ಸವಾಲಿನ ಹಲವು ಹಂತಗಳನ್ನು ದಾಟಿ ಮುಂದೆ ಬರುವುದು ಕೆಲವೇ ಕೆಲವು ಸ್ಟಾರ್ಟ್‌ಅಪ್ ಕಂಪನಿಗಳು. ಅದಕ್ಕೆ ವರ್ಷಾನುಗಟ್ಟಲೇ ಪ್ರಯತ್ನ ಅತ್ಯಗತ್ಯ. ಒಂದು ಹಂತಕ್ಕೆ ಬೆಳೆದ ಅದೆಷ್ಟೋ ಸ್ಟಾರ್ಟ್‌ಅಪ್‌ಗಳು ಕೊನೆಗೆ ಅಂಬಾನಿ, ಅದಾನಿ, ಟಾಟಾದಂತಹ ಸಂಸ್ಥೆಗಳ ಸ್ವಾಧೀನಕ್ಕೆ ಒಳಗಾಗುತ್ತದೆ.
ಸ್ಟಾರ್ಟ್‌ಅಪ್ ಎಂಬುದು ಇಂದಿನ ಯುವ ಸಮುದಾಯದ ಕನಸು. ಸರ್ಕಾರದ ಪ್ರೋತ್ಸಾಹವೂ ಇದೆ. ಅದಕ್ಕೆ ಕಾರಣ ನಿರುದ್ಯೋಗ ಎಂದರೆ ತಪ್ಪೇನಲ್ಲ. ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದಂತೆ ಸಾಮಾನ್ಯವಾಗಿಯೇ ಜನರು ತಿರುಗುವುದು ಸ್ವ-ಉದ್ಯೋಗ ಅಥವಾ ಉದ್ಯಮ ಲೋಕಕ್ಕೆ. ಅಲ್ಲಿರುವ ಸ್ಪರ್ಧೆಯನ್ನು ಅರಿಯುವ ಮುನ್ನವೇ ತಮ್ಮ ಕಚೇರಿಯ ಬಾಗಿಲು ಮುಚ್ಚುವ ಸ್ಥಿತಿ ಬಂದಿರುತ್ತದೆ. ಕಳೆದ ಎರಡು ವರ್ಷದಲ್ಲಿ ಅಂತಹ ದುಸ್ಥಿತಿಗೆ ಬರೋಬ್ಬರಿ 28,000 ಸ್ಟಾರ್ಟ್‌ಅಪ್‌ಗಳು ತಲುಪಿದೆ.
2023 ಮತ್ತು 2024ರ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ 28,000ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳ ಬಾಗಿಲು ಬಂದ್ ಆಗಿವೆ. 2023ರಲ್ಲಿ 15,921 ಮತ್ತು 2024ರಲ್ಲಿ 12,717 ಸ್ಟಾರ್ಟ್‌ಅಪ್‌ಗಳು ಸೇವೆ ಸ್ಥಗಿತಗೊಳಿಸಿವೆ. ಈ ಪೈಕಿ ಬಹುತೇಕ ಸ್ಟಾರ್ಟ್‌ಅಪ್‌ಗಳು ದಿವಾಳಿಯಾದ ಕಾರಣದಿಂದಾಗಿಯೇ ಮುಚ್ಚಿಹೋಗಿವೆ. ಈ ಸಂಖ್ಯೆ 2025ರಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ಇದನ್ನು ಓದಿದ್ದೀರಾ? ಭಾರತದ 82 ಸ್ಟಾರ್ಟ್‌ಅಪ್‌ಗಳಲ್ಲಿ ಉದ್ಯೋಗ ಕಳೆದುಕೊಂಡ 23 ಸಾವಿರ ಟೆಕ್ಕಿಗಳು
Tracxn ವರದಿ ಪ್ರಕಾರ 2019 ಮತ್ತು 2022ರ ನಡುವಿನ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 2,300 ಸ್ಟಾರ್ಟ್‌ಅಪ್‌ಗಳನ್ನು ಮುಚ್ಚಲಾಗಿದೆ. ಆದರೆ 2023-24ರ ಎರಡು ವರ್ಷಗಳಲ್ಲೇ ಈ ಸಂಖ್ಯೆ 12 ಪಟ್ಟು ಹೆಚ್ಚಾಗಿದೆ. ಜೊತೆಗೆ ಹೊಸದಾಗಿ ಆರಂಭವಾದ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯೂ ಕೂಡಾ ಕಡಿಮೆಯಾಗಿದೆ. 2019 ಮತ್ತು 2022ರ ನಡುವೆ ಹೊಸದಾಗಿ 9,600 ಸ್ಟಾರ್ಟ್‌ಅಪ್‌ಗಳು ಶುರುವಾಗಿತ್ತು. ಆದರೆ 2023-2024ರ ನಡುವೆ ಬರೀ 5,264 ಸ್ಟಾರ್ಟ್‌ಅಪ್‌ಗಳ ಆರಂಭವಾಗಿದೆ.
