ಪ್ರಜ್ವಲ್‌ ಲೈಂಗಿಕ ಕಾಂಡಕ್ಕೆ ಒಂದು ವರ್ಷ – ಕುಗ್ಗಿದ ಸಂತ್ರಸ್ತೆಯರು ಮತ್ತು ಬಲಿಪಶುಗಳ ಬದುಕು

Date:

Advertisements
ಈಗಲೂ ರೇವಣ್ಣರ ಬಗ್ಗೆ ಸಾರ್ವಜನಿಕರ ಭಾವನೆಯಲ್ಲಿ ಮೆಚ್ಚುಗೆಗಿಂತ ಭಯವೇ ಹೆಚ್ಚಿದೆ ಎನ್ನುವ ಮಾತುಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಭವಾನಿ ರೇವಣ್ಣ ಅವರು ಹಾಸನ ಜಿಲ್ಲೆಗೆ ಮೊದಲ ಬಾರಿಗೆ ಟೋಲ್ ದಾಟಿದ ತಕ್ಷಣ ಒಂದು ಬೆಂಗಾವಲು ಪಡೆಯೇ ಅವರನ್ನು ಹಿಂಬಾಲಿಸಿತು. ಮಹಿಳೆಯರು ಅವರ ಮೇಲೆ ಹೂವುಗಳನ್ನು ಸುರಿಸಿ, ಆರತಿ ಮಾಡಿ ಸ್ವಾಗತಿಸಿದರು. ಇದೇ ಅಲ್ಲವೇ ವ್ಯವಸ್ಥೆಯ ಅಣಕ?

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿ ಏಪ್ರಿಲ್ 28ಕ್ಕೆ ವರ್ಷ ಪೂರೈಸಲಿದೆ. ಜೈಲಿನಲ್ಲಿರುವ ಪ್ರಜ್ವಲ್‌ ವಿರುದ್ಧ ಕಳೆದ ವರ್ಷ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಸಂತ್ರಸ್ತೆ ಅವರ ಮನೆಕೆಲಸದಾಕೆಯಾಗಿದ್ದು, ದೂರು ನೀಡಿದ ದಿನದಿಂದಲೂ ಆಕೆಯ ಜೀವನ ಮತ್ತಷ್ಟು ಕುಸಿದು ಕುಗ್ಗಿದೆ.

ಕೆಲವು ವಾರಗಳ ಹಿಂದೆ ಪಶ್ಚಿಮ ಘಟ್ಟದ ​​ಸಣ್ಣ ಪಟ್ಟಣಕ್ಕೆ ತನ್ನ ಚಿಕ್ಕ ಮಕ್ಕಳನ್ನು ಕೆಲ ದಿನಗಳ ರಜೆಗೆ ಕರೆದೊಯ್ಯಲು ಸಂತ್ರಸ್ತೆ ಅನುಮತಿಗಾಗಿ ಎರಡು ಪತ್ರಗಳನ್ನು ಬರೆಯಬೇಕಾಯಿತು. ಅನಗತ್ಯ ವಿವರಣೆಗಳನ್ನು ನೀಡಬೇಕಾಯಿತು. ನಂತರ ಆಕೆಗೆ ಔಪಚಾರಿಕ ಅನುಮತಿ ಸಿಕ್ಕಿತು.

2024ರ ಏಪ್ರಿಲ್ 28ರಂದು ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಿಸಿದ ನಂತರ ಸಂತ್ರಸ್ತೆಯ ಜೀವನ ಸಂಪೂರ್ಣ ನರಕದಿಂದ ಕೂಡಿದೆ. ತನ್ನ ಪೋಷಕರು ಮತ್ತು ಮಕ್ಕಳೊಂದಿಗೆ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. “ನಾವು ಎಲ್ಲಿಯೂ ತಿರುಗಾಡಲು ಸಾಧ್ಯವಿಲ್ಲ. ಮಕ್ಕಳು ಶಾಶ್ವತವಾಗಿ ಬಂಧನದಲ್ಲಿರಲು ಸಾಧ್ಯವಿಲ್ಲ. ನಾವು ಎಷ್ಟು ದಿನ ಹೀಗೆ ಬದುಕಲು ಸಾಧ್ಯ?” ಎಂದು ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಮತ್ತು ಆಕೆಯ ಸಂಬಂಧಿಯೊಬ್ಬರು ಅಳಲು ತೋಡಿಕೊಂಡಿರುವುದಾಗಿ ‘ದಿ ಪ್ರಿಂಟ್‌ʼ ವರದಿ ಮಾಡಿದೆ.

