ಆರಂಭದಲ್ಲಿ ಹಣ ನೀಡಿ ಎಂದ ಬಿಜೆಪಿ ನಾಯಕರು ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ನೀಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಅವರ ಇಬ್ಬಗೆಯ ನೀತಿ ಗೊತ್ತಾಗುತ್ತಿದೆ. ಬಿಜೆಪಿ ಬಡವರ ಮೇಲೆ ಹೇಗೆ ಗದಾಪ್ರಹಾರ ಮಾಡುತ್ತಿದೆ ಎನ್ನುವುದು ಜನರಿಗೂ ಅರ್ಥವಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಗ್ಯಾರಂಟಿ ಯೋಜನೆಗಳ ಜಾರಿಗೆ ಸದನದಲ್ಲಿ ಪ್ರತಿಭಟನೆಗೆ ಮಾಡಲು ಬಿಜೆಪಿ ನಿರ್ಧರಿಸಿರುವ ಬಗ್ಗೆ ಶನಿವಾರ ಬೆಂಗಳೂರಿನಲ್ಲಿ ಅವರು ಪ್ರತಿಕ್ರಿಯಿಸಿ, “ಪ್ರತಿಭಟನೆ ಮಾಡಲಿ. ನಾವು ಅವರನ್ನು ತಡೆಯುವುದಿಲ್ಲ” ಎಂದರು.
“ಆರಂಭದಲ್ಲಿ ಹಣ ನೀಡಿ ಎಂದ ಬಿಜೆಪಿ ನಾಯಕರು ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ನೀಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಅವರ ಇಬ್ಬಗೆಯ ನೀತಿ ಗೊತ್ತಾಗುತ್ತಿದೆ. ಬಿಜೆಪಿ ಬಡವರ ಮೇಲೆ ಹೇಗೆ ಗದಾಪ್ರಹಾರ ಮಾಡುತ್ತಿದೆ, ಅಕ್ಕಿ ವಿಚಾರದಲ್ಲೂ ಅವರು ಹೇಗೆ ರಾಜಕೀಯ ಮಾಡುತ್ತಿದ್ದಾರೆ, ನಾವು ಜನರಿಗೆ ಅಕ್ಕಿ ನೀಡಲು ಎಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂಬುದು ಜನರಿಗೆ ಅರ್ಥವಾಗುತ್ತಿದೆ” ಎಂದು ಹೇಳಿದರು.
“ಅಕ್ಕಿ ಸಿಗುವವರೆಗೂ ಬೇರೆ ಪಕ್ಷಗಳ ಸಲಹೆಯಂತೆ ಹಣ ಕೊಡಲು ನಾವು ಮುಂದೆ ಬಂದಿದ್ದೇವೆ. ಜನರಿಗೆ ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ. 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ ಅಕ್ಕಿ ಸಿಗುವವರೆಗೂ ಅದಕ್ಕೆ ಪ್ರತಿಯಾಗಿ ಹಣ ನೀಡುತಿದ್ದೇವೆ” ಎಂದರು.
“ಬಿಜೆಪಿಯವರು ಕೊಟ್ಟ ಮಾತು ಈಡೇರದೇ ಇರುವುದರ ಬಗ್ಗೆ ಹೋರಾಟ ಮಾಡಲು ಮುಂದೆ ಬಂದರೆ ಸ್ವಾಗತ. ಅವರು ಹೋರಾಟದ ಮೂಲಕ ನಮ್ಮ ಯೋಜನೆಗೆ ಪ್ರಚಾರ ನೀಡುತ್ತಿದ್ದಾರೆ ಎಂದು ಭಾವಿಸಿಕೊಳ್ಳುವೆ” ಎಂದರು.