ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿರುವುದು ತನ್ನ ಸರ್ಕಾರದ ವೈಫಲ್ಯಗಳ ಗಮನ ಬೇರೆಡೆ ಸೆಳೆಯಲು ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿರುವುದು ಜನಗಳಲ್ಲಿ ಒಡಕುಂಟು ಮಾಡಿ ಮತಗಳನ್ನು ಧ್ರುವೀಕರಿಸುವುದಾಗಿದೆ. ಸಾಮಾನ್ಯ ಜನರ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಇಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ಮೋದಿ ಅವರು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದಾರೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
“ಮಣಿಪುರ ಹೊತ್ತಿ ಉರಿಯುತ್ತಿದೆ. ಚೀನಾ ಭಾರತದ ಭೂಪ್ರದೇಶದಲ್ಲಿ ಬಂದು ಕುಳಿತಿದೆ. ಸಾಮಾನ್ಯ ಜನರು ಉಪಯೋಗಿಸುವ ವಸ್ತುಗಳ ಬೆಲೆಗಳು ಏರುತ್ತಿವೆ. ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಪ್ರಧಾನಿಯವರು ಮತ ಗಳಿಕೆಗೆ ವಿಭಿನ್ನವಾದ ಆಲೋಚನೆಯಲ್ಲಿದ್ದಾರೆ” ಎಂದು ಮಾಜಿ ಕೇಂದ್ರ ಸಚಿವರು ಸರ್ಕಾರವನ್ನು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಟ್ವಿಟರ್ | ಪೋಸ್ಟ್ ಓದುವಿಕೆ ಮೇಲೆ ಮಿತಿ; ಟ್ವೀಟ್‌ಗಳ ನೋಡಲು ಸೈನ್ ಇನ್ ಕಡ್ಡಾಯ
“ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಜೂನ್ 15ರಂದೇ ನಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕರಡು ಮತ್ತು ಚರ್ಚೆ ಇದ್ದಾಗ ನಾವು ಭಾಗವಹಿಸುತ್ತೇವೆ ಮತ್ತು ಪ್ರಸ್ತಾಪಿಸಿರುವ ವಿಷಯವನ್ನು ಪರಿಶೀಲಿಸುತ್ತೇವೆ. ಸಾರ್ವಜನಿಕರ ಸೂಚನೆಗಾಗಿ ಕಾನೂನು ಆಯೋಗ ಸಂಗ್ರಹಿಸುವ ಅಭಿಪ್ರಾಯದ ನಿರೀಕ್ಷೆಯಲ್ಲಿದ್ದೇವೆ. ಪ್ರತಿಕ್ರಿಯೆಗಳು ಬಿಡುಗಡೆಯಾದ ನಂತರ ಈ ಬಗ್ಗೆ ಮತ್ತೊಮ್ಮೆ ನಮ್ಮ ನಿಲುವು ತಿಳಿಸುತ್ತೇವೆ” ಎಂದು ಜೈರಾಮ್ ರಮೇಶ್ ಹೇಳಿದರು.
“ವಿಷಯದ ಪ್ರಸ್ತುತತೆ ಮತ್ತು ಪ್ರಾಮುಖ್ಯತೆ ಮತ್ತು ವಿವಿಧ ನ್ಯಾಯಾಲಯದ ಆದೇಶಗಳ ಅಸ್ಪಷ್ಟ ಉಲ್ಲೇಖಗಳನ್ನು ಹೊರತುಪಡಿಸಿ ವಿಷಯವನ್ನು ಏಕೆ ಮರುಪರಿಶೀಲಿಸಲಾಗುತ್ತಿದೆ ಎಂಬುದರ ಕುರಿತು 21ನೇ ಕಾನೂನು ಆಯೋಗವು ಯಾವುದೇ ಕಾರಣಗಳನ್ನು ನೀಡಿಲ್ಲ. ವಿಷಯದ ವಿವರವಾಗಿ ಮತ್ತು ಸಮಗ್ರವಾಗಿ ಪರಿಶೀಲನೆ ನಡೆಸಿದ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿರುವುದು ‘ಈ ಹಂತದಲ್ಲಿ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ’ ಎಂದು ಆಯೋಗವೇ ಅಭಿಪ್ರಾಯ ಪಟ್ಟಿದೆ. ಆದರೆ ಮೋದಿ ಸರ್ಕಾರ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿರುವುದು ಹತಾಶೆಯಲ್ಲದೆ ಮತ್ತೇನಿಲ್ಲ” ಎಂದು ಕಾಂಗ್ರೆಸ್ ನಾಯಕ ತಿಳಿಸಿದರು.
ಮೋದಿ ಸರ್ಕಾರವೇ ನೇಮಿಸಿದ 21ನೇ ಕಾನೂನು ಆಯೋಗವು ತನ್ನ ವರದಿಯಲ್ಲಿ “ಈ ಆಯೋಗವು ಏಕರೂಪದ ನಾಗರಿಕ ಸಂಹಿತೆಯನ್ನು ಒದಗಿಸುವ ಬದಲು ತಾರತಮ್ಯದ ಕಾನೂನುಗಳೊಂದಿಗೆ ವ್ಯವಹರಿಸುತ್ತದೆ. ಈ ಹಂತದಲ್ಲಿ ಕಾನೂನಿನ ಅಗತ್ಯವಿಲ್ಲ ಅಥವಾ ಅಪೇಕ್ಷಣೀಯವಲ್ಲ” ಎಂದು ತಿಳಿಸಿರುವುದನ್ನು ಕಾಂಗ್ರೆಸ್ ನಾಯಕ ಉಲ್ಲೇಖಿಸಿದರು.
ಬಿಜೆಪಿ ತಂತ್ರ ಜನರಿಗೆ ಅರ್ಥವಾಗಿದೆ. ಇನ್ನು ಅದು ನಡೆಯಲ್ಲ. ಕರ್ನಾಟಕವೇ ಅದಕ್ಕೆ ಉದಾಹರಣೆ.