ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಸಂಭವಿಸಿದ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ 28 ಮಂದಿ ಅಮಾಯಕರಲ್ಲಿ ಸ್ಥಳೀಯ ಪೋನಿವಾಲಾ (ಕುದುರೆ ಸವಾರ) ಸೈಯದ್ ಆದಿಲ್ ಹುಸೇನ್ ಶಾ ಕೂಡ ಒಬ್ಬರು.
ಆದಿಲ್, ಪಹಲ್ಗಾಮ್ ಕಾರು ಪಾರ್ಕಿಂಗ್ ಸ್ಥಳದಿಂದ ಕುದುರೆಯ ಮೇಲೆ ಪ್ರವಾಸಿಗರನ್ನು ಬೈಸರನ್ ಹುಲ್ಲುಗಾವಲಿಗೆ ಕರೆದುಕೊಂಡು ಹೋಗುವ ಸವಾರನ ಕೆಲಸ ಮಾಡುತ್ತಿದ್ದರು. ಪ್ರವಾಸಿಗರ ಮೇಲೆ ಮನಬಂದಂತೆ ಉಗ್ರರು ಗುಂಡು ಹಾರಿಸುತ್ತಿದ್ದಾಗ, ಆದಿಲ್ ಧೈರ್ಯ ಮಾಡಿ ಓರ್ವನ ಕೈಯಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸೈಯದ್ ಮೇಲೆ ಗುಂಡು ಹಾರಿಸಲಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಪತ್ ನಾರ್‌ನಲ್ಲಿ ಪತ್ನಿ, ಪೋಷಕರು ಮತ್ತು ಐದು ಕಿರಿಯ ಸಹೋದರರನ್ನೊಳಗೊಂಡು ವಾಸವಾಗಿದ್ದ ಸಾಧಾರಣ ಕುಟುಂಬ ಆದಿಲ್‌ನದ್ದು. ಮನೆಯ ಏಕೈಕ ಆಧಾರಸ್ತಂಭವಾಗಿದ್ದರು. ಪ್ರವಾಸಿಗರಿಗೆ ರೈಡಿಂಗ್ ಸೇವೆ ನೀಡುತ್ತಾ, ತಮ್ಮ ಕುಟುಂಬದ ಆರ್ಥಿಕ ಹೊರೆ ಹೊತ್ತಿದ್ದರು. ತಂದೆಯ ನಂತರ ಜವಾಬ್ದಾರಿಯೆಲ್ಲಾ ಅವರ ಮೇಲೇ ಬಿದ್ದಿತ್ತು. ಕುಟುಂಬದ ಪ್ರತಿಯೊಬ್ಬರ ಜೀವನ ಸಹ ಅವರು ಗಳಿಸುವ ಆದಾಯದ ಮೇಲೆಯೇ ನಿರ್ಣಯವಾಗುತ್ತಿತ್ತು.
