“ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಬಹಳ ದೊಡ್ಡದಿತ್ತು. ಸ್ವತಂತ್ರ ಹೋರಾಟದಲ್ಲಿ ಮಹಾತ್ಮ ಗಾಂಧಿ ಮತ್ತು ಸಂವಿಧಾನದ ರಚನೆಯಲ್ಲಿ ಡಾ.ಅಂಬೇಡ್ಕರ್ ಸೇರಿದಂತೆ ಅನೇಕ ವಕೀಲರು ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ಇಂದು ಸಮಾಜದಲ್ಲಿ ಭ್ರಷ್ಟಾಚಾರ, ದೌರ್ಜನ್ಯ, ಅನ್ಯಾಯ, ಅಸಮಾನತೆ ತಡೆಯುವ ನಿಟ್ಟಿನಲ್ಲಿ ವಕೀಲರು ಮುಂದೆ ಬರುತ್ತಿಲ್ಲ. ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದು ದೇಶದಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಆದರೆ ಸಮಾಜದಲ್ಲಿರುವ ಭ್ರಷ್ಟಾಚಾರಿಗಳು ಸಹ ಮುಸುಕು ಧರಿಸಿರುವ ಭಯೋತ್ಪಾದಕರಾಗಿದ್ದು, ದೇಶದ ಅಭಿವೃದ್ಧಿಗೆ ಕಂಟಕವಾಗಿದ್ದಾರೆ” ಎಂದು ದಾವಣಗೆರೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಎಂದು ವಿಷಾದ ವ್ಯಕ್ತಪಡಿಸಿದರು.

ದಾವಣಗೆರೆ ನಗರದ ಜಿಲ್ಲಾ ನ್ಯಾಯಾಲಯದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಈದಿನ ಡಾಟ್ ಕಾಮ್ ಮಾಧ್ಯಮದ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಬಿಡುಗಡೆ, ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ-1984 ಅಡಿ ವಕೀಲರ ಪಾತ್ರದ ಕುರಿತು ಉಪನ್ಯಾಸ ಮಾಲಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದಲ್ಲೂ ಸಹ ಭ್ರಷ್ಟಾಚಾರ ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಪ್ರಜ್ಞಾವಂತರಾದ ವಕೀಲರು ಇವುಗಳ ವಿರುದ್ಧ ಧ್ವನಿ ಎತ್ತಬೇಕು. ವಕೀರ ಸಂಘದ ಮೂಲಕ ಪ್ರತಿ ಹಳ್ಳಿಗಳಿಗೆ ತೆರಳಿ, ಬಡವರು ಹಾಗೂ ಅಶಕ್ತರಿಗೆ ಕಾನೂನಿನ ನೆರವು ಒದಗಿಸಬೇಕು. ಸ್ಥಳೀಯ ಸಮಸ್ಯೆಗಳ ಬಗೆಹರಿಸಲು ವಕೀಲರು ಹಾಗೂ ಸಂಘ ಪ್ರಯತ್ನಿಸಿದರೆ, ಸಾಕಷ್ಟು ಬದಲಾವಣೆಯನ್ನು ಸಮಾಜದಲ್ಲಿ ಕಾಣಬಹುದು. ಇಂದು ವಕೀಲರು ಕೇವಲ ಕೋರ್ಟ್ಗಳಲ್ಲಿ ಕಾಣಸಿಗುತ್ತಾರೆ. ಸಮಾಜದಲ್ಲಾಗುತ್ತಿರುವ ಅನ್ಯಾಯ ತಡೆಯುವಲ್ಲಿ ವಕೀಲರ ಪಾತ್ರ ಕಾಣಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನ್ಯಾಯಾಂಗ ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ವಕೀಲರೇ ಮುಖ್ಯಕಾರಣ. ವಕೀಲರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ನ್ಯಾಯಾಂಗ ಕ್ಷೇತ್ರ ಸುಧಾರಣೆ ಕಾಣಲಿದೆ. ಕಲುಷಿತ ಹಾಗೂ ತ್ಯಾಜ್ಯ ನೀರನ್ನು ನದಿಗಳು ಹಾಗೂ ಕೆರೆ ಮೂಲಗಳಿಗೆ ಹರಿಸಲಾಗುತ್ತದೆ. ಕೆರೆಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಅರಣ್ಯ ನಾಶವಾಗುತ್ತಿದೆ. ಇವುಗಳನ್ನು ತಡೆಗಟ್ಟಲು ವಕೀಲರು ಪಣ ತೊಡಬೇಕು.ವಕೀಲರು ಒಗ್ಗಟ್ಟಾಗಿ ನಿಂತು ಅಧಿಕಾರಿಗಳನ್ನು ಪ್ರಶ್ನಿಸಿಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನ್ಯಾಯಬೆಲೆ ಅಂಗಡಿ ಮಂಜೂರು ವೇಳೆ ಅಕ್ರಮ ಆರೋಪ, ಇಲಾಖಾ ವ್ಯವಸ್ಥಾಪಕಿ ಶಬೀನಾ ಪರ್ವಿನ್ ಅಮಾನತು.
