ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳಿದ್ದ ಮಹಿಳೆ ದಿಢೀರನೇ ಕುಸಿದು ಮೃತಪಟ್ಟಿರುವ ಘಟನೆ ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದ ರಾಮ ಕೆರೆ ಬಳಿ ನಡೆದಿದೆ.
ಮುಧೋಳ ಗ್ರಾಮದ ರಾಮುಲಮ್ಮ ಹಣಮಂತು ನಾಡೆಪಲ್ಲಿ (46) ಮೃತಪಟ್ಟ ಮಹಿಳೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಮನರೇಗಾ ಯೋಜನೆಯಡಿ ಮುಧೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮ ಕೆರೆಯ ಬಲಭಾಗದ ಕಾಲುವೆ ಕೆಲಸ ಮಾಡುತ್ತಿದ್ದರು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪರಿಹಾರಕ್ಕೆ ಆಗ್ರಹ : ಉದ್ಯೋಗ ಖಾತ್ರಿ ಕೆಲಸ ಮಾಡುವಾಗಲೇ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಬೇಕು ಎಂದು ಮುಖಂಡ ವಿಜಯ ಕುಮಾರ್ ಖೇವಜಿ ಮತ್ತು ತಮ್ಮಪ್ಪ ಬಾಗಾಳಿ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ಚನ್ನಪ್ಪ ರಾಯಣ್ಣನವರ್ ಭಾನುವಾರ ಭೇಟಿ ನೀಡಿದರು. ಘಟನೆ ಬಗ್ಗೆ ವಿವರ ಪಡೆದ ಅವರು, ʼಗ್ರಾಮ ಪಂಚಾಯಿತಿ ಮತ್ತು ಸರ್ಕಾರದ ವತಿಯಿಂದ ಪರಿಹಾರ ಒದಗಿಸಲು ಸಹಕಾರ ನೀಡುತ್ತೇನೆʼ ಎಂದು ತಿಳಿಸಿದರು. ನರೇಗಾ ಸಹಾಯಕ ನಿರ್ದೇಶಕ ರಾಜಶೇಖರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಗವಂತರಾಯ ಇದ್ದರು.