- ಒಕ್ಕಲಿಗ ಪರಿಷತ್ ಆಫ್ ಅಮೆರಿಕದ 17ನೇ ಸಮ್ಮೇಳನ
- ವರ್ಚುವಲ್ ಮೂಲಕ ಭಾಗವಹಿಸಿದ ಉಪ ಮುಖ್ಯಮಂತ್ರಿ
ಕಾಂಗ್ರೆಸ್ ಪಕ್ಷದಲ್ಲಿ ಎನ್ಆರ್ಐ ಘಟಕ ಸ್ಥಾಪಿಸಲು ಚರ್ಚೆ ಮಾಡುತ್ತಿದ್ದೇವೆ. ನೀವು ಮತ್ತೆ ನಿಮ್ಮ ಊರುಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದರೆ ನಿಮಗೆ ನೆರವು ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಒಕ್ಕಲಿಗ ಪರಿಷತ್ ಆಫ್ ಅಮೆರಿಕದ 17ನೇ ಸಮ್ಮೇಳನದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದ ವೇಳೆ ಅವರು ಮಾತನಾಡಿದರು.
“ಇದೊಂದು ಐತಿಹಾಸಿಕ ದಿನ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ ಎಂಬ ಮಾತನ್ನು ಆಗಾಗ್ಗೆ ಹೇಳುತ್ತಿರುತ್ತೇನೆ. ಆದೇ ರೀತಿ ನೀವು 1991ರಿಂದ ಒಕ್ಕಲಿಗ ಸಮುದಾಯದ ಜನ ಅಮೆರಿಕದಲ್ಲಿ ಸಂಘಟನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದೀರಿ. ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾದವರಿಗೆ ನಾನು ಅಭಿನಂದಿಸುತ್ತೇನೆ” ಎಂದರು.
“ನೀವು ನಮ್ಮ ರಾಯಭಾರಿಗಳು. ನಮ್ಮ ನೆಲ ಜಲದ ಬಗ್ಗೆ ತೋರುವ ಪ್ರೀತಿ ಮರೆಯಲಾಗದ್ದು. ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ. ನಮ್ಮ ಸಮಾಜ, ಮಠ, ಭಾಷೆ, ನೆಲ ಜಲ ಕಾಪಾಡಲು ಶ್ರಮಿಸಿ, ಹೊರ ದೇಶದಲ್ಲಿ ನಮಗೆ ಹೆಸರು ತಂದಿದ್ದೀರಿ. ಕೆಲ ದಿನಗಳಲ್ಲಿ ಅಧಿವೇಶನ ನಡೆಯಲಿದ್ದು, ಬಜೆಟ್ ಮಂಡನೆ ಆಗಲಿದೆ. ಹೀಗಾಗಿ ನಾನು ಈ ಕಾರ್ಯಕ್ರಮಕ್ಕೆ ನೇರವಾಗಿ ಭಾಗವಹಿಸಲು ಆಗಿಲ್ಲ. ಮುಂದಿನ ಬಾರಿ ನೇರವಾಗಿ ಭಾಗಿಯಾಗುವೆ” ಎಂದು ಡಿ ಕೆ ಶಿವಕುಮಾರ್ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಮಾಜಿ ಸಚಿವ ಸುಧಾಕರ್
“ಬೆಂಗಳೂರು ನಗರವನ್ನು ಇಡೀ ವಿಶ್ವ ಗಮನಿಸುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ನೀವು ನಾವುಗಳು ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿ ತಯಾರಾದ ವೈದ್ಯರು, ಇಂಜಿನಿಯರ್ಗಳು ವಿಶ್ವದ ಎಲ್ಲಾ ಜಾಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಬೆಂಗಳೂರು ನಗರವನ್ನು ಗ್ಲೋಬಲ್ ಬೆಂಗಳೂರು ಆಗಿ ಪರಿವರ್ತಿಸಲು, ಕರ್ನಾಟಕ ರಾಜ್ಯ ಹಾಗೂ ಬೆಂಗಳೂರು ಹಿರಿಮೆ ಮರುಸ್ಥಾಪಿಸಬೇಕು. ಇದಕ್ಕಾಗಿ ನಾವು ಸಾರ್ವಜನಿಕರ ಸಲಹೆ ಕೇಳುತ್ತಿದ್ದು, ನೀವು ಕೂಡ ನಿಮ್ಮ ಸಲಹೆಗಳನ್ನು ನೀಡಬೇಕು” ಎಂದು ತಿಳಿಸಿದರು.
“ಬೆಂಗಳೂರಿನ ವಿಚಾರದಲ್ಲಿ ಮೂರು ‘K’ ಗಳನ್ನು ಮರೆಯಬಾರದು. ಬೆಂಗಳೂರು ಕಟ್ಟಿದ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಐಟಿ ಬಿಟಿ ನಗರ ಮಾಡಿದ ಎಸ್.ಎಂ ಕೃಷ್ಣ ಅವರನ್ನು ಸದಾ ಸ್ಮರಿಸಬೇಕು. ನಾವು ವ್ಯವಸಾಯ ಸಮುದಾಯ. ಭೂಮಿಯ ಮಕ್ಕಳು ಎಂಬ ಹೆಸರು ಸಿಕ್ಕಿದೆ. ನಾವು ಎಲ್ಲಾ ಸಮುದಾಯದ ಜೊತೆ ಸಾಮರಸ್ಯದಿಂದ ಬದುಕುತ್ತೇವೆ” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಸ್ವಾಮೀಜಿ, ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೂಡ ವರ್ಚುವಲ್ ಆಗಿ ಭಾಗವಹಿಸಿದ್ದರು.