ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆ ಲಷ್ಕರ್–ಎ–ತೊಯ್ಬಾ(ಎಲ್ಇಟಿ) ಪ್ರಮುಖ ಕಮಾಂಡರ್ ಅಲ್ತಾಫ್ ಲಲ್ಲಿ ಎಂಬಾತನನ್ನು ಭಾರತೀಯ ಸೇನೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ. ಬಂಡಿಪೋರಾ ಜಿಲ್ಲೆಯ ಕುಲ್ನಾರ್ ಬಾಜಿಪುರ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಡಗಿದ್ದ ಭಯೋತ್ಪಾದಕರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್‌ಕೌಂಟರ್ ಆಗಿ ಬದಲಾಯಿತು ಎಂದು ಸೇನಾಧಿಕಾರಿ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ. ಘಟನೆಯಲ್ಲಿ ವಿವರವಾದ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.
ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ 28 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಉಗ್ರರ ಶೋಧ ಕಾರ್ಯಾಚರಣೆ ಚುರುಕುಗೊಂಡಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ ದಾಳಿಕೋರರನ್ನು ಬಂಧಿಸಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿರುವಾಗ ಗುಂಡಿನ ಚಕಮಕಿ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾಷಾ ವೈಷಮ್ಯ ಬಿತ್ತಿದ ಭಂಡರು, ಬಿತ್ತರಿಸಿದ ಬುದ್ಧಿಗೇಡಿಗಳು
ಈ ನಡುವೆ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ತಾಲೂಕಿನ ಗೋರಿ ಪ್ರದೇಶದಲ್ಲಿರುವ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಭಯೋತ್ಪಾದಕರೊಂದಿಗೆ ಭಾಗಿಯಾಗಿದ್ದ ಎನ್ನಲಾದ ಸ್ಥಳೀಯ ಭಯೋತ್ಪಾದಕ ಆಸಿಫ್ ಶೇಖ್‌ನ ಮನೆಯನ್ನು ಜಮ್ಮು ಮತ್ತು ಕಾಶ್ಮೀರದ ಟ್ರಾಲ್‌ನಲ್ಲಿ ಭದ್ರತಾ ಪಡೆ ಸ್ಫೋಟಿಸಿದೆ.
ಮತ್ತೊಬ್ಬ ಸ್ಥಳೀಯ ಭಯೋತ್ಪಾದಕ ಆದಿಲ್ ಥೋಕರ್ ಅಲಿಯಾಸ್ ಆದಿಲ್ ಗುರಿ ಎಂಬಾತ, ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯನ್ನು ಕಾರ್ಯಗತಗೊಳಿಸಲು ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಆರೋಪವಿದೆ. ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಶಂಕಿಸಲಾದ ಉಗ್ರನ ಮನೆಯನ್ನು ಭದ್ರತಾ ಪಡೆಗಳು ಬುಲ್ಡೋಜರ್ ಮೂಲಕ ನೆಲಸಮ ಮಾಡಿವೆ ಎಂದು ವರದಿಯಾಗಿದೆ.
ಪಹಲ್ಗಾಮ್‌ನಲ್ಲಿ ನಾಲ್ವರು ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮಾಡಿ 28 ಮಂದಿಯನ್ನು ಹತ್ಯೆ ಮಾಡಿದ್ದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದು, ಭಾರತದ ವಿವಿಧ ರಾಜ್ಯಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಆಗಮಿಸಿದ್ದರು.