ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನದ ಭಾಗವಾಗಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ನಾಳೆ (ಏ.26) ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ‘ಎದ್ದೇಳು ಕರ್ನಾಟಕ’ ಜಿಲ್ಲಾ ಸಂಯೋಜಕ ರಾಜೇಂದ್ರ ರಾಜವಾಳ ತಿಳಿಸಿದರು.
ಕಲಬುರಗಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು ಅವರು, ʼದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಹೋರಾಟಗಾರ್ತಿ ಮೇಧಾ ಪಾಟ್ಕರ್, ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್, ನಟ ಪ್ರಕಾಶ್ ರೈ, ಚಿಂತಕ ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಕೇರಳ, ಪಂಜಾಬ್, ದೆಹಲಿ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆʼ ಎಂದರು.
ʼಎದ್ದೇಳು ಕರ್ನಾಟಕʼ ಮತ್ತೊಂದು ಮಹಾ ಹೋರಾಟಕ್ಕೆ ಸಿದ್ಧವಾಗುತ್ತಿದೆ. ಜನಸಾಮಾನ್ಯರನ್ನು ಒಂದು ಪ್ರಬಲ ಸಾಮಾಜಿಕ ಶಕ್ತಿಯನ್ನಾಗಿಸುವ, ತಳಮಟ್ಟಕ್ಕಿಳಿದು ಜನರ ಅಂತರಾತ್ಮವನ್ನು ಜಾಗೃತಗೊಳಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಜನಹಿತಕ್ಕಾಗಿ ಪಟ್ಟು ಬಿಡದ ಸಂಘರ್ಷ ನಡೆಸುವ ಯೋಜನೆಯನ್ನು ರೂಪಿಸಿದೆ. ಈ ಮಹಾಕಾಯಕದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿರುವ ಒಂದು ಲಕ್ಷ ಸ್ವಯಂ ಸೇವಕರನ್ನು ಮುಂದಿನ ಒಂದು ವರ್ಷಗಳಲ್ಲಿ ಸಜ್ಜುಗೊಳಿಸುವ ಸವಾಲನ್ನು ಕೈಗೆತ್ತಿಕೊಂಡಿದೆʼ ಎಂದು ಅವರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಲಬುರಗಿ, ಯಾದಗಿರಿಯಲ್ಲಿ ಪ್ರತಿಭಟನೆ
ಪ್ರಮುಖರಾದ ಸಂಧ್ಯಾರಾಜ, ಸ್ಯಾಮುವೆಲ್, ಮುಬ್ಬಿನ್, ಮಹಾತೇಶ ಕವಲಗಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.