ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಶಾಸಕರ ಶಿಫಾರಸು ತಂದ್ರೆ ಸಾಲದು, ಜೊತೆಗೆ 30 ಲಕ್ಷ ದುಡ್ಡು ತನ್ನಿ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.
ವಿಧಾನಸೌಧದಲ್ಲಿ ಜಂಟಿಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಡುವೆ ಸುದ್ದಿಗೋಷ್ಠಿ ಕರೆದು ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು.
“ಒಬ್ಬ ಶಾಸಕನಾಗಿ ಸರ್ಕಾರದ ಲೋಪದೋಷಗಳ ಬಗ್ಗೆ ಚರ್ಚಿಸುತ್ತೇನೆ. ವಿಪಕ್ಷ ನಾಯಕನಾಗಿ ಈ ಸರ್ಕಾರವನ್ನು ಟೀಕಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ಕೊಟ್ಟ ಭರವಸೆ ಈಡೇರಿಸಲು ಆಗಿಲ್ಲ. ಈ ಸರ್ಕಾರ ಐಸಿಯುಗೆ ಹೋಗುವ ಕಾಲ ಬರುತ್ತೆ” ಎಂದರು.
“ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಲಿದೆ. ಮುಂದಿನ ಐದು ವರ್ಷಕ್ಕೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ಇಲ್ಲ. ರಾಜ್ಯಪಾಲರ ಭಾಷಣದ ವೇಳೆ ಶಾಸಕರು ಮೇಜು ಕುಟ್ಟಿದ್ದು ನೋಡಲಿಲ್ಲ” ಎಂದರು.
“ರಾಜ್ಯಪಾಲರಿಂದ ಈ ಸರ್ಕಾರ ಭಾಷಣ ಮಾಡಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ರಾಜ್ಯಪಾಲರ ಮೂಲಕ ಸದನಕ್ಕೆ, ರಾಜ್ಯದ ಜನತೆಗೆ ಸಂದೇಶ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದ ಪಕ್ಷ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಸರ್ಕಾರ ಹಾಲು ಉತ್ಪಾದಕರಿಗೆ ಹಣ ಕಡಿತ ಮಾಡಿದೆ. ಸಿಎಂ ಹೇಳಿದ್ದರೂ ಸಹ ಪ್ರೋತ್ಸಾಹ ಧನ ಕಡಿತಗೊಳಿಸಲಾಗಿದೆ” ಎಂದು ದೂರಿದರು.