ಒಂದು ಭಾಷೆಯನ್ನು ಇತರೆ ಭಾಷಿಕರ ಮೇಲೆ ಹೇರುವುದು ಒಂದು ಭಾಷೆಯ ನಾಶಕ್ಕೆ ಕಾರಣವಾಗುವುದು ಮಾತ್ರವಲ್ಲದೆ, ಆ ಭಾಷಿಕರ ಸಂಸ್ಕೃತಿ, ಕಲೆ, ಆಚರಣೆಗಳ ಅಳಿವಿಗೂ ಒಂದು ನೈಜ ನೆವವಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬಾಂಗ್ಲಾದೇಶದ ಹುಟ್ಟು.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧವಾಗಿ ಈವರೆಗೆ ದಕ್ಷಿಣ ಭಾರತದ ರಾಜ್ಯಗಳು ತೀವ್ರವಾಗಿ ಧ್ವನಿ ಎತ್ತಿವೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವೆ ಶೀತಲ ಸಮರವೇ ಏರ್ಪಟ್ಟಿದೆ. ಕರ್ನಾಟಕ, ಆಂಧ್ರಪ್ರದೇಶ ಮೊದಲಾದೆಡೆ ತ್ರಿಭಾಷಾ ಸೂತ್ರವು ಪರೋಕ್ಷವಾಗಿ ಹಿಂದಿ ಹೇರಿಕೆ ಎಂಬುದನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲಾಗಿದೆ. ವಿಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವೇ ಹಿಂದಿ ಭಾಷಾ ಹೇರಿಕೆ ಮಾಡಿದರೆ, ವಿರೋಧಗಳು ಹೆಚ್ಚುತ್ತವೆ ಎಂದು ಭಾವಿಸಿದ ಬಿಜೆಪಿ, ತಮ್ಮದೇ ಆಡಳಿತ ಇರುವ ಮಹಾರಾಷ್ಟ್ರದಲ್ಲಿಯೂ ಹಿಂದಿ ಹೇರಿಕೆ ಪ್ರಯೋಗಕ್ಕೆ ಇಳಿಯಿತು. ಆದರೆ, ಬಿಜೆಪಿಯ ಅತಿ ವಿಶ್ವಾಸ ಕೇಸರಿಪಡೆಗೆ ಮುಖಭಂಗ ತಂದಿದೆ. ಹಿಂದಿ ಕಡ್ಡಾಯ ಆದೇಶವನ್ನೇ ಹಿಂಪಡೆಯಲಾಗಿದೆ.
ಇತ್ತೀಚೆಗೆ, ಮಹಾರಾಷ್ಟ್ರದಲ್ಲಿ 1-5ನೇ ತರಗತಿಯವರೆಗೆ ಮೂರನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾಯುತಿ ಸರ್ಕಾರ ಕಡ್ಡಾಯಗೊಳಿಸಿತು. ಆದರೆ, ಬಿಜೆಪಿ-ಶಿವಸೇನೆ(ಶಿಂದೆ ಬಣ) ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಮಹಾರಾಷ್ಟ್ರದಲ್ಲಿ ಭಾಷಾ ಸಲಹಾ ಸಮಿತಿಯು ರಾಜ್ಯದಲ್ಲಿ ಹಿಂದಿ ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರವನ್ನು ಹಿಂಪಡೆಯುವಂತೆ ತಿಳಿಸಿತು. ಇದಾದ ಬೆನ್ನಲ್ಲೇ ಬಿಜೆಪಿ ಸರ್ಕಾರ ತನ್ನ ಈ ‘ಹೇರಿಕೆ’ ಆದೇಶವನ್ನು ಹಿಂಪಡೆದಿದೆ. ಇವೆಲ್ಲವುದರ ನಡುವೆ ಮರಾಠಿ ಸಂಸ್ಕೃತಿ ಬಗ್ಗೆ ತಿಳಿಯುವುದು ಮುಖ್ಯ. ಜೊತೆಗೆ ಬಿಜೆಪಿಗೆ ಆದ ಮುಖಭಂಗದ ಕಥೆಯನ್ನು, ಹಿನ್ನೆಲೆಯನ್ನು ಬದಿಗೊತ್ತುವಂತಿಲ್ಲ.