“ಸಂವಿಧಾನ ರಾಷ್ಟ್ರೀಯ ಗ್ರಂಥವಾಗಿದೆ. ಇದರ ರಕ್ಷಣೆಗೆ ಪ್ರತಿಯೊಬ್ಬರು ಕಂಕಣ ಬದ್ದರಾಗಬೇಕು. ‘ಧರ್ಮೋ ರಕ್ಷಿತಿ ರಕ್ಷಿತಃ ‘ ಎಂಬ ಉಕ್ತಿಯಂತೆ ‘ಸಂವಿಧಾನ ರಕ್ಷಿತಿ ರಕ್ಷಿತಃ’ ಎಂಬುದನ್ನು ನಾನು ಪ್ರಸ್ತಾಪಿಸುತ್ತೇನೆ. ಸಂವಿಧಾನವನ್ನು ನಾವು ಕಾಪಾಡಿದರೆ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತದೆ. ಸಂವಿಧಾನದ ಆಶಯ ಹಾಗೂ ತತ್ವಗಳಿಗೆ ಧಕ್ಕೆ ಬರದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ಸಂವಿಧಾನ ಕದಲಿದರೆ ದೇಶದಲ್ಲಿ ಕಂಪನ ಉಂಟಾಗುತ್ತದೆ. ಸಂವಿಧಾನ ಇಲ್ಲವಾದರೆ ಅರಾಜಕತೆ ತಾಂಡವವಾಡುತ್ತದೆ. ನಮ್ಮ ಸಂವಿಧಾನ ಮಾನವ ಹಕ್ಕುಗಳನ್ನು ನೀಡುವುದರೊಂದಿಗೆ ಸ್ವಾತಂತ್ರ್ಯ, ನ್ಯಾಯ, ಸಮಾನತೆ ಹಾಗೂ ಸಹೋದರ ತತ್ವಗಳನ್ನು ಜಗತ್ತಿಗೆ ಸಾರಿದ ಪ್ರಪಂಚದ ಎಲ್ಲಾ ದೇಶಗಳಿಗಿಂತ ಸರ್ವ ಶ್ರೇಷ್ಠ ಸಂವಿಧಾನ ಭಾರತದ್ದು. ಸಾಮಾಜಿಕ ನ್ಯಾಯವೇ ಭಾರತ ಸಂವಿಧಾನದ ಜೀವಾಳ” ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಉಲ್ಲೇಖಿಸಿದರು.

