ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡಲು ಪ್ರಧಾನಿ ಮೋದಿ ಅಕ್ಕಿ ಕೊಡುತ್ತಿಲ್ಲವೆಂದು ಕಾಂಗ್ರೆಸ್ ಸರ್ಕಾರ ದೂಷಿಸುತ್ತಿದೆ. ಆದರೆ, ನಾವು ಅಧಿಕಾರದಲ್ಲಿದ್ದಾಗಲೂ ಮೋದಿ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲು ಒಪ್ಪಿರಲಿಲ್ಲ. ನಾವೂ ತಿಂಗಳಿಗೆ ತಲಾ 7 ಕೆ.ಜಿ ಅಕ್ಕಿ ಕೊಡಲು ಸುಮಾರು 10 ಬಾರಿ ಪ್ರಯತ್ನ ಮಾಡಿದ್ದೆವು ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಬಿಜೆಪಿ ಮತ್ತು ತಮ್ಮ ಸೋಲಿನ ನಂತರ ಮೌನವಾಗಿದ್ದ ಮಾಧುಸ್ವಾಮಿ, ಇದೀಗ ಮೌನ ಮುರಿದಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. “ಕಾಂಗ್ರೆಸ್ ಮಾಡಿದ ಪಾಪಕ್ಕೆ ಈಗ ಸುಮ್ಮನೆ ಪ್ರಧಾನಿ ಮೋದಿ ಅವರನ್ನು ದೂಷಿಸುತ್ತಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಕ್ಕೂ ಕೇಂದ್ರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ” ಎಂದು ಹೇಳಿದ್ದಾರೆ.
“ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಮ್ ಅಕ್ಕಿ ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅದರಂತೆ,ತಿಂಗಳಿಗೆ 5 ಕೆ.ಜಿ ಅಕ್ಕಿ ಕೊಡಲಾಗುತ್ತಿದೆ. ಹೆಚ್ಚುವರಿ ದಾಸ್ತಾನು ಇರುವ ಅಕ್ಕಿಯನ್ನು ಬರಗಾಲ, ಅತಿವೃಷ್ಟಿಯಂತಹ ಸಂಕಷ್ಟ ಕಾಲದಲ್ಲಿ ಬಳಸಲು ಸಂಗ್ರಹಿಸಲಾಗಿರುತ್ತದೆ. ದಾಸ್ತಾನು ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟು ಕೊಡೋಕೆ ಆಗುತ್ತಾ?” ಎಂದಿದ್ದಾರೆ.
“ಸಂಕಷ್ಟದ ಕಾಲ ಬಂದರೆ, ರಾಜ್ಯಕ್ಕೆ ಮೋದಿ ಅಕ್ಕಿ ಕೊಟ್ಟೇ ಕೊಡುತ್ತಾರೆ. ತೆರಿಗೆದಾರರ ದುಡ್ಡನ್ನು ಇಷ್ಟ ಬಂದ ಹಾಗೆ ಮನೆಯಲ್ಲಿ ಕುಂತವರಿಗೆ ಹಂಚುತ್ತೇನೆ ಎಂದರೆ ರಾಜ್ಯದ ಪರಿಸ್ಥಿತಿ ಏನಾಗಬೇಡ” ಎಂದು ಪ್ರಶ್ನಿಸಿದ್ದಾರೆ.
“ಕೆಲಸ ಮಾಡಿದ್ದಕ್ಕೆ ಜನ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆವು. ಆದರೆ, ಜನ ನಮ್ಮನ್ನು ಕಡೆಗಣಿಸಿದರು. ಅವರಿಗೆ ಕಾಂಗ್ರೆಸ್‌ನವರು ಕೊಡುವ ಅಕ್ಕಿ, ದುಡ್ಡೇ ಹೆಚ್ಚಾಯಿತು. ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ನಾಯಕರು ಸೋತಿದ್ದಾರೆ. ಅವರ ಉಚಿತ ಭಾಗ್ಯಗಳ ಮುಂದೆ ನಮ್ಮ ಕೆಲಸ ಕೊಚ್ಚಿಕೊಂಡು ಹೋಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.