2025ರಲ್ಲಿ ಈವರೆಗಿನ ಬೆಳವಣಿಗೆ ನೋಡಿದಾಗ ಈ ಸಂಖ್ಯೆಯು ಇನ್ನಷ್ಟೂ ಇಳಿಕೆಯೇ ಕಾಣಬಹುದು. ನಾಲ್ಕು ತಿಂಗಳ ಅವಧಿಯಲ್ಲಿ ಬರೀ 125 ಸ್ಟಾರ್ಟ್‌ಅಪ್‌ಗಳಷ್ಟೇ ಶುರುವಾಗಿವೆ. ಅದಕ್ಕಿಂತ ದುಪ್ಪಟ್ಟು ಸ್ಟಾರ್ಟ್‌ಅಪ್‌ಗಳು ಮುಚ್ಚಿಹೋಗಿವೆ. 2025ರಲ್ಲಿ ಈವರೆಗೆ 259 ಸ್ಟಾರ್ಟ್‌ಅಪ್‌ಗಳನ್ನು ಮುಚ್ಚಲಾಗಿದೆ. ಈ ಸಂಖ್ಯೆ ಇನ್ನಷ್ಟು ಏರಬಹುದು ಎನ್ನುತ್ತಾರೆ ತಜ್ಞರು. ದಿವಾಳಿಯಾಗಿ ಮುಚ್ಚಿಹೋದ ಸ್ಟಾರ್ಟ್‌ಅಪ್‌ಗಳ ಬಗ್ಗೆ ವರದಿಯಾದ ಬಳಿಕದ ಬೆಳವಣಿಗೆಯನ್ನು ನಾವು ಸುಲಭವಾಗಿ ಊಹಿಸಬಹುದು.
ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸೋಲಿಗೆ ಕಾರಣವೇನು?
ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸೋಲಿಗೆ ಹಲವು ಕಾರಣಗಳಿವೆ. ಯಾವುದೇ ಉದ್ಯಮ, ಉದ್ಯೋಗವಾಗಲಿ ಅಲ್ಲಿ ನಾವೀನ್ಯತೆ (innovation) ಮುಖ್ಯವಾಗುತ್ತದೆ. ಜೊತೆ ಜೊತೆಗೆ ಬಂಡವಾಳವೂ, ಅದರ ಸರಿಯಾದ ನಿರ್ವಹಣೆಯೂ ಅಗತ್ಯ. ಇವೆಲ್ಲವುದನ್ನು ಸರಿಯಾಗಿ ತೂಗಿಸಲು ಸಾಧ್ಯವಾಗದಿರುವುದೇ ಇಂದು ದೇಶದಲ್ಲಿ ಹೆಚ್ಚಾಗಿ ಸ್ಟಾರ್ಟ್‌ಅಪ್‌ಗಳು ಮುಚ್ಚಿಹೋಗಲು ಕಾರಣ. ಬರೀ ಹೆಸರಿಗಷ್ಟೇ ಇರುವ ಯೋಜನೆಗಳ ಪ್ರಯೋಜನವು ಬಂದು ತಲುಪುವಷ್ಟರಲ್ಲಿ ಮೂರು ಪಟ್ಟು ಸಾಲದ ಹೊಳೆಯಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿ ಈಜಬೇಕಾಗುತ್ತದೆ.
