ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಅತ್ಯಂತ ಹೇಯ ಮತ್ತು ಹೀನ ಕೃತ್ಯವಾಗಿದ್ದು ಇದು ಸಮಸ್ತ ನಾಗರಿಕ ಸಮಾಜದ ಮೇಲೆ ನಡೆದ ದಾಳಿಯಾಗಿದೆ. ಈ ಕೃತ್ಯದ ಹಿಂದೆ ಯಾವುದೇ ಶಕ್ತಿ ಅಥವಾ ಅದೆಷ್ಟೇ ದೊಡ್ಡ ವ್ಯವಸ್ಥೆಗಳೇ ಇರಲಿ ಅವುಗಳ ವಿರುದ್ಧ ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳಿಗೆ ಸುದೀರ್ಘ ಇತಿಹಾಸವಿದ್ದು ಜಾತಿ, ಧರ್ಮ, ದೇಶ, ಭಾಷೆಗಳ ಭೇದವಿಲ್ಲದೆ ಸಮಾಜದ ಎಲ್ಲರೂ ಇದಕ್ಕೆ ಬಲಿಪಶುಗಳಾಗಿದ್ದಾರೆ. ಹಾಗೆಯೇ, ಯಾವುದೇ ಭೇದವಿಲ್ಲದೆ ಇದರ ವಿರುದ್ಧ ಹೋರಾಡಿದ್ದಾರೆ. ಇಂಥ ಭಯೋತ್ಪಾದನಾ ಕೃತ್ಯಗಳಿಂದಾಗಿ ಸಮುದಾಯಗಳ ನಡುವೆ ಮತ್ತಷ್ಟು ಅಂತರ ಮೂಡಿ ಭಯೋತ್ಪಾದಕರ ಉದ್ದೇಶ ಈಡೇರದಂತೆ ರಾಜಕೀಯ ಧಾರ್ಮಿಕ ಮತ್ತು ಸಾಮಾಜಿಕ ವಲಯದಲ್ಲಿರುವ ಪ್ರಜ್ಞಾವಂತರು ಎಚ್ಚರಿಕೆ ವಹಿಸಬೇಕಿದೆ.
ಸಮಾಜ ವಿರೋಧಿ ಶಕ್ತಿಗಳು ವಿಜೃಂಭಿಸದಂತೆ ನೋಡಿಕೊಳ್ಳುವಲ್ಲಿ ಸಮುದಾಯಗಳು ಸಂಘಟಿತವಾದ ಕಾರ್ಯತಂತ್ರಗಳನ್ನು ಭವಿಷ್ಯದ ದೃಷ್ಟಿಯಿಂದ ರೂಪಿಸಿಕೊಳ್ಳಬೇಕಿದೆ. ಉಗ್ರವಾದಿಗಳಿಗೆ ಧರ್ಮ, ದೇಶ, ಭಾಷೆಗಳ ಹಂಗಿಲ್ಲ ಎನ್ನುವುದು ಈ ಪ್ರಕರಣ ಮತ್ತು ಹಿಂದಿನ ಹಲವು ಪ್ರಕರಣಗಳಲ್ಲಿ ಕಂಡುಬಂದಿದೆ. ಈ ಭೀಕರ ಹತ್ಯಾಕಾಂಡವನ್ನು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಖಂಡಿಸುತ್ತದೆ ಮಾತ್ರವಲ್ಲ, ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ..