ಆಯುರ್ವೇದ ಮಹಾವಿದ್ಯಾಲಯಕ್ಕೆ ಲೀಸ್ ಆಧಾರದ ಮೇಲೆ ನೀಡಿದ್ದ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲೆ ಬಿಎಲ್‌ಡಿಇ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸುನಿಲ್ ಗೌಡ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ವಿವಿಗೆ ಲೀಸ್ ಆಧಾರದ ಮೇಲೆ 17.20 ಗುಂಟೆ ಜಮೀನನ್ನು ಮಂಜೂರು ಮಾಡಲಾಗಿತ್ತು. ಈ ಜಮೀನಿನಲ್ಲಿ ಅಂದಾಜು 1 ಎಕರೆ 10ಗುಂಟೆ ಜಾಗವನ್ನು ಈಗಾಗಲೇ ಕಾನೂನು ಬಹಿರವಾಗಿ ಅತಿಕ್ರಮಣ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಬಾಕಿ ಉಳಿದಿರುವ 16.10 ಎಕರೆ ಸರ್ಕಾರಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.
“ಇತ್ತೀಚಿಗೆ ಕೆಲವು ವ್ಯಕ್ತಿಗಳು, ʼಈ ಕೋಟೆ ಗೋಡೆಯಲ್ಲಿ ಚಾಲುಕ್ಯರ ಕಾಲದ ಸ್ವಯಂಭು ದೇವಸ್ಥಾನ ಇದೆ. ಬಿಎಲ್‌ಡಿಇ ಸಂಸ್ಥೆಯವರು ಇಂದು ದೇವಸ್ಥಾನದ ಮೇಲೆ ದಾಳಿ ಮಾಡಿ, ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ, ಅಕ್ರಮ ಕಟ್ಟಡ ಕಟ್ಟಿ, ಷಡ್ಯಂತ್ರ ಮಾಡಿದ್ದಾರೆʼ ಎನ್ನುವ ರೀತಿಯಲ್ಲಿ ಕೆಲವು ಪೋಸ್ಟುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಆದರೆ ವಾಸ್ತವವಾಗಿ ವಿಜಯಪುರದ ಆದಿಲ್ ಶಾಹಿ ಅರಸರ ಕೋಟೆ ಗೋಡೆಗೆ ಹೊಂದಿಕೊಂಡು ಸಿಟಿಎಸ್ ನಂ 605ಎ/1ಎ ಕ್ಷೇತ್ರ 2 ಎಕರೆ 20 ಗುಂಟೆ ಮತ್ತು ಸಿಟಿಎಸ್ ನಂ :605ಎ/1ಎ/1ಎ/2ಕ್ಷೇತ್ರ 15 ಎಕರೆ ಹೀಗೆ ಒಟ್ಟು ಆಸ್ತಿ 17 ಎಕರೆ, 29ಗುಂಟೆ ಪ್ರದೇಶ ಸರ್ಕಾರಿ ಜಾಗವನ್ನು 30 ವರ್ಷಗಳ ಅವಧಿಗೆ ಆಯುರ್ವೇದ ಮಹಾವಿದ್ಯಾಲಯ ಸಮಿತಿಗೆ ಸರ್ಕಾರದಿಂದ ಲೀಜ್ ಕೊಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
2011ನೇ ವರ್ಷದಲ್ಲಿ ಆಯುರ್ವೇದ ಮಹಾವಿದ್ಯಾಲಯ ಸಮಿತಿ ಬಿಎಲ್‌ಡಿಇ ಸಂಸ್ಥೆಯಲ್ಲಿ ವಿಲೀನಗೊಂಡಿದೆ. ಸಂಸ್ಥೆ ವಿಲೀನದ ನಂತರ ಸರ್ಕಾರದಿಂದ ಮತ್ತೆ 30 ವರ್ಷಗಳ ಕಾಲ ಲೀಸ್ ಮುಂದುವರಿಸಲಾಗಿದೆ. ಸರ್ಕಾರ ಬಿ ಎಲ್ ಡಿ ಇ ಸಂಸ್ಥೆಗೆ ನೀಡಿದ ಆಸ್ತಿಯನ್ನು ಕಾಪಾಡಿಕೊಳ್ಳುವುದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದರು.
ಇದನ್ನೂ ಓದಿ: ವಿಜಯಪುರ | ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ: ವಿಜಯ್ ಕುಮಾರ್
ಐತಿಹಾಸಿಕ ಕೋಟೆ ಗೋಡೆ ಭಾರತ ಸರ್ಕಾರ ವ್ಯಾಪ್ತಿಯ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಅವರ ನಿಯಮಗಳು ಕಠಿಣವಾಗಿವೆ. ಐತಿಹಾಸಿಕ ದಾಖಲೆಗಳು, ಶಾಸನಗಳು ಆಧರಿಸಿ ಈ ದೇವಸ್ಥಾನದ ಖಚಿತತೆ ಕುರಿತು ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕ್ರಮ ಜರುಗಿಸುವಂತೆ ಸಂಸ್ಥೆ ವತಿಯಿಂದಲೇ ಕೋರಿದ್ದೇವೆ. ಅದು ಸತ್ತಾಂಶಗಳಿಂದ ಕೂಡಿದ್ದರೆ ಪ್ರಾಚ್ಯ ವಸ್ತು ಇಲಾಖೆ ಅದನ್ನು ರಕ್ಷಿಸಲಿದೆ. ಇದರಲ್ಲಿ ಸಾರ್ವಜನಿಕರ ಪಾತ್ರ ಇರುವುದಿಲ್ಲ ಎಂದು ಹೇಳಿದ್ದಾರೆ.