ಇದನ್ನು ಓದಿದ್ದೀರಾ? 262 ಕೋಟಿ ರೂ. ವಂಚನೆ: ಧೋನಿ, ದೀಪಿಕಾ ಪಡುಕೋಣೆ ಹೂಡಿಕೆ ಮಾಡಿದ್ದ ಬ್ಲೂಸ್ಮಾರ್ಟ್ ಕ್ಯಾಬ್ ಕಂಪನಿ ಬಂದ್
ಸ್ಟಾರ್ಟ್‌ಅಪ್‌ಗಳಿಗೆ ಮುಖ್ಯವಾಗಿ ಎದುರಾಗುವುದು ಫಂಡಿಂಗ್ ಸಮಸ್ಯೆ. ಯಾವುದೇ ಉದ್ಯಮವಾದರೂ ಬಂಡವಾಳವಿಲ್ಲದೆ ಮುಂದೆ ಸಾಗದು. ಈ ನಿಧಿ ಕ್ರೋಢೀಕರಣವೇ ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ತನ್ನ ವಿನೂತನ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುವ ಹಾದಿಯನ್ನು ತನ್ನ ಹೂಡಿಕೆದಾರರಿಗೆ ಸ್ಪಷ್ಟವಾಗಿ ವಿವರಿಸಿ, ಅವರಿಂದ ಬಂಡವಾಳ ಪಡೆಯುವುದು ಅಷ್ಟು ಸುಲಭವಾದ ಕೆಲಸವಲ್ಲ. ಈ ಫಂಡಿಂಗ್ ದೊರೆಯದಿರುವುದೇ ಮುಖ್ಯವಾಗಿ ಸ್ಟಾರ್ಟ್‌ಅಪ್‌ಗಳು ಮುಚ್ಚಲು ಕಾರಣ. ಒಂದು ವೇಳೆ ಫಂಡಿಂಗ್ ದೊರೆತರೂ ವೆಚ್ಚ ನಿರ್ವಹಣೆ, ಈ ಸ್ಪರ್ಧಾತ್ಪಕ ಮಾರುಕಟ್ಟೆಯಲ್ಲಿ ತನ್ನ ಉಳಿವಿಗಾಗಿ ಶ್ರಮಿಸುವುದು ಒಂದು ದೊಡ್ಡ ಸವಾಲು. ಇವೆಲ್ಲ ಹಂತಗಳನ್ನು ದಾಟಿ ಮುಂದೆ ಬರುವುದು ಕೆಲವೇ ಕೆಲವು ಸ್ಟಾರ್ಟ್‌ಅಪ್ ಕಂಪನಿಗಳು. ಅದಕ್ಕೆ ವರ್ಷಾನುಗಟ್ಟಲೇ ಪ್ರಯತ್ನ ಅತ್ಯಗತ್ಯ. ಒಂದು ಹಂತಕ್ಕೆ ಬೆಳೆದ ಅದೆಷ್ಟೋ ಸ್ಟಾರ್ಟ್‌ಅಪ್‌ಗಳು ಕೊನೆಗೆ ಅಂಬಾನಿ, ಅದಾನಿ, ಟಾಟಾದಂತಹ ಸಂಸ್ಥೆಗಳ ಸ್ವಾಧೀನಕ್ಕೆ ಒಳಗಾಗುತ್ತದೆ.
ನಿರುದ್ಯೋಗದಲ್ಲಿ ಸಿಲುಕಿ ಸ್ಟಾರ್ಟ್‌ಅಪ್‌ನತ್ತ ಚಿತ್ತ
ನಿರುದ್ಯೋಗ ದೇಶದಲ್ಲಿ ಇಂದಿಗೂ ಅತೀ ದೊಡ್ಡ ಸಮಸ್ಯೆಯಾಗಿಯೇ ಮುಂದುವರೆದಿದೆ. 2023-24ರ ಆರ್ಥಿಕ ಸಮೀಕ್ಷೆ ಪ್ರಕಾರ ಶೇಕಡ 51.25ರಷ್ಟು ಯುವಕರು ಉದ್ಯೋಗ ಆಕಾಂಕ್ಷಿಗಳಾಗಿದ್ದಾರೆ. ಆದರೆ ಉದ್ಯೋಗವೆಲ್ಲಿದೆ? ಪದವಿ, ಸ್ನಾತಕೋತ್ತರ ಪದವಿ ಮುಗಿಸಿದರೂ ತಮ್ಮ ವಿದ್ಯೆಗೆ ತಕ್ಕಂತಹ ಉದ್ಯೋಗ ಸಿಗುತ್ತಿಲ್ಲ. ಇವೆಲ್ಲಾ ತಡಕಾಟದಿಂದ ಬೇಸತ್ತ ಯುವಕರು ಮುಖ ಮಾಡುವುದು ಸ್ಟಾರ್ಟ್‌ಅಪ್ ಸ್ಥಾಪನೆಯತ್ತ. ಆದರೆ ಬೆಳೆಯುವ ಮುನ್ನ ಚಿವುಟಿ ಹಾಕುವ ಈ ಸ್ಪರ್ಧಾತ್ಪಕ ಉದ್ಯಮ ಲೋಕದ ಅರಿವು ಇಲ್ಲದೆ ಹೂಡಿಕೆ ಮಾಡಿ ನಷ್ಟಕಾಣುವವರೇ ಅಧಿಕ.
