ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆ 2025 ಜಾರಿಗೊಳಿಸಿರುವುದನ್ನು ವಿರೋಧಿಸಿ ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರೋಧಿ ಜಂಟಿ ಕ್ರಿಯಾ ಸಮಿತಿ ನಗರದಲ್ಲಿ ಏಪ್ರಿಲ್ 24 ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಿದೆ.
ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ನಗರದ ಜಾಮಾ ಮಸೀದಿಯಲ್ಲಿ ಬುಧವಾರ ತುರ್ತು ಸಭೆ ನಡೆಸಿದ ಮುಸ್ಲಿಮ್ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಪ್ರತಿಭಟನೆ ಮುಂದೂಡುವ ನಿರ್ಣಯ ಕೈಗೊಂಡರು.
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ನಿರ್ದೇಶನದ ಮೇರೆಗೆ ಪ್ರತಿಭಟನೆ ಮುಂದೂಡಲಾಗಿದೆ ಎಂದು ಮಂಡಳಿಯ ಸದಸ್ಯರೂ ಆದ ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರೋಧಿ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಡಾ.ಅಬ್ದುಲ್ ಖದೀರ್ ತಿಳಿಸಿದರು.
ಪಹಲ್ಗಾಮ್ ದಾಳಿಗೆ ಖಂಡನೆ :
ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಘಟನೆಯನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು ಎಂದು ಹೇಳಿದರು.
ಪ್ರವಾಸಿಗರ ಮೇಲಿನ ದಾಳಿ ಅಮಾನವೀಯ. ಅತ್ಯಂತ ನೋವಿನ ಸಂಗತಿ. ಸಂಕಷ್ಟದ ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯ ಸೇರಿದಂತೆ ದೇಶದ ಎಲ್ಲರೂ ಸಂತ್ರಸ್ತ ಕುಟುಂಬಗಳ ಪರ ನಿಲ್ಲಲಿದ್ದಾರೆ. ಅವರ ದುಃಖದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಮಹ್ಮಮದ್ ಗೌಸ್, ಸದಸ್ಯ ಮನ್ಸೂರ್ ಅಹಮ್ಮದ್ ಖಾದ್ರಿ, ಪ್ರಮುಖರಾದ ಸರ್ಫರಾಜ್ ಹಾಸ್ಮಿ, ಅಬ್ದುಲ್ ಅಜೀಜ್ ಮುನ್ನಾ, ಮೌಲಾನಾ ಮೋನಿಸ್ ಕಿರ್ಮಾನಿ, ಡಾ.ಜಿಯಾವುಲ್ ಇಸ್ಲಾಂ ಕುಂಜೆನಶೀನ್, ಕಾಂಗ್ರೆಸ್ ಬೀದರ್ ನಗರ ಘಟಕದ ಅಧ್ಯಕ್ಷ ಮಹಮ್ಮದ್ ಯುಸೂಫ್, ರಫೀಕ್ ಅಹಮ್ಮದ್ ಮತ್ತಿತರರು ಇದ್ದರು.