ಸತತ ಮೂರು ದಶಕಗಳಿಗೂ ಹೆಚ್ಚು ಕಾಲ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹೋರಾಟಕ್ಕೆ ಫಲ ಸಿಕ್ಕಿ ಆಯೋಗ ರಚನೆಯಾದರೂ ಒಳ ಮೀಸಲಾತಿ ವೈಜ್ಞಾನಿಕ ಹಂಚಿಕೆ ಮಾತ್ರ ಮರೀಚಿಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ನಮ್ಮ ರಾಜ್ಯ ನಾಗಮೋಹನ್ ದಾಸ್ ಆಯೋಗ ರಚಿಸಿ ಸತ್ಯ ಶೋಧನಾ ಕಾರ್ಯಕ್ಕೆ ದತ್ತಾಂಶ ಗಣತಿ ಮಾಡಲು ಎರಡು ತಿಂಗಳ ಗಡುವು ಪಡೆದುಕೊಂಡಿದೆ. ಈ ವೇಳೆ ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಕೆ ಎಡಿ ಅಳಿಸಿ ತಮ್ಮ ಮೂಲ ಜಾತಿಯ ಹೆಸರು ಬರೆಸಿ ದತ್ತಾಂಶ ಸಂಗ್ರಹಕ್ಕೆ ಅನುವು ಮಾಡಲು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಮನವಿ ಮಾಡಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಸಂಸ ತಾಲ್ಲೂಕು ಘಟಕ ಆಯೋಜಿಸಿದ್ದ ಸಭೆಯ ನಂತರ ಜಾಗೃತಿ ವಾಹನಕ್ಕೆ ಚಾಲನೆ ಹಾಗೂ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಂವಿಧಾನದ ಶೇಕಡಾ 50 ರ ಮೀಸಲಿನಲ್ಲಿ ಪರಿಶಿಷ್ಟ ಜಾತಿಗೆ ಶೇಕಡಾ 15 ಮೀಸಲಾತಿ ವರ್ಗೀಕರಣ ಮಾಡಲಾಯಿತು. ಆದರೆ ಪರಿಶಿಷ್ಟ ಜಾರಿಯಲ್ಲಿರುವ 101 ಜಾತಿಗಳಿಗೆ ವೈಜ್ಞಾನಿಕ ಹಂಚಿಕೆ ದೊರಕಿಲ್ಲ. ಶೇಕಡಾ 95 ರಷ್ಟು ಪರಿಶಿಷ್ಟ ಜಾತಿಯ ಜನರಿಗೆ ಇಂದಿಗೂ ಮೀಸಲಾತಿ ಸಿಕ್ಕಿಲ್ಲ. ಜನಸಂಖ್ಯಾ ಆಧಾರದ ಮೇಲೆ ಒಳ ಮೀಸಲು ಹಂಚಿಕೆ ಮಾಡಲು ಆಗ್ರಹದ ಹಿನ್ನಲೆ ನಾಗ ಮೋಹನ್ ದಾಸ್ ಆಯೋಗ ನಡೆಸುವ ದತ್ತಾಂಶ ಗಣತಿಯಲ್ಲಿ ಪ್ರತಿಯೊಬ್ಬರೂ ಅವರ ಮೂಲ ಜಾತಿ ಮಾದಿಗ, ಹೊಲೆಯ, ಕೊರಮ, ಕೊರಚ, ಭೋವಿ, ಲಂಬಾಣಿ, ಅಲೆಮಾರಿ ಹೀಗೆ ಅವರವರ ಮೂಲ ಜಾತಿಯ ಹೆಸರು ಯಾವುದೇ ಹಿಂಜರಿಕೆ ಇಲ್ಲದೆ ಬರೆಸಿ ಎಂದು ಸಲಹೆ ನೀಡಿದರು.