ಸ್ಟಾರ್ಟ್ ಯೋಜನೆಗಳು ಮತ್ತು ಅದರ ಕಥೆ!
ಸ್ಟಾರ್ಟ್‌ಅಪ್ ಇಂಡಿಯಾ ಇನಿಶೀಯೇಟಿವ್ (2016), ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಫಾರ್ ಸ್ಟಾರ್ಟ್‌ಅಪ್ (2020), ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕ್ರೀಮ್ (2021), ಮಲ್ಟಿಪ್ಲಯರ್ ಗ್ರಾಂಟ್ಸ್ ಸ್ಕ್ರೀಮ್ (2013), ಆತ್ಮನಿರ್ಭರ ಭಾರತ ಆಪ್ ಇನೋವೇಶನ್ ಚಾಲೆಂಜ್ (2020), ಮುದ್ರಾ ಬ್ಯಾಂಕ್ (2015), ಅಟಲ್ ಇನೋವೇಶನ್ ಮಿಷನ್ (2016) – ಹೀಗೆ ಹಲವು ‘ಬರೀ ಹೆಸರಿಗೆ ಮಾತ್ರ’ ಇರುವ ಯೋಜನೆಗಳಿವೆ. ಆದರೆ ಅದರ ಲಾಭ ದೊರೆಯುವುದು ಕೆಲವೇ ಕೆಲವು ಮಂದಿಗೆ. ಅವೈಜ್ಞಾನಿಕ ನಿಯಮಗಳು, ಅರ್ಜಿ ಸಲ್ಲಿಸುವ ಕ್ಲಿಷ್ಟ ವಿಧಾನ, ಕಾರಣ ಇಲ್ಲದೆ ಅರ್ಜಿ ತಿರಸ್ಕಾರ – ಇವೆಲ್ಲ ಗೋಜಿಗೆ ಬಿದ್ದು ಹೊರಳಾಡಿ ಮೇಲೆ ಎದ್ದು ನಿಲ್ಲುವಷ್ಟರಲ್ಲಿ ನಮ್ಮ ಚಪ್ಪಲಿ ಸವೆದಿರುತ್ತದೆ.
ಸ್ಟಾರ್ಟ್‌ಅಪ್ ಯೋಜನೆಗಳು ಹಲವಿದ್ದರೂ ಅದರ ಅರ್ಹತಾ ಮಾನದಂಡವನ್ನು ಪೂರೈಸುವುದು ಕಷ್ಟ. ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (SISFS) ಮುಂದಿನ ನಾಲ್ಕು ವರ್ಷದಲ್ಲಿ 3600 ಉದ್ಯಮಿಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಆದರೆ ಈವರೆಗೆ ಎಷ್ಟು ಮಂದಿ ಇದರ ಲಾಭ ಪಡೆದಿದ್ದಾರೆ? ಈ ಮಾಹಿತಿ SISFS ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.