Advertisements

ಹಚ್ಚ ಹಸಿರಿನಿಂದ ಕಂಗೊಳಿಸುವ ಹಾಸನದ ಖ್ಯಾತಿಗೆ ಕಪ್ಪು ಮಸಿ ಬಳಿದಿದ್ದು ಪ್ರಜ್ವಲ್ ರೇವಣ್ಣ. ಅವರ ಅಜ್ಜ ಹೆಚ್‌.ಡಿ ದೇವೇಗೌಡರು ಮಾಜಿ ಪ್ರಧಾನಿ, ಅವರ ಅಪ್ಪ ಹೆಚ್‌.ಡಿ ರೇವಣ್ಣ ಮಾಜಿ ಸಚಿವ, ಅವರ ಚಿಕ್ಕಪ್ಪ ಹೆಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಈಗ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ರಾಜಕೀಯ ಪ್ರಭಾವದ ಮುಂದೆ ಎಲ್ಲವೂ ಗೌಣ. ಅಧಿಕಾರದ ದರ್ಪದಿಂದ ಮೆರೆಯುತ್ತಿದ್ದ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಮಹಿಳೆಯರು ಮಾಡಿದ ಅತ್ಯಾಚಾರ ಆರೋಪಗಳಿಂದ ಹಾಸನಕ್ಕೆ ಕಪ್ಪುಚುಕ್ಕೆ ಮೆತ್ತಿಕೊಂಡಿತು. ಕಳೆದ ವರ್ಷ ಏಪ್ರಿಲ್‌ನಲ್ಲಿ ರಾಜ್ಯ ಮತ್ತು ದೇಶದಲ್ಲಿ ಪ್ರಜ್ವಲ್‌ ರೇವಣ್ಣ ಅವರದ್ದೇ ಸುದ್ದಿ.

ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಸನದಲ್ಲಿ ಗೌಡರ ರಿಪಬ್ಲಿಕ್‌ ಬಗೆ ಬಗೆಯಲ್ಲಿ ಅನಾವರಣಗೊಂಡಿತು. ಈಗಲೂ ರೇವಣ್ಣರ ಬಗ್ಗೆ ಸಾರ್ವಜನಿಕರ ಭಾವನೆಯಲ್ಲಿ ಮೆಚ್ಚುಗೆಗಿಂತ ಭಯವೇ ಹೆಚ್ಚಿದೆ ಎನ್ನುವ ಮಾತುಗಳು ಸಾಮಾನ್ಯವಾಗಿ ಕೇಳಿಬರುತ್ತವೆ. 2024ರ ಲೋಕಸಭಾ ಚುನಾವಣೆಯ ವೇಳೆ, ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಗ್ರಹದ ಪೆನ್‌ಡ್ರೈವ್‌ ಹಾಸನ ನಗರದ ಮೂಲೆ ಮೂಲೆಯಲ್ಲಿ ಜನರ ಕೈಗೆ ಸಿಕ್ಕಿತು. ಆ ವಿಡಿಯೋದಲ್ಲಿರುವ ಮೂವರು ಹೆಣ್ಣು ಮಕ್ಕಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು ಸಹ ಸುದ್ದಿಯಾಯಿತು. ಅತ್ಯಾಚಾರ ಸಂತ್ರಸ್ತೆಯಿಂದ ಹಿಡಿದು, ಅಶ್ಲೀಲ ವಿಡಿಯೋದಲ್ಲಿರುವ ಸಾಕಷ್ಟು ಮಹಿಳೆಯರು ಭಯದಲ್ಲೇ ಈಗಲೂ ಬದುಕುತ್ತಿದ್ದಾರೆ. ಅವರ ಚಲನವಲನಗಳನ್ನು ಪೊಲೀಸರು ನಿರ್ಬಂಧಿಸಿ ನಿಗಾ ಇಟ್ಟಿದ್ದಾರೆ. ಆದರೆ, ರೇವಣ್ಣ ಕುಟುಂಬದವರು ಮಾತ್ರ ತಮ್ಮ ಭದ್ರಕೋಟೆಯಲ್ಲಿ ಏನೂ ಆಗಿಲ್ಲವೆಂಬಂತೆ ಸಹಜವಾಗಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ.

