ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮಗಳ ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.
ಬಾಲ್ಯ ವಿವಾಹದ ಸುದ್ದಿ ಹರಿದಾಡುತ್ತಿದ್ದಂತೆ ಹಿರೇಖೇಡ ಗ್ರಾಮ ಪಂಚಾಯತಿ ಅಧಿಕಾರಿ ಏ.25ರಂದು ಬಾಲಕಿ ವಿವಾಹವಾದ ಶ್ಯಾಮಣ್ಣ ಬಂಕಾಪೂರ, ಇವರ ಸಂಬಂಧಿಗಳಾದ ಪಕ್ಕೀರಪ್ಪ ಬಂಕಾಪೂರ ಹಾಗೂ ದೇವಮ್ಮ ಎಂಬುವರ ವಿರುದ್ದ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ದೂರು ದಾಖಲಿಸದಂತೆ ಶಾಸಕರು ಒತ್ತಡ ಹಾಕಿದ ಹಿನ್ನಲೆ ಐದು ದಿನದ ಬಳಿಕ ಮೂವರ ವಿರುದ್ಧವಷ್ಟೇ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬಾಲ್ಯ ವಿವಾಹದಲ್ಲಿ ಭಾಗಿಯಾಗಿದ್ದ ಕಂಪ್ಲಿ ಹಾಲಿ ಶಾಸಕ ಜೆ ಎನ್ ಗಣೇಶ್ ಹಾಗೂ ಗಂಗಾವತಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲ್ಯ ವಿವಾಹ ನಿಷೇಧವಾಗಿದ್ದರೂ ಕೊಪ್ಪಳ ಜಿಲ್ಲೆಯಲ್ಲಿ ನಿರಾತಂಕವಾಗಿ ಈ ರೀತಿ ವಿವಾಹಗಳು ನಡೆಯುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬಾಲ್ಯ ವಿವಾಹದಲ್ಲಿ ಪ್ರತಿಷ್ಠಿತ ರಾಜಕಾರಣಿಗಳ ಭಾಗಿಯಾಗುವಿಕೆಯೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೊಪ್ಪಳ | ಪಹಲ್ಗಾಮ್ ಉಗ್ರ ಕೃತ್ಯಕ್ಕೆ ಸಿಪಿಐಎಂಎಲ್ ಖಂಡನೆ
ಈ ಪ್ರಕರಣದ ಬೆನ್ನಲ್ಲೇ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಮತ್ತೊಂದು ಬಾಲ್ಯ ವಿವಾಹವಾದ ಘಟನೆ ನಡೆದಿರುವುದು ಬೆಳಿಕಿಗೆ ಬಂದಿದೆ ಎನ್ನಲಾಗಿದೆ. ಸಂಬಂಧ ಮಾಹಿತಿ ನಿರೀಕ್ಷಿಸಿದೆ.