ದೊಡ್ಡಬೊಮ್ಮನಹಳ್ಳಿಯ ರೈತ ರೆಡ್ಡಿ ಚೆಂಡು ಹೂವು ಬೆಳೆದು, ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಇದು ಇವರೊಬ್ಬರ ಕತೆಯಲ್ಲ, ಬೆಳೆ ಬೆಳೆದು ಬಾಡುವ ರೈತರ ಕತೆ…
‘ಈ ಸಲ ಹೂ ಪಸ್ಲು ಭಾರಿ ಚೆನ್ನಾಗಿತ್ತು. ತ್ವಾಟದ್ ಮುಂದೋಗಿ ನಿಂತ್ರೆ ಕಣ್ಗೆ ಹಿತಾಗದು, ಕಾಲ್ ಕೀಳಕೆ ಮನಸಾಯ್ತಿರಲಿಲ್ಲ. ಇದು ನನ್ ತ್ವಾಟವೇ, ನಾನ್ ಬೆಳೆದದ್ದೇ ಅನ್ನಂಗಿತ್ತು. ಒಂದ್ಕಡೆ ಕುಸಿ, ಇನ್ನೊಂಡ್ಕಡೆ ಒಳ್ಳೆ ರೇಟ್ ಸಿಕ್ತದೆ, ಸಾಲನೆಲ್ಲ ತೀರ್ಸಿ ತಣ್ಣಗಿರಬೋದೂಂತ ಆಸೆ ಇತ್ತು. ಏನ್ಮಾಡ್ತಿರ, ನಾವಂದ್ಕಂಡಂಗಲ್ಲ ಬ್ಯಾಸಾಯ. ದೊಡ್ಡೋರು ಹೇಳಿಲ್ವೇ… ಮನಮಂದಿಯಲ್ಲ ಸಾಯ ಅಂತ…’ ಎಂದು ನಿಟ್ಟುಸಿರುಬಿಟ್ಟರು ರೈತ ಅಶ್ವತ್ಥರೆಡ್ಡಿಯವರು.
ಚಿಂತಾಮಣಿ ತಾಲೂಕಿನ ದೊಡ್ಡಬೊಮ್ಮನಹಳ್ಳಿಯ ರೆಡ್ಡಿಯವರಿಗೆ ಈಗ 80ರ ಆಸುಪಾಸು. ನಾಲ್ಕು ಜನ ಮಕ್ಕಳು- ಇಬ್ಬರು ಗಂಡು, ಇಬ್ಬರು ಹೆಣ್ಣು. ಎಲ್ಲರಿಗೂ ಮದುವೆ ಮಾಡಿದ್ದಾರೆ. ಅವರವರ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾರೆ. ಮನೆಯ ಮುಂದಿನ ಮೂರು ಎಕರೆ ಜಮೀನನ್ನು ಬೀಳು ಬಿಡಲು ಮನಸ್ಸಾಗದ, ವಯಸ್ಸಾದ ವೃದ್ಧರಿಬ್ಬರು, ಏನಾದರೂ ಬೆಳೆ ಬೆಳೆಯುತ್ತಲೇ ಇರುತ್ತಾರೆ. ಅವರಿಗೆ ಗೊತ್ತಿರುವುದು ಪರಂಪರಾಗತವಾಗಿ ಕಲಿತ ಕೃಷಿಯೊಂದೇ. ಕೃಷಿ ನಂಬಿಯೇ ಬದುಕುತ್ತಿರುವವರು.
ಹಾಗೆಯೇ ಕಲಿತ ಕೃಷಿಯನ್ನು ಕೊಂಚ ಅರುಗಿಸಿ, ಬದಲಾದ ಕಾಲಮಾನಕ್ಕೆ ತಕ್ಕಂತೆ, ವಾಣಿಜ್ಯ ಬೆಳೆಗಳತ್ತ ಕಣ್ಣು ಹಾಯಿಸಿದವರು. ತಮ್ಮ ಮೂರು ಎಕರೆ ಭೂಮಿಯಲ್ಲಿ ರೇಷ್ಮೆ, ಟೊಮ್ಯಾಟೋ, ಸೌತೇಕಾಯಿ, ಸಂಬಾರಸೊಪ್ಪು ಬೆಳೆದು, ಸರೀಕರೊಂದಿಗೆ ಸರಿಸಮನಾಗಿ ಬದುಕಿದವರು.