ಇದನ್ನು ಓದಿದ್ದೀರಾ? ದೇಶದ ಜಿಡಿಪಿಗೆ ಕರ್ನಾಟಕ ರಾಜ್ಯದ ಕೊಡುಗೆ ಗಣನೀಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಸ್ಟಾರ್ಟ್‌ಅಪ್ ಎಂಬುದು ಸ್ವಾವಲಂಬಿ ಉದ್ಯಮಕ್ಕೆ ಒಂದು ದಾರಿ. ಅಲ್ಲಿ ಅಡೆತಡೆಗಳಿದ್ದರೂ ಎಲ್ಲವನ್ನೂ ದಾಟಿ ಮುಂದೆ ಸಾಗಿದರೆ ಯಶಸ್ಸು ಸಿಗುತ್ತದೆ. ಆದರೆ ಅದಕ್ಕೆ ತಕ್ಕುದಾದ ಬಂಡವಾಳ, ಸರ್ಕಾರದಿಂದ ಆರ್ಥಿಕ ಸಹಾಯ, ತರಬೇತಿ, ಮಾಹಿತಿ ಮುಖ್ಯ. ಇವೆಲ್ಲವುದರ ನಡುವೆ ಕೇಂದ್ರ ಸರ್ಕಾರದ ನಡೆಯೇ ಬೇರೆ. 2014ರಲ್ಲಿ ತಾನು ಪ್ರಧಾನಿಯಾಗುವುದಕ್ಕೂ ಮುನ್ನ ನರೇಂದ್ರ ಮೋದಿಯವರು ಬರೋಬ್ಬರಿ ಎರಡು ಕೋಟಿ ರೂಪಾಯಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡಿದರು. ಆದರೆ ಸತತ ಮೂರು ಬಾರಿ ಪಿಎಂ ಆದರೂ ಎರಡು ಕೋಟಿಯ ಅರ್ಧದಷ್ಟೂ ಉದ್ಯೋಗ ಸೃಷ್ಟಿಸುವಲ್ಲಿ ಸಫಲರಾಗಿಲ್ಲ. ತನ್ನ ರಾಜಕೀಯ ದ್ವೇಷ ಭಾಷಣಕ್ಕೆ ಸಮಯ ಸಾಲದ ಕಾಲದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಜೋತು ಬಿದ್ದವರು ಮೋದಿ.
ತಾನು ಉದ್ಯೋಗ ಸೃಷ್ಟಿಸದಿದ್ದರೇನು? ಉದ್ಯೋಗ ಸೃಷ್ಟಿಸುವವರನ್ನೇ ನಾನು ಸೃಷ್ಟಿಸಿರುವೇ ಎಂಬ ‘ಗಿಮಿಕ್’ಗೆ ಸಿದ್ಧರಾದವರು ನಮ್ಮ ಪ್ರಧಾನಿ. ಅದರ ಭಾಗವೇ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹದ ನಾಟಕ. ಸ್ವಉದ್ಯೋಗ, ಸ್ವಉದ್ಯಮ, ಆತ್ಮನಿರ್ಭರ ಎಂಬಂತಹ ಮಾತುಗಳು. ಪ್ರಧಾನಿಯಿಂದ ಸೃಷ್ಟಿಸಲಾಗದ ಉದ್ಯೋಗ ಹುಡುಕಾಡಿ ಸಾಕಾದ ಯುವಕರು ಈ ಸ್ಟಾರ್ಟ್‌ಅಪ್ ಲೋಕಕ್ಕೆ ಜಿಗಿದರು. ಈ ಹೊಸ ಕನಸಿನ ಹೊಸ್ತಿಲಲ್ಲಿ ಬೆಳೆದ ಯುವಕರು ಯಾವುದೇ ತಯಾರಿ, ತರಬೇತಿ ಇಲ್ಲದೆ, ಯೋಜನೆಗಳ ಸರಿಯಾದ ಲಾಭವೂ ದೊರೆಯದೆ ಉದ್ಯಮ ಲೋಕಕ್ಕೆ ಇಳಿದು ಕೈ ಮಣ್ಣು ಮಾಡಿಕೊಂಡರು. ಒಂದೆಡೆ ಸಾಲದ ಹೊರೆ, ಇನ್ನೊಂದೆಡೆ ಹೊಸ ಉದ್ಯೋಗದ ಹುಡುಕಾಟ. ಬಿದ್ದವರಿಗೆ ಕೈಕೊಟ್ಟು ಮೇಲೆತ್ತಬೇಕಾದ ಸರ್ಕಾರದ ಪೊಳ್ಳು ಯೋಜನೆಗಳು ಬರೀ ಪ್ರಧಾನಿ ಬಾಯಲ್ಲೇ ಉಳಿದಿದೆ, ಜನರತ್ತ ತಲುಪುವಲ್ಲಿ ವಿಫಲವಾಗಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.