ಐಪಿಎಲ್ 2025 ನೇ ಆವೃತ್ತಿಯ 45ನೇ ಪಂದ್ಯ ಇಂದು ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಲಿದ್ದು, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿದೆ. ಎರಡೂ ತಂಡಗಳು ಪ್ರಸಕ್ತ ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ತಲಾ 5 ಜಯ ಸಾಧಿಸಿದ್ದು, 10 ಅಂಕಗಳನ್ನು ಪಡೆದಿವೆ. ಈ ಪಂದ್ಯ ಗೆದ್ದವರು ಪ್ಲೇ ಆಫ್‌ಗೆ ಹತ್ತಿರವಾಗಲಿದ್ದಾರೆ.
ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ಬಳಗವೇ ಇದೆ. ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿರುವ ಹಾರ್ದಿಕ್ ಪಾಂಡ್ಯ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡದ ರಿಷಭ್ ಪಂತ್ ನಡುವಿನ ಕಾಳಗ ರೋಚಕತೆ ಹೆಚ್ಚಿಸಿದೆ. ಉಭಯ ತಂಡಗಳು ಈಗಾಗಲೇ 7 ಬಾರಿ ಐಪಿಎಲ್ ನಲ್ಲಿ ಮುಖಾಮುಖಿಯಾಗಿವೆ. ಲಖನೌ ಆರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಮುಂಬೈ ಒಂದು ಪಂದ್ಯದಲ್ಲಿ ಗೆಲುವು ಪಡೆದಿದೆ. ಮುಂಬೈನ ವಾಂಖೇಡೆ ಅಂಗಳದಲ್ಲಿ ಈವರೆಗೆ ಒಟ್ಟು 120 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 55 ಬಾರಿ, ರನ್ ಬೆನ್ನಟ್ಟಿದ ತಂಡ 65 ಬಾರಿ ಜಯಗಳಿಸಿದೆ.
ಮುಂಬೈ ತಂಡದ 18ನೇ ಆವೃತ್ತಿಯ ಆರಂಭದಲ್ಲಿ ಸೋಲುಗಳಿಂದ ಕಂಗೆಟ್ಟಿತ್ತು. ಆದರೆ ಈಗ ಗೆಲುವಿನ ಹಾದಿಗೆ ಮರಳಿದೆ. ಈ ವೇಳೆ ತಂಡದ ಸ್ಟಾರ್ ಆಟಗಾರರು ತಂಡದ ಗೆಲುವಿನಲ್ಲಿ ಅಗತ್ಯ ಕಾಣಿಕೆ ನೀಡುತ್ತಿದ್ದಾರೆ. ಜಸ್ಪ್ರಿತ್ ಬುಮ್ರಾ ಲಯಬದ್ಧ ದಾಳಿ ನಡೆಸುತ್ತಿದ್ದು, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್ ಹೊಸ ಚೆಂಡಿನ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ. ಮಧ್ಯದ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, ಮಿಚೆಲ್ ಸ್ಯಾಂಟ್ನರ್ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಕಬಳಿಸುತ್ತಿದ್ದಾರೆ.
ಕಳೆದ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿರುವ ಟ್ರೆಂಟ್ ಬೌಲ್ಟ್ ಮೇಲೆ ವಿಶ್ವಾಸ ಹೆಚ್ಚಿದೆ. ಆರಂಭದಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಸತತ ಅರ್ಥ ಶತಕ ಬಾರಿಸಿದ್ದಾರೆ. ಇವರು ಎದುರಾಳಿ ಬೌಲರ್‌ಗಳಿಗೆ ಸ್ವಿಂಹಸ್ವಪ್ನರಾಗಬಹುದು. ವಿಕೆಟ್ ಕೀಪರ್ ಬ್ಯಾಟರ್ ರಯನ್ ರಿಕಲ್ಟನ್, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಕಾಡಬಲ್ಲರು. ಇನ್ನು ಹಾರ್ದಿಕ್ ಪಾಂಡ್ಯ, ನಮನ್ ಧೀರ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಅನಿವಾರ್ಯತೆಯಿದೆ ಅಂದಾಗ ಗೆಲುವು ಸಾಧ್ಯ.
ಈ ಸುದ್ದಿ ಓದಿದ್ದೀರಾ? ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಿದ ‘ಕ್ರಿಕೆಟ್’; ಮತ್ತೆ ತನ್ನ ಸಾಮರ್ಥ್ಯ ತೋರಿಸಿದ ಕನ್ನಡಿಗ
ಲಖನೌ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್ ಬಲವಾಗಿರುವ ನಿಕೋಲಸ್ ಪೂರನ್ ಪ್ರಸಕ್ತ ಲೀಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಭರವಸೆ ಹೆಚ್ಚಿದೆ. ಇನ್ನು ಆರಂಭಿಕ ಮಿಚೆಲ್ ಮಾರ್ಷ್, ಐಡೇನ್ ಮಾರ್ಕ್ರಾಮ್ ಎದುರಾಳಿ ಬೌಲರ್‌ಗಳಿಗೆ ಕಾಡಬಲ್ಲರು. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬದೋನಿ ಅವರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಶಾರ್ದೂಲ್ ಠಾಕೂರ್, ಆವೇಶ್ ಖಾನ್, ದಿಗ್ವೇಶ್ ರಾಠಿ, ರವಿ ಬಿಷ್ಣೋಯಿ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿದಾಗ ಗೆಲುವು ಸಾಧ್ಯ.
ಉಭಯ ತಂಡಗಳ 11ರ ಬಳಗ:
ಮುಂಬೈ ಇಂಡಿಯನ್ಸ್ : ರಿಯಾನ್ ರಿಕೆಲ್ಟನ್(ವಿಕೆಟ್ ಕೀಪರ್), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್ , ಜಸ್ಪ್ರೀತ್ ಬುಮ್ರಾ , ವಿಘ್ನೇಶ್ ಪುತ್ತೂರು.
ಇಂಪ್ಯಾಕ್ಟ್ ಆಟಗಾರ: ರೋಹಿತ್ ಶರ್ಮಾ
ಲಖನೌ ಸೂಪರ್ ಜೈಂಟ್ಸ್ : ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್ , ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್ , ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ರವಿ ಬಿಷ್ಣೋಯ್ , ಅವೇಶ್ ಖಾನ್ .
ಇಂಪ್ಯಾಕ್ಟ್ ಆಟಗಾರ: ಪ್ರಿನ್ಸ್ ಯಾದವ್
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ ಸ್ಟಾರ್