ಮೀಸಲಾತಿ ಎಂಬುದು ಕೆಲವರ ಪಾಲಾಗಿ ಕೆಲ ಪರಿಶಿಷ್ಟ ಜಾತಿಗೆ ಮಾತ್ರ ದೊರೆಯುವ ಕಾರಣ ಎಲ್ಲಾ 101 ಜಾತಿಗಳಿಗೂ ಮೀಸಲು ವೈಜ್ಞಾನಿಕವಾಗಿ ಜನಸಂಖ್ಯೆ ಆಧಾರವಾಗಿ ವಿತರಣೆಯಾಗಲಿ ಎಂಬುದು ದಲಿತ ಸಂಘರ್ಷ ಸಮಿತಿಯ ಉದ್ದೇಶವಾಗಿದೆ. ಒಳ ಜಾತಿ ಹೆಸರು ಹೇಳಲು ಹಿಂಜರಿಕೆ ಪಡುವ ಮಂದಿ ಇಂದಿಗೂ ಇದ್ದಾರೆ. ಹಾಗಾಗಿ ಎಕೆ ಎಡಿ ಎಂದು ಬರೆಸಿ ನಿಖರ ಜಾತಿ ಹೆಸರು ಉಲ್ಲೇಖವಾಗಿಲ್ಲ. ಬೆಂಗಳೂರು ಮೈಸೂರು ಭಾಗದಲ್ಲಿ ಬೇರೆ ರೀತಿ ಗುರುತಿಸಿಕೊಳ್ಳುವ ಒಳಪಂಗಡಗಳು ಮೀಸಲಾತಿ ನಿರ್ಣಯಕ್ಕೆ ಪೆಟ್ಟು ನೀಡಿದೆ. ಈ ನಿಟ್ಟಿನಲ್ಲಿ ದತ್ತಾಂಶ ಗಣತಿಯಲ್ಲಿ ಮೂಲ ಜಾತಿಯ ಹೆಸರು ಬರೆಸಿ ದತ್ತಾಂಶ ಸಂಗ್ರಹಕ್ಕೆ ಸಹಕರಿಸಿದರೆ ಮಾತ್ರ ಮೀಸಲಾತಿ ವೈಜ್ಞಾನಿಕ ರೀತಿ ಎಲ್ಲರಿಗೂ ಸಿಗಲಿದೆ ಎಂದು ಹೇಳಿದರು.

ದಸಂಸ ಜಿಲ್ಲಾ ಸಂಚಾಲಕ ಕುಂದೂರು ಮುರುಳಿ ಮಾತನಾಡಿ ದತ್ತಾಂಶ ಸಂಗ್ರಹವಾದಲ್ಲಿ ಮಾತ್ರ ಒಳ ಮೀಸಲು ಎಲ್ಲರೂ ಪಡೆಯಲು ಸಾಧ್ಯ. ನಗರ ಪ್ರದೇಶದಲ್ಲಿ ಜಾತಿಯ ಹೆಸರು ಹೇಳಲು ಹಿಂಜರಿಕೆ ಕಾಣುತ್ತದೆ. ಅಲ್ಲಿನ ನಮ್ಮ ಪರಿಶಿಷ್ಟ ಜಾತಿಯ ಬಂಧುಗಳು ಅವರ ಮೂಲ ಜಾತಿಯ ಹೆಸರು ನಮೂದಿಸಿ ಸಹಕರಿಸಿ. ಗ್ರಾಮೀಣ ಪ್ರದೇಶದಲ್ಲಿ ಒಂದೆಡೆ ಸಿಗುವ ಪರಿಶಿಷ್ಟ ಜಾತಿಯ ಮಂದಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಜಿಲ್ಲೆಯಲ್ಲಿ ಚಾಲನೆ ದೊರಕಿದೆ. ಸಮಿತಿಯು ಜಾಗೃತಿ ಮೂಲಕ ಒಳ ಮೀಸಲು ಎಲ್ಲರಿಗೂ ದೊರೆಸಿಕೊಡುವ ಉದ್ದೇಶ ಹೊಂದಿದೆ. ಜಾತಿಯ ಹೆಸರು ಮರೆ ಮಾಚಿದರೆ ನಿಖರ ಮಾಹಿತಿ ಸಿಗದೆ ಮೀಸಲಾತಿ ವಂಚಿತರಾಗುತ್ತೇವೆ. ಈ ನಿಟ್ಟಿನಲ್ಲಿ ಅವರವರ ಮೂಲ ಜಾತಿಯ ಹೆಸರು ಗಣತಿದಾರರಿಗೆ ನೀಡಿ ಜೊತೆಗೆ ತಮ್ಮ ಕುಟುಂಬ ಸದಸ್ಯರ ಹೆಸರು, ಶಿಕ್ಷಣ, ಉದ್ಯೋಗ, ಆರ್ಥಿಕ ಪರಿಸ್ಥಿತಿ ಎಲ್ಲವೂ ನೀಡಬೇಕಿದೆ ಎಂದರು.