ಹೆಚ್ಚಿಗೆ ಮಾತನಾಡದ, ಕೃಷಿ ಕಾಯಕದಲ್ಲಿಯೇ ಕೈಲಾಸ ಕಾಣುವ ಅಶ್ವತ್ಥರೆಡ್ಡಿ, ಸಾಧು ಸ್ವಭಾವದವರು. ಹೊಸ ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಾದರೂ, ಹೊಸ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತಿಳಿಯದವರು. ಸರ್ಕಾರದ ಸವಲತ್ತು, ಪರಿಹಾರಗಳ ಬಗ್ಗೆ ತಿಳಿವಳಿಕೆ ಇಲ್ಲದವರು. ಹಳ್ಳಿಯ ರಾಜಕೀಯ, ತಂಟೆ-ತಗಾದೆಗಳಿಗೆ ಹೋಗದವರು.
ಇದನ್ನು ಓದಿದ್ದೀರಾ?: ಬರಪೀಡಿತ ಪ್ರದೇಶದಲ್ಲಿ ಕೃಷಿ ಪುನರುಜ್ಜೀವನಕ್ಕೆ ನಾಂದಿ ಹಾಡಿದ ವಿಧವೆಯರು, ಒಂಟಿ ಮಹಿಳೆಯರು
ಈ ಸಲ ಉಗಾದಿ ಹಬ್ಬಕ್ಕೆ ಎಂದು ಯೋಚಿಸಿ, ಒಂದೂಕಾಲು ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದರು. ಆದರೆ ಅಂದುಕೊಂಡಂತೆ ಹೂವಿಗೆ ಬೇಡಿಕೆ ಬರಲಿಲ್ಲ, ಬೆಲೆಯೂ ಸಿಗಲಿಲ್ಲ. ರೆಡ್ಡಿಯವರ ಮೂರು ತಿಂಗಳ ಶ್ರಮವೆಲ್ಲ ವ್ಯರ್ಥವಾಗಿದೆ. ಬೆಳಗಿನ ಬಿಸಿಲಿಗೆ ಮೈದುಂಬಿಕೊಂಡು ತೊನೆದಾಡುತ್ತಿದ್ದ ಹಳದಿ ಚೆಂಡು ಹೂವಿನ ತೋಟ ಅವರ ಕಣ್ಣೆದುರಿಗೇ ಕಮರಿಹೋಗಿದೆ. ಹೂವಿನಂತೆಯೇ ರೆಡ್ಡಿಯವರ ಬದುಕು ಕೂಡ ಬಾಡಿಹೋಗಿದೆ.

ಇಂತಹ ಸಮಯದಲ್ಲಿ ವಯಸ್ಸಾದ ರೆಡ್ಡಿಯವರನ್ನು ಮಾತಿಗೆಳೆದರೆ, ‘ಏನ್ಮಾಡ್ತಿರ, ಒಂದೊಂದ್ಸಲ ಅಂಗಾಯ್ತದೆ, ತಡಕಬೇಕು’ ಎಂದು ಬೇಸಾಯ ಕಲಿಸಿದ ಸಹನೆಯ ಮಾತುಗಳನ್ನಾಡುತ್ತಾರೆ. ಬೇಸಾಯದಿಂದ ಬಸವಳಿದರೂ ಮತ್ತೊಂದು ಬೆಳೆಗೆ ಸಿದ್ದರಾಗುತ್ತಾರೆ.
‘ಈ ಚೆಂಡು ಹೂವು ಬೆಳೆಯಲು ಎಷ್ಟು ಖರ್ಚಾಗಿದೆ?’ ಎಂದು ಮಾತಿಗೆಳೆದೆ. ‘ಅಯ್ಯೋ ಅದ್ಯಾಕೇಳ್ತಿರ ಬುಡಿ…’ ಎಂದವರು ಚೆಂಡು ಹೂವು ಬೆಳೆಗಾಗಿ ಭೂಮಿಯನ್ನು ಹದ ಮಾಡುವ ಸಮಯದಿಂದ ಹಿಡಿದು, ಹೂವು ಬೆಳೆದು, ಬಾಡಿ ಬಿದ್ದು ಒಣಗುತ್ತಿರುವವರೆಗೆ ಸವಿಸ್ತಾರವಾಗಿ ಮಾತನಾಡಿದರು.