“ಇಂದು ಅಂಬೇಡ್ಕರರನ್ನು ನಾವು ಸ್ಮರಿಸಲು ಕಾರಣ ಅವರ ನ್ಯಾಯ, ಸಮಾನತೆ ಮತ್ತು ದೇಶಪ್ರೇಮ. ಇವುಗಳನ್ನು ಸಮಾಜ ಹಾಗೂ ಉತ್ತಮ ಆಡಳಿತಕ್ಕೆ ವಕೀಲರು ರೂಡಿಸಿಕೊಳ್ಳಬೇಕು. ಸಮಾಜದಲ್ಲಿ ವಕೀಲರಿಗೆ ವಿಶೇಷವಾದ ಗೌರವ ಇದೆ. ಸಮಾಜದಲ್ಲಿ ಎಲ್ಲರೂ ಗೌರವಯುತವಾಗಿ ಜೀವನ ನಡೆಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಅನ್ಯಾಯಕ್ಕೊಳಗಾದವರಿಗೆ ಕಾನೂನು ರಕ್ಷಣೆ ನೀಡುವ ಮೂಲಕ ನ್ಯಾಯ ದೊರಕಿಸಲು ಮುಂದಾಗಬೇಕು” ಎಂದು ವಕೀಲರಿಗೆ ನ್ಯಾಯಮೂರ್ತಿ ಬಿ.ವೀರಪ್ಪ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಜರುಗಿದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ನಾಗರಿಕರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಆಚರಿಸಲಾಯಿತು. ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಈದಿನ ಡಾಟ್‌ಕಾಂ ಮಾಧ್ಯಮ ಹೊರತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಹಾಗೂ ಡಾ.ಅನುಪಮಾ ಅನುವಾದಿತ”ಭೀಮಯಾನ” ಕೃತಿಗಳನ್ನು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಬಿಡುಗಡೆ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, “ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಮುಖ್ಯಹಾಕಿ ಎಸಿಬಿಯನ್ನು ಜಾರಿಗೆ ತಂದಿತ್ತು. ಸಂವಿಧಾನಾತ್ಮಕ ಸ್ವಾಯತ್ತಸಂಸ್ಥೆ ಲೋಕಾಯುಕ್ತವನ್ನು ಮರು ಸ್ಥಾಪಿಸಿದ ಮತ್ತು ಮರುಸ್ಥಾಪಿಸಲು ಆದೇಶ ನೀಡಿದ ಕೀರ್ತಿ ನ್ಯಾ.ವೀರಪ್ಪನವರಿಗೆ ಸಲ್ಲುತ್ತದೆ. ಅವರು ಉತ್ತಮ ಕಬಡ್ಡಿ ಮತ್ತು ಕುಸ್ತಿಪಟುವಾಗಿದ್ದು ನ್ಯಾಯಾಧೀಶರಾಗಿದ್ದ ಸಮಯದಲ್ಲೂ ಮತ್ತು ಈಗಲೂ ಕೂಡ ಸಮಾಜದ ಭ್ರಷ್ಟಾಚಾರಿಗಳ ನಿಗ್ರಹಕ್ಕೆ ಕುಸ್ತಿ ಆಡುತ್ತಿದ್ದಾರೆ. ನ್ಯಾಯಾಂಗದಲ್ಲೂ ಭ್ರಷ್ಟಾಚಾರದ ಆರೋಪಗಳು ಕೇಳುತ್ತಿರುವ ಈ ಸಮಯದಲ್ಲಿ ನ್ಯಾಯಾಂಗಕ್ಕೆ ನ್ಯಾ. ಬಿ. ವೀರಪ್ಪನವರಂತಹ ನ್ಯಾಯನಿಷ್ಠ ನ್ಯಾಯಾಧೀಶರ ಅಗತ್ಯ ಹೆಚ್ಚಿದೆ. ಅಲ್ಲದೆ ಈ ವಿಷಯದಲ್ಲಿ ವಕೀಲರ ಪಾತ್ರವು ದೊಡ್ಡದಿದ್ದು ಅಂಬೇಡ್ಕರ್ ರವರ ಜೊತೆಯಲ್ಲಿ ಸಂವಿಧಾನ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ದಾವಣಗೆರೆ ಮೂಲದ ಸಿದ್ದವೀರಪ್ಪನವರು ಕೂಡ ದಾವಣಗೆರೆ ಸಂಘದ ವಕೀಲರಾಗಿದ್ದರು ಎನ್ನುವುದು ನಮ್ಮ ವಕೀಲರ ಸಂಘಕ್ಕೆ ಮತ್ತು ಇಡೀ ದಾವಣಗೆರೆಗೆ ಹೆಮ್ಮೆ” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪಹಲ್‌ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿಗೆ ಎಸ್‌ಯುಸಿಐ(ಸಿ) ಖಂಡನೆ,
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷೆ ವೇಲಾ.ಡಿ.ಕೆ, ಕರ್ನಾಟಕ ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ, ವಿ.ಎನ್.ಮಿಲನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ವಕೀಲ ಸಿ.ಪಿ.ಸಿದ್ದೇಶ್, ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ, ಭಾಗ್ಯಲಕ್ಷ್ಮೀ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ವಕೀಲರು, ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.