ದಸಂಸ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ನಾಗ ಮೋಹನ್ ದಾಸ್ ಆಯೋಗ ನಡೆಸುವ ಗಣತಿಗೆ ನಮ್ಮ ಎಲ್ಲಾ ಪರಿಶಿಷ್ಟ ಜಾತಿಯ ಜನರು ತಮ್ಮ ಮೂಲ ಜಾತಿಯ ಹೆಸರು ಬರೆಸಿ ಮೀಸಲಾತಿ ವೈಜ್ಞಾನಿಕ ಹಂಚಿಕೆಗೆ ಸಹಕರಿಸಬೇಕಿದೆ. ದಲಿತರೆಲ್ಲರೂ ಒಂದೇ ಎಂಬ ಸಂದೇಶ ನಮ್ಮ ಒಳ ಮೀಸಲಾತಿಯನ್ನು ಜನಸಂಖ್ಯಾ ಅನುಗುಣವಾಗಿ ಹಂಚಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡೋಣ. ವಿವಿಧತೆಯಲ್ಲಿ ಏಕತೆ ಸಾಧಿಸೋಣ. ಗೌಪ್ಯವಾಗಿ ಜಾತಿ ನಮೂದಿಸಲು ಆಯೋಗ ಅವಕಾಶ ಕೊಟ್ಟಿದೆ. ಸಮಿತಿಯ ಸದಸ್ಯರು ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಮೂಲ ಜಾತಿಯ ಹೆಸರು ಬರೆಸಬೇಕಿದೆ. ಈ ಜೊತೆಗೆ ಮತಾಂತರಗೊಂಡ ಪರಿಶಿಷ್ಟ ಜಾತಿಯ ಮಂದಿ ಕೂಡಾ ತಮ್ಮ ಮೂಲ ಜಾತಿಯ ಹೆಸರು ಬರೆಸಲು ಮನವಿ ಮಾಡಲಾಗಿದೆ ಎಂದರು.
ನಂತರ ಜಾಗೃತಿ ವಾಹನಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ಎಚ್.ರಂಗನಾಥ್, ಲಕ್ಕೇನಹಳ್ಳಿ ನರಸಿಯಪ್ಪ, ತಾಲ್ಲೂಕು ಸಮಿತಿಯ ಹೊಸಕೆರೆ ನರಸಿಂಹಮೂರ್ತಿ, ಬಸವರಾಜು, ಫಣೀಂದ್ರ, ಪಾತರಾಜು, ನಂಜುಂಡಯ್ಯ, ಬಿ.ಎಚ್.ಕಾವಲ್ ಶಿವಮ್ಮ, ಮಾದೇನಹಳ್ಳಿ ದೊಡ್ಡಮ್ಮ, ಅನ್ನಪೂರ್ಣ ಇತರರು ಇದ್ದರು.