ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಏಪ್ರಿಲ್ 22ರಂದು ನಡೆದ ಉಗ್ರ ಕೃತ್ಯದ ದಾಳಿಯನ್ನು ಖಂಡಿಸಿ, ಭಯೋತ್ಪಾದಕರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆಯ ಮುಸ್ಲಿಂ ಒಕ್ಕೂಟದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ವೇಳೆ ಮುಸ್ಲಿಂ ಒಕ್ಕೂಟದ ಮುಖಂಡ ಅಸ್ಗರ್ ಮಾತನಾಡಿ, “ಕಾಶ್ಮೀರದ ಘಟನೆ ಅತ್ಯಂತ ಹೇಯ ಕೃತ್ಯ. ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಪಕ್ಷಗಳು ಒಟ್ಟಾಗಿ ಭಯೋತ್ಪಾದಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಧಾನಿ, ಸರ್ಕಾರದ ನಿರ್ಧಾರದ ಪರ ಪಕ್ಷಗಳ ನಿಂತಿವೆ. ನಮಗೂ ಕೂಡ ರಾಜಕೀಯವಾಗಿ ಎಷ್ಟೋ ಭಿನ್ನಾಭಿಪ್ರಾಯ ಇದ್ದರೂ ನಾವು ಭಯೋತ್ಪಾದನೆ ಮಟ್ಟ ಹಾಕುವ ವಿಷಯದಲ್ಲಿ ಅವರ ಪರ ಇದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅಲ್ಲಿಗೆ ಭೇಟಿ ನೀಡಿದ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ಆದರೂ ಇದು ಗುಪ್ತಚರ ಇಲಾಖೆಯ ವೈಫಲ್ಯ. ಭದ್ರತಾ ವೈಫಲ್ಯಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಮುಸ್ಲಿಂರ ಆರೋಪಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುವ ಕೆಲವು ಮಾಧ್ಯಮ, ರಾಜಕಾರಣಿಗಳ ಕೆಲಸ ಖಂಡನೀಯವಾದುದು. ಸಿಂಧು ನದಿಯ ಒಪ್ಪಂದ ರದ್ದು , ವೀಸಾ ರದ್ದು ಮುಂತಾದ ಕ್ರಮಗಳಿಂದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು” ಎಂದು ಒತ್ತಾಯಿಸಿದರು.

ಒಕ್ಕೂಟದ ಮುಖಂಡ ವಕೀಲ ನಜೀರ್ ಮಾತನಾಡಿ, “ಭೂಮಿಯ ಸ್ವರ್ಗವಾಗಿರುವ ಕಾಶ್ಮೀರಕ್ಕೆ ಪ್ರವಾಸ ಕೈಗೊಂಡ ವೇಳೆ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ದೇಶದ್ರೋಹಿ ಕೃತ್ಯ. ಇದನ್ನು ಬಳಸಿಕೊಂಡು ಮಾಧ್ಯಮಗಳು ಸಮುದಾಯದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ನೊಂದವರು ಹೇಳಿದಂತೆ ಕೆಲವು ಕಾಶ್ಮೀರಿಗಳು ಸಹಾಯ ಮಾಡಿದ್ದಾರೆ. ಸುಳ್ಳು ಸುದ್ದಿ, ದ್ವೇಷ ಹರಡುವ ಈ ರೀತಿಯ ಚಾನೆಲ್ ಗಳನ್ನು ನಿಷೇಧ ಮಾಡಬೇಕು. ಯಾವ ಧರ್ಮವೂ ಕೊಲ್ಲಲು ಹೇಳುವುದಿಲ್ಲ. ಇಲ್ಲಿ ಮಿಲಿಟರಿ ಕರ್ತವ್ಯ ಲೋಪ ಕಾಣುತ್ತದೆ. ಕೂಡಲೇ ತನಿಖೆ ನಡೆಸಿ ಭಯೋತ್ಪಾದಕರನ್ನು ಹಿಡಿದು ಗಲ್ಲಿಗೇರಿಸಬೇಕು” ಎಂದು ಒತ್ತಾಯಿಸಿದರು.

ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿ, “ಅದು ಕರಾಳ ದಿನ. ಭಯೋತ್ಪಾದಕರು ಯಾವ ಧರ್ಮಕ್ಕೂ ಸೇರಿದವರಲ್ಲ. ಭಯೋತ್ಪಾದಕತೆಯೇ ಅವರ ಧರ್ಮ. ನಾವು ಭಾರತದ ರಕ್ಷಣೆಯ ಬೆನ್ನಿಗೆ ನಿಂತಿದ್ದೇವೆ. ಕೋಮು ಸೌಹಾರ್ದ ಕಾಯ್ದು ಕೊಳ್ಳಲು ಬದ್ದವಾಗಿ ನಿಲ್ಲಬೇಕಿದೆ. ಸೇನೆ ಬಲಿಷ್ಠವಾಗಿದೆ. ಅಪರಾಧ ಎಸಗಿದ ಭಯೋತ್ಪಾದಕರಿಗೆ ಬುದ್ಧಿ ಕಲಿಸಬೇಕು. ಸರ್ಕಾರ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಬೇಕು” ಎಂದು ಒತ್ತಾಯಿಸಿದರು
ಈ ಸುದ್ದಿ ಓದಿದ್ದೀರಾ? ದಾವಣಗೆರೆಯಲ್ಲಿ ಸಂವಿಧಾನ ರಕ್ಷಣೆಗಾಗಿ ಸಂರಕ್ಷಕರ ಸಮಾವೇಶ, ಸಂವಿಧಾನ ರಕ್ಷಣೆಗೆ ಕಾರ್ಯಪಡೆ ಬದ್ದ.
ಮೊಹಮದ್ ಅಲಿ ಶೋಯಿಬ್ ಮಾತನಾಡಿ, “ಇಸ್ಲಾಂನಲ್ಲಿ ಹೇಳಿರುವಂತೆ ಒಬ್ಬನ ಕೊಲೆ, ಇಡೀ ಮಾನವ ಸಂಕುಲದ ಕೊಲೆ. ಭಯೋತ್ಪಾದಕರಿಗೆ ಧರ್ಮವಿಲ್ಲ. ಯಾವ ಧರ್ಮವೂ ಭಯೋತ್ಪಾದನೆಯನ್ನು ಸಾರುವುದಿಲ್ಲ. ಪ್ರವಾಸಿಗರ ಕಗ್ಗೊಲೆ ಮಾಡಿದ ಭಯೋತ್ಪಾದಕರನ್ನು ಕೂಡಲೇ ಹಿಡಿದು ಶಿಕ್ಷೆಗೊಳಪಡಿಸಬೇಕು. ಅದು ಇತರರಿಗೆ ಭಯೋತ್ಪಾದಕ ಚಟುವಟಿಕೆ ಮಾಡುವವರಿಗೆ ಪಾಠವಾಗಬೇಕು. ಮಾಧ್ಯಮಗಳು, ರಾಜಕಾರಣಿಗಳು ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಒಕ್ಕೂಟದ ಅಮಾನುಲ್ಲಾ, ಅದಿಲ್ ಖಾನ್, ಮಸೂದ್ ಅಹ್ಮದ್, ಜಬೀವುಲ್ಲಾ, ಜಾಫರ್, ರಿಯಾಜ್, ಶಬಾಸ್ ಖಾನ್, ಮುಜಾಮಿಲ್, ರಹಮತವುಲ್ಲಾ, ಹಯಾತ್, ಲಿಯಾಕತ್ ಅಲಿ, ನವೀದ್, ರಫೀಕ್ ಮತ್ತಿತರರು ಹಾಜರಿದ್ದರು.