ನಿಲುವು ತಾಳಿದ್ದೇ ಹೌದಾದರೆ, ತೆರವು ಕಾರ್ಯ ಆಗಲೇ ನಡೆದಿರುತ್ತಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ವರದಿಯಲ್ಲಿ ಅಂತಹ ಯಾವುದೇ ಶಿಫಾರಸು ಇಲ್ಲದ ಕಾರಣಕ್ಕೇ ಪರಿಷ್ಕೃತ ನೋಟಿಫಿಕೇಶನ್ ಹೊರಬಿದ್ದು, ಹಳ್ಳಿಗಳು ಉಳಿದುಕೊಂಡವು. ನಂತರದಲ್ಲಿ ಕಂದಾಯ ಇಲಾಖೆ ಕೂಡ ಈ ಭೂಮಿಯನ್ನು ಹಳ್ಳಿಗಳ ಅಗತ್ಯಕ್ಕೆ ತಕ್ಕಂತೆ ಮಂಜೂರು ಮಾಡಿದೆ. ಇದರಲ್ಲಿ ಹಳ್ಳಿಗರ ತಪ್ಪೇನು? ಕಂದಾಯ ಇಲಾಖೆಯು ಬೇರೆ ದೇಶದ, ಬೇರೊಂದು ಸರ್ಕಾರದ ಇಲಾಖೆಯೇನು?
ಈ ಗೊಂದಲ, ಜಟಾಪಟಿಯ ನಡುವೆಯೇ ಅರಣ್ಯ ಇಲಾಖೆಯು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಒಬ್ಬನೇ ವ್ಯಕ್ತಿಗೆ ಸೇರಿದ 38 ಎಕರೆ ಭೂಮಿ ವಶಪಡಿಸಿಕೊಂಡಿದೆ. ಇದರಲ್ಲಿ 28 ಎಕರೆ ಅರಣ್ಯವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಲಾಗಿತ್ತು ಎಂಬುದು ಗಮನಾರ್ಹ. ಇಂಥದ್ದೇ ಒತ್ತುವರಿ ಈ ಪ್ರದೇಶದಲ್ಲಿ ಬರೋಬ್ಬರಿ 611 ಎಕರೆಯಷ್ಟಿದೆ ಎಂದು ಅರಣ್ಯ ಇಲಾಖೆಯ ದಾಖಲೆಗಳೇ ಹೇಳುತ್ತವೆ. ಹಾಗಾಗಿ, ನಿಜವಾಗಿಯೂ ‘ಅರಣ್ಯ ಒತ್ತುವರಿ’ ಎನಿಸಿಕೊಂಡಿರುವ ಈ 611 ಎಕರೆಯನ್ನು ತೆರವು ಮಾಡಿಸಿ ವಶಕ್ಕೆ ಪಡೆಯುವ ದೊಡ್ಡ ಜವಾಬ್ದಾರಿ ಇಲಾಖೆಯ ಅಧಿಕಾರಿಗಳ ಮೇಲಿದೆ. ಇದಕ್ಕೆ ಮುನ್ನವೇ, ಹಳ್ಳಿಗಳು ಮತ್ತು ಬಡ ರೈತರ ಬಗರ್ಹುಕುಂ ಭೂಮಿಯನ್ನು ವಶಪಡಿಸಿಕೊಳ್ಳುವಂತಹ ದುಸ್ಸಾಹಸಕ್ಕೆ ಇಲಾಖೆ ಮುಂದಾಗದಿರಲಿ.
ಈ ಜಟಾಪಟಿ ಇನ್ನಷ್ಟು ತಾರಕಕ್ಕೇರುವ ಮುನ್ನ, ರಾಜ್ಯ ಸರ್ಕಾರವು ಈ ಸಮಸ್ಯೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಜೊತೆಗೆ, ಇದೊಂದು ಪ್ರಕರಣ ಮಾತ್ರವಲ್ಲದೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿನ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಟಾಪಟಿಗೂ ಒಂದು ತಾರ್ಕಿಕ ಅಂತ್ಯ ಕಾಣಿಸುವ ಅವಶ್ಯವಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಮೀಕ್ಷೆ ನನೆಗುದಿಗೆ ಬೀಳದಂತೆ ಎಚ್ಚರ ವಹಿಸಬೇಕಿದೆ. ಹೀಗಾದರೆ ಮಾತ್ರವೇ, ಬಗರ್ಹುಕುಂ ಭೂಮಿಯನ್ನು ನಂಬಿಕೊಂಡ ಬಡ ರೈತರ ಬದುಕು ಉಳಿದೀತು.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