”ನನ್ಗ ಇರದು ಮೂರು ಎಕರೆ ಜಮೀನು. ಉಗಾದಿ ಹಬ್ಕಂತ ಚೆಂಡು ಹೂ ಆಕನ, ಅದರಲ್ಲಿ ಎಲ್ಲ ಬ್ಯಾಡ, ಒಂದೂಕಾಲು ಎಕರೆಗೆ ಅನ್ಕಂಡೆ. ನಮ್ದೆ ಟ್ಯಾಗುಟ್ರಿತ್ತು, ಉತ್ತು ಹದ ಮಾಡ್ದೆ. ಬಾಡ್ಗೆ ತಂದಿದ್ರೆ, ಅದನೈದ್ ಸಾವ್ರ ಆಯ್ತಿತ್ತು. ಆಮ್ಯಾಲೆ ಎರಡು ಮೂಟೆ ಹೊಂಗೆ ಹಿಂಡಿ, ಮೂರು ಮೂಟೆ ಡಿಎಪಿ, ಮೂರು ಮೂಟೆ ಪೊಟಾಸಿಯಂ ಮಣ್ಣಿಗೆ ಹಾಕಿ ಹದ ಮಾಡ್ದೆ.
ಅದಾದಮ್ಯಾಲೆ ಸಾಲು ತೆಗಿಬೇಕು, ಅದ್ಕೆ ಆಳ್ಗೆ ಅಂತ ಅದಿನೈದ್ ಸಾವ್ರ ಕೊಟ್ಟೆ. ಇನ್ನ ಸಸಿ ಮಡಿ ಮಾಡಿರಲಿಲ್ಲ, ಹೊರಗ್ನಿಂದ ತರಬೇಕು. ಒಂದೂಕಾಲು ಎಕರೆಗೆ ಏಳೂವರೆ ಸಾವ್ರ ಗಿಡ ಬೇಕಾಗಿತ್ತು, ಅದ್ಕೆ ಒಂದ್ ಸಸಿಗೆ ಮೂರು ರೂಪಾಯನಂತೆ, ಇಪ್ಪತ್ತೊಂದು ಸಾವ್ರ ಆಯ್ತು. ಒಳ್ಳೆ ಸಿಡಿ ಜಾತಿ ತಳಿ. ಅಳ್ಬುಟ್ರೆ, ಕೈ ತುಂಬಾ ಸಿಗ್ತವೆ… ಅಂತ ಹೂ.
ನಾಟಿ ಮಾಡಿದ ಮೂರ್ನಾಲ್ಕು ದಿನಕ್ಕೆಲ್ಲ ಅವ್‌ಸ್ಥಿ ಹೊಡಿಬೇಕು. ಅವ್‌ಸ್ಥಿಗೆ ಮರಳು ಬೆರಸಿ, ರಾಗಿ ಚೆಲ್ದಂಗೆ ಚಲ್ಬೇಕು. ಇದರ ಜೊತೆಗೇ ಹುಳ ಸಾಯಕ್ಕೆ, ಟ್ರಿಪ್ ಹೊಡ್ಯಕೆ, ಗಿಡ ಬೆಳ್ಯಕೆ ಅಂತ ಅವ್‌ಸ್ಥಿ ಹೊಡಿಬೇಕು. ಇದಾದ ಮೇಲೆ 19-19, 24-24 ಐದು ಮೂಟೆ ಗೊಬ್ಬರ ಹಾಕ್ಬೇಕು. ಹೂ ಕೈಗ್ ಬರವರ್ಗೆ ವಾರಕ್ಕೆರಡು ಸರ್ತಿ ಅವ್‌ಸ್ಥಿ ಹೊಡಿತನೇ ಇರ್ಬೇಕು. ಭೂಮಿ ಹದ ಮಾಡದಾಗ್ನಿಂದ ಬೆಳೆ ಕೈಗ್ ಬರವರ್ಗೆ… ಒಂದೂಕಾಲು ಲಕ್ಷ ಕರ್ಚಾಗೈತಪೋ…” ಎಂದು ಮುಖ ನೋಡಿದರು.
‘ಅದರಿಂದ ಬಂದ ಆದಾಯ?’ ಎಂದೆ.
