ಇಂಗ್ಲೆಂಡ್‌ನ ಪ್ರಧಾನಿ ರಿಷಿ ಸುನಕ್ ನಿನ್ನೆ (ಜುಲೈ 2) ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ವಿರುದ್ಧದ ಆ್ಯಷಸ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ತಮಗಾದ ಜನಾಂಗೀಯ ದ್ವೇಷ ಹಾಗೂ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ಕೋಚ್ ರಾಹುಲ್ ದ್ರಾವಿಡ್ ಬಗೆಗಿನ ಕ್ರಿಕೆಟ್ ಆಟದ ಬಗ್ಗೆ ಮಾತನಾಡಿದರು.
ಎಲ್ಲ ಹಂತದ ಕ್ರಿಕೆಟ್ ನಲ್ಲಿ ಜನಾಂಗೀಯ ದ್ವೇಷ, ಲಿಂಗ ಭೇದ, ಪ್ರತ್ಯೇಕತಾವಾದ, ವರ್ಗಾಧಾರಿತ ಪಕ್ಷಪಾತ ಆಳವಾಗಿ ಬೇರೂರಿದೆ ಎಂಬ ವರದಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಿಷಿ ಸುನಕ್, “ಕ್ರಿಕೆಟಿನಲ್ಲಿ ನನಗೆ ಈ ಅನುಭವ ಆಗಿಲ್ಲ. ಆದರೆ ಜೀವನದ ಆರಂಭಿಕ ದಿನಗಳಲ್ಲಿ ನನಗೆ ಜನಾಂಗೀಯ ದ್ವೇಷದ ಅನುಭವ ಆಗಿದೆ. ನನ್ನ ಕೆಲಸದಲ್ಲಿ ಪ್ರತಿ ದಿನ, ಪ್ರತಿ ಗಂಟೆ, ಪ್ರತಿ ನಿಮಿಷವೂ ಟೀಕೆಗಳನ್ನು ಎದುರಿಸುತ್ತೇನೆ. ಆದರೆ ಜನಾಂಗೀಯ ದ್ವೇಷವು ನಿಮ್ಮನ್ನು ಗಾಯವೇ ಇಲ್ಲದಂತೆ ಒಳಗೊಳಗೆ ಚುಚ್ಚುತ್ತದೆ, ನೋಯಿಸುತ್ತದೆ. ಆದರೆ ಈಗ ನನ್ನ ಮಕ್ಕಳಿಗೂ ಈ ಅನುಭವವಾಗುತ್ತಿದೆ ಎಂದು ಅನ್ನಿಸುವುದಿಲ್ಲ” ಎಂದಿದ್ದಾರೆ.
ಕ್ರಿಕೆಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರಿಕೆಟ್ ಆಟಗಾರರಲ್ಲಿ ನನಗೆ ರಾಹುಲ್ ಡ್ರಾವಿಡ್ ಅಚ್ಚು ಮೆಚ್ಚು. ಅವರ ತಂತ್ರಗಾರಿಕೆ, ವರ್ತನೆ, ವ್ಯಕ್ತಿತ್ವ ನನಗೆ ಇಷ್ಟ. 2008 ರಲ್ಲಿ ಭಾರತಕ್ಕೆ ಬಂದದ್ದನ್ನು ನೆನಪಿಸಿಕೊಂಡ ರಿಷಿ ಸುನಕ್, ಆಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ತೆರಳಿದ್ದೆ” ಎಂದು ರಿಷಿ ಸುನಕ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಆ್ಯಷಸ್ ಸರಣಿ | ಬೆನ್ ಸ್ಟೋಕ್ಸ್ ಸ್ಫೋಟಕ ಆಟ ವ್ಯರ್ಥ; ಎರಡನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯ
“2008 ರಲ್ಲಿ ಭಯೋತ್ಪಾದಕ ದಾಳಿ ನಡೆದಾಗ ನಾನು ಭಾರತದಲ್ಲಿದ್ದೆ. ಗೆಳೆಯನ ಮದುವೆಗೆ ಅಂತ ನಾನು ಭಾರತಕ್ಕೆ ಹೋಗಿದ್ದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಸಹ ಭಾರತದ ಪ್ರವಾಸದಲ್ಲಿತ್ತು. ಚೆನ್ನೈನಲ್ಲಿ ಟೆಸ್ಟ್ ಪಂದ್ಯ ಆಡುತ್ತಿತ್ತು. ಆ ಪಂದ್ಯವನ್ನು ನೋಡಲು ನಾನು ಹೋಗಿದ್ದೆ. ಆ ಪಂದ್ಯದಲ್ಲಿ ರನ್ ಬೆನ್ನಟ್ಟುವಾಗ ಸಚಿನ್ ತೆಂಡೂಲ್ಕರ್ ಅವರು ಆಡಿದ ಉತ್ತಮವಾದ ಆಟವನ್ನು ನೋಡಿದೆ. ಆದರೆ ಅಂದಿನ ಪಂದ್ಯದಲ್ಲಿ ನಮ್ಮ ತಂಡ ಸೋತಿತ್ತು. ಭಾರತ ತಂಡ ಗೆಲುವು ಸಾಧಿಸಿತ್ತು” ಎಂದು ರಿಷಿ ಸುನಕ್ ಹೇಳಿದರು.
“ಪ್ರಧಾನಿ ಹುದ್ದೆಗೆ ಆಯ್ಕೆಯಾಗುವ ಮೊದಲು ಕ್ರಿಕೆಟ್ ಆಟದ ಬಗ್ಗೆ ತುಂಬಾನೇ ಒಲವನ್ನು ಹೊಂದಿದ್ದೆ. ನಾನು ಒಬ್ಬ ಕ್ರೀಡಾ ಅಭಿಮಾನಿಯಾಗಿದ್ದೆ. ಆದರೆ ನಂತರದ ದಿನಗಳಲ್ಲಿ ನನ್ನ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಯಿತು” ಎಂದು ತಿಳಿಸಿದ್ದಾರೆ.