ಯುವನಿಧಿ ಯೋಜನೆಯನ್ನು ಕನಿಷ್ಠ ಐದು ವರ್ಷಗಳ ಹಿಂದಿನ ನಿರುದ್ಯೋಗಿಗಳಿಗೂ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಸದಸ್ಯರು ದಾವಣಗೆರೆ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
“ರಾಜ್ಯ ಸರ್ಕಾರವು ರಾಜ್ಯದ ನಿರುದ್ಯೋಗಿ ಯುವಜನರಿಗೆ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದನ್ನು ಅಖಿಲ ಭಾರತ ಯುವಜನ ಫೆಡರೇಷನ್ ಅಭಿನಂದಿಸುತ್ತದೆ. ಆದರೆ, ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಪೂರ್ಣಗೊಳಿಸಿದವರನ್ನು ಮಾತ್ರ ಪರಿಗಣಿಸಲು ಮುಂದಾಗಿರುವ ಕ್ರಮ ನ್ಯಾಯ ಸಮ್ಮತವಲ್ಲ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕೋವಿಡ್ ಪರಿಣಾಮದಿಂದ ಉದ್ಯೋಗದಲ್ಲಿ ತೊಂದರೆಗೊಳಗಾದವರು ಬಹುತೇಕರಿದ್ದಾರೆ” ಎಂದು ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ತಿಳಿಸಿದರು.
“ಕೋವಿಡ್ ಪರಿಣಾಮದಿಂದ ಉದ್ಯೋಗ ಕಳೆದುಕೊಂಡಿರುವರು ಯುವನಿಧಿ ಯೋಜನೆಯ ನಿಜವಾದ ಫಲಾನುಭವಿಗಳು. ಆದರೆ ಇಂದು ಅವರನ್ನು ಕಡೆಗಣಿಸಿರುವುದು ಸರಿಯಲ್ಲ. ಸರ್ಕಾರ ಕೇವಲ ಪ್ರಚಾರ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರದೇ, ವೈಜ್ಞಾನಿಕ ಕ್ರಮವನ್ನು ಅನುಸರಿಸಿ ಕನಿಷ್ಠ 5 ವರ್ಷಗಳ ಹಿಂದಿನ ಅವಧಿಯಲ್ಲಿ ಶಿಕ್ಷಣ ಪೂರ್ಣಗೊಳಿಸಿದವರಿಗೂ ಈ ಯೋಜನೆಯನ್ನು ವಿಸ್ತರಿಸಬೇಕು” ಎಂದು ಒತ್ತಾಯಿಸಿದರು.
“ರಾಜ್ಯದ ಹಲವು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ನೇಮಕಾತಿ ಮಾಡಬೇಕು. ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ವಿಧಿಸುವ ಶುಲ್ಕದ ಹೊರೆಯನ್ನು ಕಡಿಮೆ ಮಾಡಬೇಕು. ರಾಜ್ಯದ ಯುವಜನರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಯುವನೀತಿಯನ್ನು ಪರಿಷ್ಕರಿಸಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಮಾಜಕ್ಕೆ ಉತ್ತಮ ಪ್ರಜೆಗಳ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ: ಸಚಿವ ಕೆ ಎನ್ ರಾಜಣ್ಣ
“ರಾಜ್ಯದಲ್ಲಿ ಹಿಂದಿನ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ ಅವೈಜ್ಞಾನಿಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020ನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರದ್ದುಪಡಿಸುವ ಮೂಲಕ ರಾಜ್ಯದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆರನಹಳ್ಳಿ ರಾಜು, ಬಸವರಾಜ್, ಸಂತೋಷ್, ಶೇಖರ್, ಅರುಣಾ, ಕೆ. ಮಲ್ಲಿಕಾರ್ಜುನ, ರಾಕೇಶ್, ಹನುಮಂತಪ್ಪ, ಎ ತಿಪ್ಪೇಶ್ ಸೇರಿದಂತೆ ಇತರರು ಇದ್ದರು