ಇದನ್ನು ಓದಿದ್ದೀರಾ? ಮರಾಠಿಯನ್ನು ದುರ್ಬಲಗೊಳಿಸುವುದನ್ನು ಸಹಿಸಲಾಗದು: ಹಿಂದಿ ಹೇರಿಕೆ ವಿರುದ್ಧ ಸುಪ್ರಿಯಾ ಸುಳೆ ಆಕ್ರೋಶ
ಭಾಷೆ ಎಂಬುದು ಒಂದು ಭಾವನೆ. ನಮ್ಮ ಭಾಷೆ, ಅದಕ್ಕೆ ತಕ್ಕುದಾದ ಸಂಸ್ಕೃತಿ, ಆ ಭಾಷೆಯ ಬೆಳವಣಿಗೆ, ಉಳಿವು, ಕಲಿಕೆ ಎಲ್ಲವೂ ನಮ್ಮ ಆದ್ಯತೆಯಾಗಿರುತ್ತದೆ ಮತ್ತು ಅದು ಮುಖ್ಯವೂ ಕೂಡಾ. ಅರೆಭಾಷೆ, ಕೊರಗ, ಮಲಾಮೆ, ಭೋಜ್‌ಪುರಿ, ಮೈತಿಲಿ, ಅವಧಿ, ಬ್ರಜ್, ಬಂಡೇಲಿ, ಗರ್ವಾಲಿ, ಕುಮೌನಿ, ಮಗಹಿ, ಮರ್ವರಿ, ಮಾಲ್ವಿ, ಛತ್ತೀಸ್‌ಗರ್ಹಿ, ಸಂಥಾಲಿ, ಆಂಗಿಕ, ಹೊ, ಖಾರಿಆ, ಖೋರ್ಥಾ, ಕುರ್ಮಾಲಿ, ಕುರುಖ್, ಮುಂಡಾರಿ – ಹೀಗೆ ದೇಶದಲ್ಲಿ ಅದೆಷ್ಟೋ ಭಾಷೆಗಳು ಅಳಿದು ಹೋಗಿದೆ. ಆ ಸಾಲಿನಲ್ಲಿ ನಮ್ಮ ಭಾಷೆಯೂ ಸೇರದಿರಲಿ ಎಂಬುದು ಆಯಾ ಭಾಷಾ ಪರ ಹೋರಾಟಗಾರರ ಕಾಳಜಿ. ಕೆಲವೆಡೆ ಅತಿರೇಕವೂ ಇದೆ. ಅದರಲ್ಲೂ ಭೋಜ್‌ಪುರಿ, ಮೈತಿಲಿ, ಅವಧಿಯಂತಹ ಬಹುತೇಕ ಭಾಷೆಗಳು ವಿನಾಶ ಹೊಂದಿರುವುದು ಹಿಂದಿಯ ಪ್ರಭಾವದಿಂದ. ಈ ಹೇರಿಕೆಯ ವಿಸ್ತಾರ ಇಂದಿಗೂ ಅಂತ್ಯವಾಗಿಲ್ಲ, ಆಳುವ ಕೈಗಳ ಸೈದ್ಧಾಂತಿಕ ಭಂಡಾರದಲ್ಲಿ ಅಡಗಿದೆ. ಅದರ ಜಾರಿಗೆ ಈಗ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಸ್ತ್ರವಾಗಿದೆ. ಒಂದು ದೇಶ ಒಂದು ಭಾಷೆ ಎಂಬ ಘೋಷಣೆ ಹೊರಡಿಸುವ ಪರೋಕ್ಷ ಪ್ರಯೋಗವೆಂದರೂ ತಪ್ಪಾಗಲಾರದು. ಇವೆಲ್ಲವೂ ಕೂಡಾ ಘಾಸಿ ಮಾಡುವುದು ಆಯಾ ಭಾಷಿಕರ ಮನಸ್ಸಿಗೆ, ಸಂಸ್ಕೃತಿಗೆ, ಭಾಷಾ ವಿಸ್ತಾರಕ್ಕೆ.
