ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಬಿಜೆಪಿ ಕರ್ನಾಟಕ ಘಟಕವು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಚೋದನಾಕಾರಿಯಾಗಿ ಪೋಸ್ಟ್ ಹಾಕಿದೆ. ಆ ಪೋಸ್ಟ್ ಹಾಕಿದ್ದರ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದ್ದು, ಬಿಜೆಪಿಯನ್ನು ತರಾಟೆಗೆ ತೆದುಕೊಂಡಿದೆ.
“ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋದ ಹಿಂದುಗಳನ್ನು ‘ನಿಮ್ಮ ಧರ್ಮ ಯಾವುದೆಂದು’ ಕೇಳಿ ಹತ್ಯೆ ಮಾಡಿರುವುದು ಜಿಹಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ” ಎಂಬ ಶೀರ್ಷಿಕೆಯೊಂದಿಗ ವಿಡಿಯೋವನ್ನು ಹಂಚಿಕೊಂಡಿದೆ. ಆ ವಿಡಿಯೋದಲ್ಲಿ; “ಭಯೋತ್ಪಾದಕರು ಗುಂಡು ಹಾರಿಸುವಾಗ ಉಗ್ರರು ಜಾತಿ ಕೇಳಲಿಲ್ಲ, ನಿಮ್ಮ ಧರ್ಮ ಕೇಳಿದರು. ಉಗ್ರರು ರಾಜಕೀಯ ಪಕ್ಷ ಕೇಳಲಿಲ್ಲ, ನಿಮ್ಮ ಧರ್ಮ ಕೇಳಿದರು. ಉಗ್ರರು ಯಾವ ರಾಜ್ಯ ಎಂದು ಕೇಳಲಿಲ್ಲ, ನಿಮ್ಮ ಧರ್ಮ ಕೇಳಿದರು. ಉಗ್ರರು ನಿಮ್ಮ ಭಾಷೆ ಕೇಳಲಿಲ್ಲ, ನಿಮ್ಮ ಧರ್ಮ ಕೇಳಿದರು. ಹಿಂದುಗಳು ಒಂದಾಗದಿದ್ದರೆ ಖಂಡಿತವಾಗಿ ನಾಳೆ ಮತ್ತಷ್ಟು ಗುಂಡಿನ ದಾಳಿಗಳು ಕೇಳಲಿದೆ” ಎಂದೂ ಬರೆದಿತ್ತು.
ಆ ಪೋಸ್ಟ್ ಮತ್ತು ವಿಡಿಯೋ ವಿಚಾರವಾಗಿ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. “ಕರ್ನಾಟಕದ ಮೂವರು ಸೇರಿ ಕನಿಷ್ಠ 28 ಮಂದಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ದುರ್ಘಟನೆಯ ಕುರಿತು ಇಡೀ ದೇಶ ಕಂಬನಿ ಮಿಡಿಯುತ್ತಿದೆ. ಈ ಸಂದರ್ಭದಲ್ಲಿ, ಇಂತಹ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿಯ ಸಾಮಾಜಿಕ ಮಾಧ್ಯಮ ಖಾತೆಗಳ ಅಡ್ಮಿನ್ ಒಬ್ಬ ಅರಿವುಗೇಡಿ” ಎಂದು ಕಡಿಕಾರಿದೆ. ಎಂದು ವಾಗ್ದಾಳಿ ನಡೆಸಿದೆ.
“ಪಹಲ್ಗಾಮ್ ದಾಳಿ ನಡೆದಾಗ ಮೋದಿ ಎಲ್ಲಿದ್ದರು? ಪುಲ್ವಾಮದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹತ್ಯೆಗೀಡಾದಾಗ ಮೋದಿ ಎಲ್ಲಿದ್ದರು? “ಪುಲ್ವಾಮಾ ದಾಳಿ ಪ್ರಕರಣದ ತನಿಖೆ ಏನಾಯಿತು? ಪಹಲ್ಗಾಮ್ ಹತ್ಯಾಕಾಂಡವು ಭಾರೀ ಗುಪ್ತಚರ ವೈಫಲ್ಯ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿಫಲತೆ ಇದೆ ಎಂದೆನಿಸುತ್ತಿಲ್ಲವೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ನಿಮಗನ್ನಿಸುತ್ತಿಲ್ಲವೆ?” ಎಂದೂ ಪ್ರಶ್ನಿಸಿದೆ.