ಸುಮಾರು ಮೂರು ವಾರಗಳ ಹಿಂದೆ ಸಂತ್ರಸ್ತೆ ರಜೆಗೆ ಹೋಗಲು ಪೊಲೀಸರಲ್ಲಿ ಅನುಮತಿ ಬೇಡುತ್ತಿದ್ದ ಸಮಯದಲ್ಲೇ, ಪ್ರಜ್ವಲ್ ತಾಯಿ ಭವಾನಿ ರೇವಣ್ಣ (ಸುಮಾರು 10 ತಿಂಗಳ ನಂತರ) ಹಾಸನಕ್ಕೆ ಹಿಂದಿರುಗಿದರು. ಅವರಿಗೆ ಹೂವು ಎರಚಿ ಸ್ವಾಗತ ನೀಡಲಾಯಿತು. ಅಪಹರಣ, ಕ್ರಿಮಿನಲ್ ಬೆದರಿಕೆ ಹಾಗೂ ಪ್ರಜ್ವಲ್‌ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ವೃದ್ಧ ಮಹಿಳೆಯ ಮೇಲೆ ಅಕ್ರಮ ಬಂಧನದ ಆರೋಪ ಎದುರಿಸುತ್ತಿರುವ ಭವಾನಿ ಅವರು ದೂರನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರಿಂದ ಅವರಿಗೆ ಹಾಸನ ಮತ್ತು ಮೈಸೂರು ಪ್ರವೇಶಿಸದಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಅವರು ಹಾಸನ ಜಿಲ್ಲೆಗೆ ಮೊದಲ ಬಾರಿಗೆ ಟೋಲ್ ದಾಟಿದ ತಕ್ಷಣ ಒಂದು ಬೆಂಗಾವಲು ಪಡೆಯೇ ಅವರನ್ನು ಹಿಂಬಾಲಿಸಿತು. ಮಹಿಳೆಯರು ಅವರ ಮೇಲೆ ಹೂವುಗಳನ್ನು ಸುರಿಸಿ, ಆರತಿ ಮಾಡಿ ಸ್ವಾಗತಿಸಿದರು. ಇದೇ ಅಲ್ಲವೇ ವ್ಯವಸ್ಥೆಯ ಅಣಕ?

“ಎಲ್ಲರನ್ನೂ ಬಿಟ್ಟು ನಾವು ಪ್ರತ್ಯೇಕವಾಗಿ ಇದ್ದೇವೆ. ನಾವು ತಿರುಗಾಡಲು ಅಥವಾ ಮುಕ್ತವಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ. ಜನರು ನಮ್ಮನ್ನು ನೋಡಿದಾಗ, ‘ಆ ವೀಡಿಯೊದಲ್ಲಿ ಅಥವಾ ಚಿತ್ರದಲ್ಲಿ ಇರುವವರು ನೀವೇನಾ’ ಎಂದು ಎಷ್ಟೋ ಸಲ ನೇರವಾಗಿ ಕೇಳಿದ್ದೂ ಉಂಟು. ಆಗ ಮುಜುಗರ ಅನುಭವಿಸಿದ್ದೇವೆ. ಆದರೆ, ವೀಡಿಯೊಗಳನ್ನು ಹಂಚಿಕೊಂಡ ವ್ಯಕ್ತಿ, ಅದು ಮಹಿಳೆಯರ ಮೇಲೆ ಬೀರುವ ಪರಿಣಾಮದ ಬಗ್ಗೆ ಯೋಚಿಸಲಿಲ್ಲ” ಎಂದು ಬಲಿಪಶು ಮಹಿಳೆಯೊಬ್ಬರು ‘ದಿ ಪ್ರಿಂಟ್‌‘ ಜೊತೆ ನೋವಿನಿಂದ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಜ್ವಲ್‌ಗೆ ಜಾಮೀನು ನೀಡಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಪ್ರಜ್ವಲ್‌ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಪ್ರಜ್ವಲ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿಚಾರಣೆಯೂ ನಡೆಯುತ್ತಿದೆ.