”ನಾನ್ಕಂಡಂಗೆ ಅಬ್ಕೆ ಬೆಳೆ ಬಂತು. ಕರೆಟ್ಟಾಗಿ ಉಗಾದಿ ಅಬ್ಬ ನಾಕ್ ದಿನ ಇರಂಗೆ ಕುಯ್ಸ್ದೆ, ಹದಿನೈದು ಜನ ಹೆಣ್ಣಾಳು, ಇಬ್ರು ಗಂಡಾಳು. ಹೆಣ್ಣಾಳ್ಗೆ ಊಟ ಕೊಟ್ಟು ದಿನಕ್ಕೆ ಮುನ್ನೂರು, ಗಂಡಾಳಿಗೆ ದಿನಕ್ಕೆ ಐನೂರು. ಒನ್ ಟನ್ ಸಿಕ್ತು. ಟೆಂಪೋದನ್ಗೆ ನಾಕೂವರ್ ಸಾವ್ರಕ್ಕೆ ಮಾತಾಡಿ ಕೋಲಾರಕ್ಕೋದೆ, ಕೊಳ್ಳೋರೆ ಇಲ್ಲಪೋ. ಟೆಂಪೋದವನ್ನ ಚಿಕ್ಕಬಳ್ಳಾಪುರಕ್ಕೋಡಿ ಅಂದೆ. ಅಲ್ಲಿಗೋಯ್ತಿನಿ… ಕೇಜಿಗೆ ಹತ್ ರೂಪಾಯಿಗೆ ಕೇಳ್ತಾವ್ರೆ? ವಾಪಸ್ ತರಂಗಿಲ್ಲ, ಕೊಡಂಗೂ ಇಲ್ಲ. ಹೊಟ್ಟಿಗ್ ಬೆಂಕಿ ಬಿದ್ದಂಗಾಯ್ತು… ಅದೇನ್ ವಸ್ದಲ್ಲ, ಅದ್ನೂ ತಡ್ಕಂಡು ಕೊಟ್ಟೆ, ಆರು ಸಾವ್ರ ಸಿಕ್ತು. ಊಟ-ತಿಂಡಿ-ಟೆಂಪದೋನಿಗೆ ಕೊಟ್ಟು ಕೈ ಖಾಲಿ ಆಯ್ತು. ಊರಿಗ್ ಬುಡ್ತಿಯೇನಪ್ಪ ಅಂದೆ, ಪುಣ್ಯಾತ್ಮ ಬುಟ್ಟೋದಪೋ.
ರಾಮನವ್ಮಿ ಬಂತಲ್ಲ, ಆಗ್ ಒಂದ್ಸಲ ಕುಯ್ಸ್ದೆ… ಆಗ್ಲೂ ಒನ್ ಟನ್ ಸಿಕ್ತು. ತಕ್ಕಂಡೋದೆ, ಹತ್ರೂಪಾಯ್ ಕೇಜಿಯಂಗ್ ಕೇಳುದ್ರು, ಹಾಕ್ಬಂದೆ. ಟೆಂಪದೋನಿಗೆ ಕೈಯಿಂದನೆ ಕೊಡಂಗಾಯ್ತು. ಇದಾದ್ಮೇಲೆ ಒಂದ್ಸಲ ಕುಯ್ಸ್ದೆ… ಆಗ ಅಪರೂಪ್ಕೆ ಕೇಜಿಗೆ ಮೂವತೈದ್ ಸಿಕ್ತು, ಅದೇ ಪಸ್ಟ್ ಟೈಮ್, ಹತ್ ಸಾವ್ರ ದುಡ್ಡು ನೋಡಿದ್ದು. ಅದಾದ್ಮೇಲೆ 40 ಬ್ಯಾಗು, 30 ಬ್ಯಾಗು, 18 ಬ್ಯಾಗ್ ಸಿಕ್ತು… ಅದರ ಕೂಲಿನೂ ಸಿಗ್ನಿಲ್ಲ. ನೀವ್ ನಂಬಲ್ಲ… ಮನ್ನೆದಿನ ಚಿಕ್ಕಬಳ್ಳಾಪುರ ಮಂಡಿಗೆ 18 ಬ್ಯಾಗ್ ಹೂ ತಗಂಡೋಗಿದಿನಿ, ಕೇಳೋರಿಲ್ಲ. ಕೊನೆಗೆ ನನ್ನ ಪಡಪಾಟ್ಲು ನೋಡ್ದೆ, ನಿನ್ನ ಖಾಲಿ ಕೈಯಲ್ಲಿ ಕಳಸಕ್ಕೆ ನಂಗಿಷ್ಟ ಇಲ್ಲ, 1,400 ರೂಪಾಯ್ ಕೊಡ್ತಿನಿ ತಗೊಂಡೋಗು, ಅದು ಹೂಗಲ್ಲ, ನಿಂಗೆ ಅಂದ ಮಂಡಿಯವ್ನು. ಸುಮ್ನೆ ಕೊಟ್ ಬಂದೆ, ಕಣ್ಣಲ್ಲಿ ನೀರಲ್ಲ, ರಕ್ತ…. ಯಾರ್‍ಗೇಳನ?” ಎಂದು ಕತ್ತು ಬಗ್ಗಿಸಿದರು.