ಆದಿಲ್‌ನ ಕಿರಿಯ ಸಹೋದರ ಸೈಯದ್ ನೌಶಾದ್ ಶಾ ಪ್ರವಾಸಿಗರಿಗೆ ವಾಹನ ಓಡಿಸುವ ತಾತ್ಕಾಲಿಕ ಕೆಲಸ ಮಾಡಿಕೊಂಡಿದ್ದಾರೆ. ದಾಳಿ ಕುರಿತು ಅವರು, “ಬೈಸರನ್‌ನಲ್ಲಿ ನಿಖರವಾಗಿ ಏನಾಯಿತು ಎಂಬುದು ನನಗೆ ಇನ್ನೂ ಗೊತ್ತಿಲ್ಲ. ಆದಿಲ್ ಹೇಗೆ ಸತ್ತನೆಂದು ಕೇಳಿದಾಗ, ಶ್ರೀನಗರದ ಆಸ್ಪತ್ರೆಗೆ ಬಂದಿದ್ದ ಮಹಿಳಾ ಪ್ರವಾಸಿಯೊಬ್ಬಳು ನನಗೆ ಹೀಗೆ ತಿಳಿಸಿದಳು. ಅವಳ ಮಾತಿನ ಪ್ರಕಾರ, ಉಗ್ರರು ಅವರ ತಂದೆಯ ಮೇಲೆ ನೇರವಾಗಿ ಗುಂಡು ಹಾರಿಸಿದಾಗ ಆದಿಲ್ ನೆಲಕ್ಕೆ ಬಿದ್ದಿದ್ದ. ಆ ಮಹಿಳೆಯೂ ಆ ಹೊತ್ತಿಗೆ ಬಿದ್ದಿದ್ದರು. ಆಗ ಆದಿಲ್ ಮತ್ತೆ ಎದ್ದು, ಉಗ್ರರ ಕಡೆ ನೋಡಿ ‘ನೀವು ಅಮಾಯಕರನ್ನು ಏಕೆ ಕೊಲ್ಲುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದರಂತೆ. ತಕ್ಷಣವೇ ಅವರು ಆದಿಲ್‌ನ ಮೇಲೂ ಗುಂಡು ಹಾರಿಸಿ ಕೊಂದಿದ್ದಾರೆ ಎಂದಳು.” ಎಂದು ಪ್ರತಿಕ್ರಿಯಿಸುತ್ತಾರೆ.

“ಅವನು ಮಂಗಳವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಕೆಲಸಕ್ಕೆಂದು ಮನೆ ಬಿಟ್ಟಿದ್ದ. ಬೈಸರನ್‌ಗೆ ಹೋಗಿ ಪ್ರವಾಸಿಗರನ್ನು ಕುದುರೆ ಮೇಲೆ ಕರೆದುಕೊಂಡು ಹೋಗುತ್ತಿದ್ದ. ಅವನ ಬಳಿ ಸ್ವಂತ ಪೋನಿ ಕೂಡ ಇರಲಿಲ್ಲ. ಮಾಲಿಕರ ಕುದುರೆ ಬಳಸಿಕೊಳ್ಳುತ್ತಿದ್ದ. ದಿನಕ್ಕೆ 400 ರಿಂದ 500 ರೂಪಾಯಿ ಸಂಪಾದನೆ ಮಾಡುತ್ತಿದ್ದ. ಕಳೆದ ವಾರ ಮಳೆ ಬಂದಿದ್ದ ಕಾರಣ ಅವನು ಮೂರು ದಿನ ಕೆಲಸಕ್ಕೆ ಹೋಗಿರಲಿಲ್ಲ. ಹಾಗಾಗಿ ಆ ದಿನ ಕೆಲಸಕ್ಕೆ ಹೋಗುವುದು ಅವನಿಗೆ ಬಹಳ ಮುಖ್ಯವಾಗಿತ್ತು. ಈಗ ಮಗನನ್ನು ಕಳೆದುಕೊಂಡು ಏನು ಮಾಡುವುದೆಂದು ತೋಚದಾಗಿದೆ” ಎನ್ನುತ್ತಾರೆ ಆದಿಲ್‌ನ ತಂದೆ ಸೈಯದ್ ಹೈದರ್ ಶಾ.
ಆದಿಲ್ ಅವರ ಸಂಬಂಧಿ ಮೊಹಿದ್ದೀನ್ ಶಾ, “ನಾವು ಈ ಪ್ರದೇಶದವರು, ಮತ್ತು ಈ ನಷ್ಟದ ನೋವನ್ನು ನಾವು ಅತ್ಯಂತ ಆಳವಾಗಿ ಅನುಭವಿಸುತ್ತೇವೆ. ಆದಿಲ್ ಬಡ ಕುಟುಂಬದಿಂದ ಬಂದವರು. ಇದು ನಮ್ಮ ಕಾಶ್ಮೀರಿಯತ್‌ಗೆ ಕಳಂಕವಾಗಿದೆ. ಈ ದಾಳಿಯ ತನಿಖೆ ನಡೆಸಿ ಆದಿಲ್‌ನಂತಹ ಮುಗ್ಧ ಜನರಿಗೆ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಅವರ ಕುಟುಂಬಕ್ಕೆ ನಮಗೆ ನ್ಯಾಯ ಬೇಕು” ಎಂದು ಮನವಿ ಮಾಡಿದ್ದಾರೆ.