ಮಹಾರಾಷ್ಟ್ರದಲ್ಲಿ ‘ಮರಾಠಿ’ ಎಂಬ ಸಂಸ್ಕೃತಿ
ದಕ್ಷಿಣ ಭಾರತದ ಬಹುತೇಕ ಜನರಿಗೆ ಮರಾಠಿ, ಗುಜರಾತಿಗಳೆಲ್ಲವೂ ಹಿಂದಿಯಂತೆಯೇ ಎಂಬ ಭಾವವಿದೆ. ಕನ್ನಡ, ತಮಿಳು, ಮಲಯಾಳಂ, ತೆಲುಗಿನಂತೆ ಮರಾಠಿಯೂ ಒಂದು ಪ್ರತ್ಯೇಕ ಭಾಷೆ ಎಂಬುದು ಮುಂಬೈನಲ್ಲಿ ಬೆಳೆದ ಅಥವಾ ಅಲ್ಲಿ ಉದ್ಯೋಗ ಮಾಡುವ ಇತರೆ ಭಾಷಿಕರಿಗೆ ತಿಳಿದಿದೆಯೇ ಹೊರತು ಬಹುತೇಕರು ಮರಾಠಿ ಮತ್ತು ಹಿಂದಿ ನಡುವೆ ತುಲನೆ ಕಲ್ಪಿಸುತ್ತಾರೆ. ರಾಜ್ಯದಲ್ಲಿ ಉತ್ತರ, ದಕ್ಷಿಣ ಭಾಗದಲ್ಲಿ ಕನ್ನಡ ಹೇಗೆ ಸ್ಥಳೀಯವಾಗಿ ಬದಲಾಗುತ್ತದೆಯೋ ಹಾಗೆಯೇ ಮರಾಠಿಯೂ ಹಿಂದಿಯ ಸ್ಥಳೀಯ ಆಡು ಭಾಷೆ ಅಂದುಕೊಂಡವರೂ ಇದ್ದಾರೆ. ಆದರೆ ಅದು ನಿಜವಲ್ಲ. ಮರಾಠಿ ಒಂದು ಪ್ರತ್ಯೇಕ ಭಾಷೆ. ನಾವು ಕನ್ನಡವನ್ನು ಪ್ರೀತಿಸುವಷ್ಟೇ ಮರಾಠಿಗಳು ತಮ್ಮ ಭಾಷೆಯನ್ನು ಆರಾಧಿಸುತ್ತಾರೆ.
ಇದನ್ನು ಓದಿದ್ದೀರಾ? ಮರಾಠಿ ಮಾತನಾಡದ ಕಾರಣಕ್ಕೆ ಪಂಚಾಯತ್ ಅಧಿಕಾರಿಯ ನಿಂದನೆ; ಬೆಳಗಾವಿಯ ವ್ಯಕ್ತಿ ಬಂಧನ
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಮರಾಠಿ. ನಾವು ಕನ್ನಡಿಗರಿಗೆ ಕನ್ನಡ ಹೇಗೆ ನಾಡ ಭಾಷೆಯೋ, ಹಾಗೆಯೇ ಮಹಾರಾಷ್ಟ್ರದಲ್ಲಿ ಮರಾಠಿ ಬಹುತೇಕರ ಸಂವಾದ ಭಾಷೆ. ಮಹಾರಾಷ್ಟ್ರ ಮಾತ್ರವಲ್ಲದೆ ಗೋವಾ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಗುಜರಾತ್, ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿಯೂ ಮರಾಠಿಗರು ನೆಲೆಸಿದ್ದಾರೆ. ಭಾರತದ 22 ಭಾಷೆಗಳಲ್ಲಿ ಮರಾಠಿ ಕೂಡಾ ಒಂದು. 2011ರ ಗಣತಿ ಪ್ರಕಾರ 39 ದಶಲಕ್ಷ (ಮಿಲಿಯನ್) ಮರಾಠಿ ಭಾಷಿಕರು. ಹಿಂದಿ ಹೇರಿಕೆಯ ಪ್ರಭಾವದಿಂದ ಇದು ಕಡಿಮೆಯಾಗಿರಲೂ ಬಹುದು ಅಥವಾ ಈ ಹೇರಿಕೆ ವಿರುದ್ಧ ದೃಢವಾಗಿ ನಿಂತ ಕಾರಣ ವಿಸ್ತಾರವೂ ಆಗಿರಬಹುದು.
ವಿಶ್ವದ ಅತಿ ಹೆಚ್ಚು ಸ್ಥಳೀಯ ಭಾಷಿಕರನ್ನು ಹೊಂದಿರುವ ಭಾಷೆಗಳ ಪಟ್ಟಿಯಲ್ಲಿ ಮರಾಠಿ 13ನೇ ಸ್ಥಾನದಲ್ಲಿದೆ. ಹಿಂದೂಸ್ತಾನಿ ಮತ್ತು ಬಂಗಾಳಿ ನಂತರ ಭಾರತದಲ್ಲಿ ಮರಾಠಿ ಮೂರನೇ ಅತಿ ಹೆಚ್ಚು ಸ್ಥಳೀಯ ಭಾಷಿಕರನ್ನು ಹೊಂದಿದೆ. 2024ರ ಅಕ್ಟೋಬರ್‌ನಲ್ಲಿ ಭಾರತ ಸರ್ಕಾರವು ಮರಾಠಿಯನ್ನು ಶಾಸ್ತ್ರೀಯ ಭಾಷೆಯಾಗಿ ಗೊತ್ತುಪಡಿಸಿದೆ.