ಒಂದೂಕಾಲು ಎಕರೆ ಭೂಮಿಯಲ್ಲಿ ಚೆಂಡು ಹೂವು ಹಾಕಬೇಕು ಎಂದು ನಿರ್ಧರಿಸಿದ ದಿನದಿಂದ ಇಲ್ಲಿಯವರೆಗೆ, ಅಶ್ವತ್ಥರೆಡ್ಡಿಯವರಿಗೆ 1 ಲಕ್ಷದ 25 ಸಾವಿರ ರೂಪಾಯಿ ಖರ್ಚಾಗಿದೆ. ಸರಿಸುಮಾರು 3 ತಿಂಗಳು- ಭೂಮಿಯನ್ನು ಹದ ಮಾಡುವುದರಿಂದ ಹಿಡಿದು, ಹೂವು ಕೈಗೆ ಬರುವವರೆಗೆ- ಊಟ, ನಿದ್ರೆ ಬಿಟ್ಟು ಆರೈಕೆ ಮಾಡಿದ್ದಾರೆ. ಗೊಬ್ಬರ, ನೀರು, ಔಷಧಿ, ಕಳೆ ಕೀಳಿಸುವುದು, ಉಷ್ಣಾಂಶ ಒಂದೇ ರೀತಿ ಇರುವಂತೆ ನೋಡಿಕೊಳ್ಳುವುದು, ಮೊಗ್ಗು ಆದಾಗ ತುದಿ ಚಿವುಟುವುದು, ಹೂವು ಗಿಡಗಳನ್ನು ಮಗುವಿನಂತೆ ಮುದ್ದು ಮಾಡುತ್ತಲೇ, ವೃದ್ಧರಿಬ್ಬರೂ ಅದಕ್ಕಾಗಿ ಬೆವರು ಸುರಿಸಿದ್ದಾರೆ.
ಇದನ್ನು ಓದಿದ್ದೀರಾ?: ಭೂ ಸ್ವಾಧೀನ | ವಚನ ಭ್ರಷ್ಟರಾದ ಸಿದ್ದರಾಮಯ್ಯ, ಮುನಿಯಪ್ಪ: ರಾಜ್ಯ ಪ್ರಾಂತ ರೈತ ಸಂಘ ತೀವ್ರ ವಾಗ್ದಾಳಿ
ಇಷ್ಟಾದರೂ ಕೈಗೆ ಕಾಸು ಹತ್ತದಾದಾಗ, ‘ಏನ್ಮಾಡ್ತಿರ, ನಾವಂದ್ಕಂಡಂಗಲ್ಲ’ ಎಂದು ಸಂತನಿಗೂ ಮೀರಿದ ಮಾತುಗಳನ್ನಾಡುತ್ತಾರೆ. ತೋಟದಲ್ಲಿಯೇ ಹೂವು ಉದುರಿ ನೆಲ ಕಚ್ಚುತ್ತಿದ್ದರೆ, ‘ಗೊಬ್ರಾಯ್ತದೆ, ಬುಡಿ’ ಎಂದು ನಮ್ಮನ್ನೇ ಸಮಾಧಾನಪಡಿಸುತ್ತಾರೆ. ಹೂವು ಬೆಳೆಯುವುದು, ಬೇರೆ ಬೆಳೆ ಬೆಳೆದಂತಲ್ಲ. ತ್ರಾಸದಾಯಕ ಕೆಲಸ. ಎರಡರಿಂದ ಮೂರು ತಿಂಗಳು ಮನೆ ಮಂದಿ ಎಲ್ಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯಬೇಕು.
ಅದರಲ್ಲೂ ಉತ್ತಮ ಬೆಳೆ ಬರುವುದು, ಅದಕ್ಕೆ ಅಷ್ಟೇ ಉತ್ತಮ ಮಾರುಕಟ್ಟೆ, ಧಾರಣೆ ಸಿಗುವುದು ಬಹಳ ಕಷ್ಟ. ಬೆಳೆ ಬಂದರೂ ಬೆಲೆ ಸಿಗದಿದ್ದಾಗ, ಸಾಲ ಕುಣಿಕೆಯಂತೆ ಕಣ್ಮುಂದೆ ಕುಣಿಯುವಾಗ, ಆತ್ಮಹತ್ಯೆ ಬಗ್ಗೆ ಯೋಚಿಸದೆ, ಮತ್ತೊಂದು ಬೆಳೆಗೆ ಸಿದ್ಧರಾಗುತ್ತಾರಲ್ಲ- ಇವರು ರೈತರು.

ಲೇಖಕ, ಪತ್ರಕರ್ತ