“ಆದಿಲ್ ಕುಟುಂಬದಲ್ಲಿ ಹಿರಿಯ ಮಗ. ಅವನಿಗೆ ಮಕ್ಕಳು, ಹೆಂಡತಿ ಇದ್ದರು, ಮತ್ತು ಅವನು ಈ ಕುಟುಂಬದ ಬೆನ್ನೆಲುಬಾಗಿದ್ದನು. ಈಗ, ಅವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರು ಬಡವರು. ಸಹಾಯಕ್ಕಾಗಿ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದಿಲ್ ಕುಟುಂಬಕ್ಕೆ ಈಗ ಎಂದಿಗಿಂತಲೂ ಹೆಚ್ಚು ರಕ್ಷಣೆ ಮತ್ತು ಬೆಂಬಲದ ಅಗತ್ಯವಿದೆ” ಎಂದು ಆದಿಲ್ ಅವರ ಚಿಕ್ಕಪ್ಪ ಶಹೀದ್ ಬಗ್ ಸಿಂಗ್ ಕೇಳಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಿನ್ನೆ ಆದಿಲ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಬಳಿಕ X ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಆದಿಲ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಕುದುರೆಯ ಮೇಲೆ ಸಾಗಿಸುತ್ತಿದ್ದ ಪ್ರವಾಸಿಗರನ್ನು ರಕ್ಷಿಸುವ ಧೈರ್ಯಶಾಲಿ ಪ್ರಯತ್ನದ ಭಾಗವಾಗಿ ಭಯೋತ್ಪಾದಕರಲ್ಲಿ ಒಬ್ಬರಿಂದ ಆಯುಧವನ್ನು ಕಸಿದುಕೊಳ್ಳಲು ಮುಂದಾದಾಗ ಗುಂಡು ಹಾರಿಸಲ್ಪಟ್ಟ ಧೈರ್ಯಶಾಲಿ ಶಾ ಅವರಿಗೆ ‘ಫಾತಿಹಾ’ (ಸಮಾಧಿ ನಂತರ ಪ್ರಾರ್ಥನೆ) ಸಲ್ಲಿಸಲು ನಾನು ಇಂದು ಪಹಲ್ಗಾಮ್‌ಗೆ ಭೇಟಿ ನೀಡಿದ್ದೆ.. ಕುಟುಂಬದಲ್ಲಿ ಆದಿಲ್ ಏಕೈಕ ಸಂಪಾದನೆದಾರ ಮತ್ತು ಅವರ ಅಸಾಧಾರಣ ಶೌರ್ಯ ಮತ್ತು ತ್ಯಾಗ ಶಾಶ್ವತವಾಗಿ ಸ್ಮರಣೀಯವಾಗಿರುತ್ತದೆ. ತಮ್ಮ ಸರ್ಕಾರ ಆ ಕುಟುಂಬವನ್ನು ನೋಡಿಕೊಳ್ಳುತ್ತದೆ. ಪ್ರವಾಸಿಗರು ಇಲ್ಲಿಗೆ ಉತ್ತಮ ಸಮಯವನ್ನು ಕಳೆಯಲು ಬಂದರು ಮತ್ತು ಅವರನ್ನು ಶವಪೆಟ್ಟಿಗೆಯಲ್ಲಿ ವಾಪಸ್ ಕಳುಹಿಸಲಾಯಿತು. ಬಡ ಕಾರ್ಮಿಕನೊಬ್ಬ ಹಣ ಸಂಪಾದಿಸಲು ಮನೆ ಬಿಟ್ಟು ಹೋದನು, ಆದರೆ ಸತ್ತನು” ಎಂದು ಸಿಎಂ ಅಬ್ದುಲ್ಲಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ | ಮೂವರು ಭಯೋತ್ಪಾದಕರ ರೇಖಾಚಿತ್ರ ಬಿಡುಗಡೆ