ಮರಾಠಿ ದೇವನಾಗರಿ ಲಿಪಿಯನ್ನು ಹೊಂದಿದೆ. ಮರಾಠಿ ಭಾಷಿಕರಿಗೂ ಅವರದ್ದೇ ಆದ ಆಚಾರ, ವಿಚಾರ, ಸಂಸ್ಕೃತಿಯಿದೆ. ಮರಾಠಿಗರ ಭಾಷೆ ನಮಗೆ ಹಿಂದಿಯಂತೆಯೇ ಕೇಳಿಸಿದರೂ ಕೂಡಾ ಈ ಭಾಷೆ ವಿಭಿನ್ನ. ಸಂಸ್ಕೃತಿ, ಕಲೆ, ಹಾಡು, ನೃತ್ಯ ಎಲ್ಲವೂ ಶ್ರೀಮಂತ ಮತ್ತು ಇದು ಮಹಾರಾಷ್ಟ್ರದೆಲ್ಲೆಡೆ ಪ್ರಭಾವವೂ ಬೀರಿದೆ. ಲಾವಣಿ, ಪೊವಾಡ, ದಿಂಡಿ, ರಾವತ್ ನಾಚಾ – ಇವೆಲ್ಲವೂ ಮರಾಠಿಗರ ಜಾನಪದ ನೃತ್ಯ ಕಲೆಗಳು. ಮರಾಠಿಗರ ಹಬ್ಬ, ಊಟ, ಕಲೆ ಎಲ್ಲವೂ ಮರಾಠಿ ಭಾಷೆಯೊಂದಿಗೆ ನಂಟು ಹೊಂದಿದೆ, ವೈವಿಧ್ಯವಾಗಿದೆ. ಮರಾಠಿ ಭಾಷೆ ಉಳಿವು ಎಂದರೆ ಇಡೀ ಸಂಸ್ಕೃತಿಯ ಉಳಿವು.
ಭಾಷೆಯ ಹೇರಿಕೆಯ ಆಪತ್ತು
ಒಂದು ಭಾಷೆಯನ್ನು ಇತರೆ ಭಾಷಿಕರ ಮೇಲೆ ಹೇರುವುದು ಒಂದು ಭಾಷೆಯ ನಾಶಕ್ಕೆ ಕಾರಣವಾಗುವುದು ಮಾತ್ರವಲ್ಲದೆ, ಮೇಲೆ ತಿಳಿಸಿದಂತೆ ಆ ಭಾಷಿಕರ ಸಂಸ್ಕೃತಿ, ಕಲೆ, ಆಚರಣೆಗಳ ಅಳಿವಿಗೂ ಒಂದು ನೈಜ ನೆವವಾಗುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬಾಂಗ್ಲಾದೇಶದ ಹುಟ್ಟು. ಪೂರ್ವ ಪಾಕಿಸ್ತಾನದಲ್ಲಿದ್ದ ಬೆಂಗಾಳಿ ಭಾಷಿಕರ (ಬಾಂಗ್ಲಾ ಭಾಷೆ) ಮೇಲೆ ಪಾಕ್ ಸರ್ಕಾರ ಉರ್ದು ಹೇರಿಕೆ ಮಾಡಿದ ಪರಿಣಾಮವೇ ಆ ಭಾಷಿಕರ ಪ್ರತ್ಯೇಕ ದೇಶದ ಸ್ಥಾಪನೆ. ಇಂತಹ ಗಮನಾರ್ಹ ಬದಲಾವಣೆಗೂ ಭಾಷಾ ಹೇರಿಕೆ ಕಾರಣವಾಗಬಹುದು. ಆದ್ದರಿಂದ ಹೇರಿಕೆಯೆಂಬ ಅಸ್ತ್ರ ಹಿಮ್ಮುಖ ಚಲಿಸಿ ನಮ್ಮ ಮೇಲೆಯೇ ದಾಳಿ ಮಾಡಬಹುದು.