ಈ ಮಧ್ಯೆ ಪ್ರಜ್ವಲ್ ರೇವಣ್ಣ ಪರ ವಕೀಲ ಜಿ.ಅರುಣ್ ನ್ಯಾಯಾಧೀಶರ ಮೇಲೆಯೇ ಆರೋಪಗಳನ್ನು ಮಾಡುತ್ತಿದ್ದಾರೆ. “ಈ ಕೋರ್ಟ್‌ನಿಂದ ನ್ಯಾಯ ದೊರೆಯುತ್ತದೆ ಎಂಬ ನಂಬಿಕೆ ಇಲ್ಲ. ಯಾಕೆಂದರೆ, ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೂರ್ವಗ್ರಹಪೀಡಿತ ಭಾವನೆ ಹೊಂದಿದ್ದು ನ್ಯಾಯಸಮ್ಮತ ವಿಚಾರಣೆ ನಡೆಸುವ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ” ಎಂದು ದೂರಿದ್ದಾರೆ. ಅಲ್ಲದೆ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೇ ಬುಧವಾರ ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿದ್ದಾರೆ. ಈಗ ಇದು ಸಾಕಷ್ಟು ಚರ್ಚೆಗೆ ಒಳಗಾಗಿದೆ.

ಭವಾನಿ

ಚಾರ್ಜ್‌ಶೀಟ್‌ ಬಹಳಷ್ಟು ಸಂಗತಿ ಉಲ್ಲೇಖ

ಪ್ರಜ್ವಲ್ ರೇವಣ್ಣ ವಿರುದ್ಧ 2,144 ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಎಸ್‌ಐಟಿ ಈಗಾಗಲೇ ಸಲ್ಲಿಸಿದೆ. ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 137 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ಈ ವರದಿ ಓದಿದ್ದೀರಾ?: ಖಂಡನೆ, ಸಭೆ, ಬಂದ್, ಪ್ರತಿಭಟನೆ – ಇವು ಪಹಲ್ಗಾಮ್‌ ದಾಳಿಗೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ; ಅಸಹ್ಯ ಮೆರೆದ ಬಿಜೆಪಿ

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಅಪ್ಪ, ಮಗನ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಅಪ್ಪ ಹೆಚ್.ಡಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಹಾಗೂ ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಮನೆ ಕೆಲಸದ ಸಂತ್ರಸ್ತ ಮಹಿಳೆಗೆ ರೇವಣ್ಣ ಮನೆಯಲ್ಲಿ ಮೈ ಕೈ ಮುಟ್ಟಿ ದೌರ್ಜನ್ಯ ಎಸಗಿದ್ದಾರೆ. ಹಣ್ಣು ಕೊಡುವ ನೆಪದಲ್ಲಿ ಸೊಂಟ ಚಿವುಟಿ, ಸೀರೆ ಎಳೆದು ಪ್ರಜ್ವಲ್ ದೌರ್ಜನ್ಯವೆಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಹೊಳೆನರಸೀಪುರ ಮನೆಯಲ್ಲಿ, ಬೆಂಗಳೂರಿನ ಬಸವನಗುಡಿ ಮನೆಯಲ್ಲೂ ಅತ್ಯಾಚಾರ ನಡೆಸಿರೋದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಸಂತ್ರಸ್ತೆಯನ್ನು ಹೊಳೆನರಸೀಪುರ ಮನೆಯಿಂದ ಬೆಂಗಳೂರು ಮನೆಗೆ ಕರೆದುಕೊಂಡು ಬಂದು ಕೂಡ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯನ್ನು ಬೆದರಿಸಿ ಹೊತ್ತಿಲ್ಲದ ಹೊತ್ತಿನಲ್ಲಿ ತನ್ನ ಸ್ಥಳಕ್ಕೆ ಕರೆಸಿಕೊಂಡು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತನಿಖೆ ನಡೆಸಿದ ಎಸ್‌ಐಟಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಎ1 ಆರೋಪಿ ಹೆಚ್‌.ಡಿ ರೇವಣ್ಣ

ಮನೆಗೆಲಸದ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಚ್‌.ಡಿ ರೇವಣ್ಣ ಅವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದೆ. ಅವರ ವಿರುದ್ಧ ಕಲಂ 354, 354 (ಎ) ಐಪಿಸಿ ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಜ್ವಲ್‌ ರೇವಣ್ಣ ಎ2 ಆರೋಪಿಯಾಗಿದ್ದಾರೆ. 354 A, 354 D, 509 ಅಡಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಆದರೆ, ನಂತರ ಅವರಿಗೆ ಜಾಮೀನು ನೀಡಲಾಯಿತು. ದೂರಿನಲ್ಲಿ ಆರೋಪಿ ಎಂದು ಹೆಸರಿಸಲಾದ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X