ಈ ಹುತಾತ್ಮನ ನೆನಪಿನಲ್ಲಿ ಸದ್ಯಕ್ಕೆ ಕೆಲವು ಗಂಟೆಗಳ ಮೌನ, ಕೆಲವರ ಸಹಾನುಭೂತಿ. ಆದರೆ ನಂತರ? ಆದಿಲ್ ಶಾ ಒಬ್ಬ ಸಾಮಾನ್ಯ ನಾಗರಿಕ. ಅವನು ಯೋಧನಲ್ಲ, ರಾಜಕಾರಣಿಯಲ್ಲ, ಆದರೆ ತನ್ನ ಊರಿನ ಪ್ರವಾಸಿಗರ ಮೇಲೆ ಬಂದ ಅಪಾಯದ ನಡುವೆ ನಿಂತು, ತಾನೇ ಬಲಿಯಾದ. ಅವನೊಬ್ಬನ ಆದಾಯದ ಮೂಲದಿಂದಲೇ ಜೀವನ ಸಾಗಿಸುತ್ತಿದ್ದ ಆತನ ಕುಟುಂಬ ಈಗ ಆರ್ಥಿಕ ಸಂಕಟದಲ್ಲಿದೆ. ಅವನ ಸಾವಿಗೆ ಜವಾಬ್ದಾರಿ ಯಾರು? ಒಂದೊಮ್ಮೆ ಅವನೇನಾದರೂ ರಾಜಕಾರಣಿಯೋ, ದೊಡ್ಡ ಉದ್ಯಮಿಯೋ ಆಗಿದ್ದರೆ..ಪರಿಸ್ಥಿತಿ ಹೀಗಿರುತ್ತಿರಲಿಲ್ಲ.
ಸಾಮಾನ್ಯ ನಾಗರಿಕನ ಧೈರ್ಯವೂ ದೇಶಭಕ್ತಿಯಷ್ಟೇ ಅಮೂಲ್ಯವೆಂದು ಅರಿಯುವ ಸಮಯ ಇದು. ಆ ಧೈರ್ಯಕ್ಕೆ ಸರಿಯಾದ ಗೌರವ, ನೆರವು ಅವರಿಗೆ ಸಲ್ಲಲೇಬೇಕು. ಅಮಾಯಕರ ಜೀವ ಹಾರುವಾಗ, ಕೇವಲ ದುಃಖವಲ್ಲ, ಅದು ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಆದಿಲ್ ಯಾವುದೇ ರಾಜಕೀಯ ಸಂಘರ್ಷದ ಭಾಗಿಯಾಗಿರಲಿಲ್ಲ. ಪಹಲ್ಗಾಮ್‌ನಂತಹ ಪ್ರವಾಸಿ ಪ್ರದೇಶದಲ್ಲೂ ಉಗ್ರರು ನಿರ್ಭಯವಾಗಿ ದಾಳಿ ನಡೆಸುವ ಸ್ಥಿತಿ ಬಂದಿದ್ದಾದರೂ ಯಾರಿಂದ? ಪ್ರವಾಸಿಗರ ಭದ್ರತೆ ಯಾರ ಹೊಣೆ? ಉಗ್ರಗಾಮಿತ್ವದಿಂದ ಅಮಾಯಕರನ್ನು ರಕ್ಷಿಸುವುದು ಯಾರ ಜವಾಬ್ದಾರಿ? ಅತ್ಯಂತ ಭದ್ರವಾಗಿರಬೇಕಾದ ಪ್ರದೇಶದಲ್ಲಿ ಈ ಆಘಾತ ಸಂಭವಿಸಿರುವುದು ಭದ್ರತಾ ದೌರ್ಬಲ್ಯವಲ್ಲವೇ? ಅವನು ಪ್ರಾಣ ತೆತ್ತ ಬಳಿಕ ಮಾತ್ರ ದೇಶಭಕ್ತನೆಂಬ ಪದ ನಾವು ಬಳಸುತ್ತಿದ್ದರೆ, ಅದಕ್ಕೆ ಮೌಲ್ಯವಿದೆಯೇ?..