ಬಿಜೆಪಿಯಂತೆಯೇ ಶಿವಸೇನೆಯ ಸೈದ್ಧಾಂತಿಕ ನಿಲುವು ಕೂಡಾ ಬಲಪಂಥೀಯವೇ ಆಗಿದೆ. ಉದ್ಧವ್ ಠಾಕ್ರೆ ಆಗಲಿ ಅಥವಾ ಏಕನಾಥ್ ಶಿಂದೆ ಆಗಲಿ- ಬಲಪಂಥೀಯವಾದಿಗಳೇ ಆಗಿದ್ದಾರೆ. ಶಿವಸೇನೆ ಮರಾಠಿಗಳ ಬಲದಲ್ಲೇ ಬೆಳೆದಿರುವುದು, ವಿಸ್ತಾರವಾಗಿರುವುದು. ಮರಾಠಿಯನ್ನು ಬದಿಗೊತ್ತಿ ಹಿಂದಿ ಹೇರಿಕೆ ಮಾಡುವುದನ್ನು ಉದ್ಧವ್ ಠಾಕ್ರೆ ಬಲವಾಗಿ ಖಂಡಿಸಿದ್ದಾರೆ. ಆದರೆ ಬಿಜೆಪಿ ಮೈತ್ರಿಯ ಜೋಳಿಗೆಯಲ್ಲಿ ಕೂತಿರುವ ಏಕನಾಥ್ ಶಿಂದೆ ತನ್ನ ಮರಾಠಿತನವನ್ನು ಬಿಟ್ಟು ಹಿಂದಿ ಹೇರಿಕೆ ವಿರುದ್ಧವಾಗಿ ಚಕಾರ ಎತ್ತಲಿಲ್ಲ. ಇನ್ನೊಂದೆಡೆ ಪ್ರಮುಖ ರಾಜಕೀಯ ಬದಲಾವಣೆಯಲ್ಲಿ ತಮ್ಮೆಲ್ಲಾ ರಾಜಕೀಯ ವೈಮನಸ್ಸನ್ನು ಬಿಟ್ಟು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಮರಾಠಿ ಉಳಿವಿಗಾಗಿ ಒಂದಾಗುವ ಸುಳಿವೂ ಬಂದಿತ್ತು.
ಇವೆಲ್ಲವುದರ ನಡುವೆ ಬಿಜೆಪಿ- ಆರ್‌ಎಸ್‌ಎಸ್ ತನ್ನ ಆಡಳಿತದ ರಾಜ್ಯದಲ್ಲೇ ವೈಫಲ್ಯವನ್ನು ಕಂಡಂತಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯ ಕಚೇರಿ ಇರುವುದು ಮಹಾರಾಷ್ಟ್ರದ ನಾಗ್ಪುರದಲ್ಲಿ. ಹಿಂದಿ, ಹಿಂದೂ, ಹಿಂದೂಸ್ತಾನ ಎಂಬುದು ಆರ್‌ಎಸ್‌ಎಸ್‌ನ ಮೂಲ ಘೋಷಣೆ. ಆದರೆ ತನ್ನ ಮುಖ್ಯ ಕಚೇರಿ ಇರುವ ರಾಜ್ಯದಲ್ಲೇ ಭಾಷಾ ಹೇರಿಕೆ ಮಾಡಲಾಗದ ಸೋಲನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿಗೆ ಆರ್‌ಎಸ್‌ಎಸ್ ತಲುಪಿದೆ. ಇನ್ನೊಂದೆಡೆ ಬಿಜೆಪಿಗೂ ಅದೇ ಮುಖಭಂಗವಾಗಿದೆ.
ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಹಿನ್ನಡೆಯನ್ನು ಕಂಡ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಾಣುವಲ್ಲಿ ಸಫಲವಾಯಿತು. ಆ ಹುಮ್ಮಸ್ಸಿನಲ್ಲಿ ಕೇಂದ್ರದ ಎಲ್ಲಾ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡಲು ಮುಂದಾಯಿತು. ಈ ವೇಳೆ ಜನರ ಸಂಸ್ಕೃತಿ, ಜನಮನವನ್ನು ಅರಿಯುವುದರಲ್ಲಿ ಎಡವಿತು. ನೇರವಾಗಿ ಹೇಳುವುದಾದರೆ ಬಿಜೆಪಿಗೆ ಅದು ಬೇಕಾಗಿಯೂ ಇಲ್ಲ. ತನ್ನ ಅಜೆಂಡಾವನ್ನು ನಿಧಾನವಾಗಿ ಜನರಿಗೆ ಹೊಕ್ಕಿಸುವಲ್ಲಿ ನಿಪುಣತೆಯನ್ನು ಹೊಂದಿದೆ. ಆದರೆ ಆ ವೇಳೆ ಪ್ರಯತ್ನಗಳು ಮಹಾರಾಷ್ಟ್ರದಲ್ಲಿ ವಿಫಲವಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.