“ಎಪ್ರಿಲ್ 16ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರು ಕಾಶ್ಮೀರವು ಪಾಕಿಸ್ತಾನದ ಕಂಠನಾಳ ಎಂದು ಬಣ್ಣಿಸಿದ್ದರು. ಇದು ಭಯೋತ್ಪಾದಕ ದಾಳಿಗೆ ಪ್ರಚೋದನೆ ನೀಡಿದೆ. ಪಹಲ್ಗಾಮ್ ಬಳಿ ಸಾವಿರಾರು ಪ್ರವಾಸಿಗರು ನೆರೆದಿದ್ದಾಗ, ಅಲ್ಲಿ ಯಾಕೆ ಭದ್ರತಾ ಸಿಬ್ಬಂದಿಗಳಿರಲಿಲ್ಲ? ಭಯೋತ್ಪಾದಕರು ತಪ್ಪಿಸಿಕೊಂಡಿದ್ದು ಹೇಗೆ? 24 ಗಂಟೆ ಕಳೆದರೂ, ಅವರನ್ನು ಪತ್ತೆ ಹಚ್ಚಲು ಏಕೆ ಸಾಧ್ಯಾವಾಗಿಲ್ಲ?” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಭಾರತ-ಪಾಕಿಸ್ತಾನ ಗಡಿಯಿಂದ 200 ಕಿಮೀ ದೂರವಿರುವ ಪಹಲ್ಗಾಮ್‌ಗೆ ಭಯೋತ್ಪಾದಕರು ತಲುಪಿದ್ದು ಹೇಗೆ? ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯು ಭಾರಿ ಸಂಘಟಿತ ಕೃತ್ಯಗಳ ಬದಲು ಛಾಯಾ ಸಮರದ ಹಂತಕ್ಕೆ ಇಳಿದಿದೆ ಎಂದು ಅಮಿತ್ ಶಾ ನೀಡಿದ್ದ ಉಡಾಫೆ ಹೇಳಿಕೆಯಿಂದಾಗಿ ಭದ್ರತಾ ಪಡೆಗಳು ಮೈಮರೆತವೇ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಉರಿ ದಾಳಿ ನಡೆದಾಗ ಬಿಜೆಪಿ ಸರಕಾರವಿತ್ತು. ಕಾರ್ಗಿಲ್ ದಾಳಿಯು ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಪುಲ್ವಾಮಾ ದಾಳಿ ನಡೆದಾಗ ಬಿಜೆಪಿ ಸರಕಾರವಿತ್ತು. ಅಮರನಾಥ ದಾಳಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಪಠಾಣ್ ಕೋಟ್ ದಾಳಿ ನಡೆದಾಗ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಸಂಸತ್ ಮೇಲಿನ ದಾಳಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಅಕ್ಷರಧಾಮ ದಾಳಿಯು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಡೆಯಿತು. ಕಂದಹಾರ್ ಐಸಿ814 ವಿಮಾನ ಅಪಹರಣ ನಡೆದಾಗ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಲ್ಲಿತ್ತು. ಕಾಶ್ಮೀರಿ ಹಿಂದೂಗಳ ವಲಸೆಯು ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯಿತು. ಈಗ ನಡೆದ ಪೆಹಲ್ಗಾಮ್ ದಾಳಿಯೂ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆದಿದೆ” ಎಂದಿದೆ.
“ಬಿಜೆಪಿಗರೇ, ನಿಮಗೆ ಮೃತದೇಹಗಳೊಂದಿಗೆ ರಾಜಕೀಯದಾಟ ಆಡುವ ಅಭ್ಯಾಸವಿದ್ದು, ಈ ಬಗ್ಗೆ ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದೆ. ಅವರು ನಿಮ್ಮನ್ನು 64 ಸ್ಥಾನಗಳಿಗೆ ಕುಗ್ಗಿಸಿದ್ದು, ಒಂದು ವೇಳೆ ನೀವೇನಾದರೂ ಸುಳ್ಳು ಹಾಗೂ ಅಪ್ರಚಾರಗಳನ್ನು ಹರಡುವುದನ್ನು ನಿಲ್ಲಿಸದಿದ್ದರೆ, ನಿಮ್ಮ ಸ್ಥಾನ ಇನ್ನೂ 15ರಿಂದ 20ರಷ್ಟು ಕಡಿಮೆಯಾಗಲಿದೆ. ನಿಮ್ಮ ಬೆಂಬಲಿಗರ ಮಿದುಳಿಗೆ ನಂಜು ತುಂಬುವುದನ್ನು ಇನ್ನಾದರೂ ನಿಲ್ಲಿಸಿ” ಎಂದು ಹೇಳಿದೆ.
“ನಿಮ್ಮ ಬಾಯಿ ಮುಚ್ಚಿಕೊಂಡಿರಿ. ವಿರೋಧ ಪಕ್ಷಗಳೊಂದಿಗೆ ಕೇಂದ್ರ ಸರಕಾರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ, ದುಃಖತಪ್ತ ಕುಟುಂಬಗಳು ಹಾಗೂ ಭಾರತೀಯರಿಗೆ ನ್ಯಾಯವೊದಗಿಸಲಿ. ಒಂದಿಷ್ಟು ಸಭ್ಯತೆಯನ್ನಾದರೂ ಕಲಿಯಿರಿ” ಎಂದು ಕಾಂಗ್ರೆಸ್ ಹೇಳಿದೆ.