- ಸಿಬ್ಬಂದಿ ಸಲಹೆ ಮೇರೆಗೆ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ದೂರು
- ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು
ದೋಹಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ 51 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಜೂನ್ 27ರಂದು ನಡೆದಿದ್ದು, ಆರೋಪಿಯನ್ನು ತಮಿಳುನಾಡಿನ ಶಿವಗಂಗಾ ನಿವಾಸಿ ಅಮ್ಮವಾಸಾಯಿ ಮುರುಗೇಶನ್ ಎಂದು ಗುರುತಿಸಲಾಗಿದೆ. ಈತ ಖಾಸಗಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಓ) ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪೋಷಕರೊಂದಿಗೆ 13 ವರ್ಷದ ಬಾಲಕಿ ಪ್ರಯಾಣಿಸುತ್ತಿದ್ದಳು. ಈ ವೇಳೆ, ಬಾಲಕಿಯ ಪಕ್ಕದ ಆಸನದಲ್ಲಿ ಕುಳಿತಿದ್ದ ಆರೋಪಿ ಪ್ರಯಾಣದ ಸಮಯದಲ್ಲಿ ಬಾಲಕಿಗೆ ತಿಂಡಿ-ನೀರು ಕೇಳುವ ನೆಪದಲ್ಲಿ ಆಕೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬಾಲಕಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ತಾಯಿ ತಿಂಡಿ-ನೀರು ಏನು ಬೇಡ ಎಂದು ಆರೋಪಿಗೆ ಹೇಳಿದ್ದರು ಕೂಡ ಆತ ಪದೇ ಪದೇ ತಿಂಡಿ-ನೀರು ಕೇಳುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಾನೆ. ಬಳಿಕ ಬಾಲಕಿ ತಾಯಿ ವಿಮಾನದ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದ್ದಾರೆ. ಸಿಬ್ಬಂದಿ ಬಾಲಕಿ ಕುಳಿತ ಆಸನದಿಂದ ಮತ್ತೊಂದು ಆಸನಕ್ಕೆ ಸ್ಥಳಾಂತರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ₹500 ಕೋಟಿ ಅಕ್ರಮ ಆಸ್ತಿ | ತಹಶೀಲ್ದಾರ ಅಜಿತ್ ಕುಮಾರ್ ರೈ ಅಮಾನತು ಮಾಡಿದ ಕಂದಾಯ ಇಲಾಖೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಬಾಲಕಿಯ ಪೋಷಕರು ಸಿಬ್ಬಂದಿಯ ಸಲಹೆ ಮೇರೆಗೆ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯ ಪೋಷಕರು ನೀಡಿರುವ ದೂರು ಆಧರಿಸಿ ಆರೋಪಿ ಮುರುಗೇಶನ್‌ನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.