ದುರುಳರ ಕೃತ್ಯಕ್ಕೆ ಬಲಿಯಾಗುವುದು ಎಂದಿಗೂ ಅಮಾಯಕರು. ಇಲ್ಲೂ ನಡೆಯುತ್ತಿರುವುದು ಅದೇ. ಉಗ್ರರು ಮಾಡಿದ ಹೇಯ ಕೃತ್ಯಕ್ಕೆ ತಲ್ಲಣಿಸಿರುವುದು ಸಾಮಾನ್ಯರ ಬದುಕು.
ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ಒಂದೆಡೆ ಪಾಕಿಸ್ತಾನದಲ್ಲಿರುವ ಕೆಲವು ಭಾರತೀಯರು ತವರಿಗೆ ವಾಪಸ್ ಬರುತ್ತಿದ್ದರೆ, ಇನ್ನೊಂದೆಡೆ ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳು ಹಿಂದಿರುಗಿ ಹೋಗಬೇಕಾಗಿದೆ. ಉಭಯ ದೇಶಗಳ ರಾಜತಾಂತ್ರಿಕ ಬಿಕ್ಕಟ್ಟು ಅಲುಗಾಡಿಸುತ್ತಿರುವುದು ಸಾಮಾನ್ಯ ಜನರ ಜೀವನವನ್ನು. ಭಾರತದಲ್ಲಿರುವ ತಮ್ಮ ಪ್ರೀತಿಪಾತ್ರರನ್ನು ತೊರೆದು ಹೋಗಲಾಗದೆ, ಪಾಕ್‌ಗೆ ವಾಪಸ್ ಹೋಗುವುದು ಬಿಟ್ಟು ಬೇರೆ ಯಾವ ದಾರಿಯೂ ಇಲ್ಲದೆ, ತನ್ನ ಪ್ರೇಮಿ, ತಾಯಿ, ಅತ್ತೆ, ಪತಿ- ಹೀಗೆ ತನ್ನವರಿಂದ ದೂರವಾಗಬೇಕಾದ ಅನಿವಾರ್ಯ ಸಾಮಾನ್ಯ ಜನರಿಗೆ ಬಂದೊದಗಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಕರ್ನಾಟಕದವರೂ ಸೇರಿ ಬಹುತೇಕರು ಪ್ರವಾಸಿಗರು. ಈ ದಾಳಿ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊಣೆ ಹೊತ್ತಿಕೊಳ್ಳುತ್ತಿದ್ದಂತೆ ಭಾರತ-ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಬೆಟ್ಟವಾಗತೊಡಗಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಭಾರತ ದುಃಖದಲ್ಲಿದ್ದರೂ ಚುನಾವಣಾ ರಾಜ್ಯ ಬಿಹಾರಕ್ಕೆ ಹಾರಿದ ಪ್ರಧಾನಿ ಮೋದಿ
ಸಿಂಧೂ ಜಲ ಒಪ್ಪಂದ ಅಮಾನತು, ಪಾಕಿಸ್ತಾನ ಪ್ರಜೆಗಳ ವೀಸಾ ರದ್ದು ಹೀಗೆ ಕೇಂದ್ರ ಸರ್ಕಾರಗಳ ವಿವಿಧ ಘೋಷಣೆಗಳ ಬೆನ್ನಲ್ಲೇ ಪಾಕಿಸ್ತಾನ, ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಿತು. ಈ ದಾಳಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯಲಿ ಎಂಬುದು ಪಾಕ್‌ನ ಆಗ್ರಹ. ಪಾಕ್‌ನ ಉಗ್ರ ದಾಳಿಯನ್ನು ನಾವು ಇನ್ನು ಸಹಿಸಲಾಗದು ಎಂಬುದು ಭಾರತ ಸರ್ಕಾರದ ವಾದ. ಇವೆಲ್ಲವುದರ ನಡುವೆ ಮಾನವೀಯತೆ, ಸಾಮಾನ್ಯರ ಸಂಕಟ ಕಂಡೂ ಕಾಣಿಸದಂತಿದೆ. ಈ ನೋವಿನ ಕಥೆಗಳು ಮನುಷ್ಯತ್ವವನ್ನು ತಟ್ಟಿದರೂ ಕಡೆಗಣಿಸಲಾಗುತ್ತಿದೆ.
1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ರಕ್ತಪಾತ, ಅತ್ಯಾಚಾರ, ಕೊಲೆ, ದರೋಡೆಗಳು ನಡೆದಿರುವ ಜೊತೆಗೆ ಅದೆಷ್ಟೋ ಪ್ರೇಮಿಗಳು ದೂರವಾಗಿದ್ದಾರೆ. ಅದೆಷ್ಟೋ ಕುಟುಂಬಗಳು ಎರಡು ದೇಶಗಳ ನಡುವೆ ಹಂಚಿಹೋಗಿವೆ. ಉಭಯ ದೇಶಗಳ ನಡುವೆ ಆಡಳಿತಾತ್ಮಕ ಸಮಸ್ಯೆಗಳಿದ್ದರೂ ಭಾರತದಿಂದ ಪಾಕಿಸ್ತಾನಕ್ಕೆ ತೆರಳುತ್ತಿರುವ ಸಾಮಾನ್ಯರನ್ನು ನಾವು ಕೊಂಚ ಮನುಷ್ಯತ್ವದ ಕಣ್ಣಿನಿಂದ ನೋಡುವುದು ಅನಿವಾರ್ಯ ಮತ್ತು ಅಗತ್ಯ.
ತಾಯಿ – ಮಕ್ಕಳು ದೂರವಾದ ಕತೆ
“ನನ್ನ ತಾಯಿಯನ್ನು ಬಿಟ್ಟು ನಾನು ಪಾಕಿಸ್ತಾನಕ್ಕೆ ಮರಳಬೇಕಿದೆ. ನನ್ನ ಜೊತೆ ಬಾ ಎಂದರೆ ಇದು ಸರ್ಕಾರದ ಆದೇಶ ಮಗಳೇ ಎನ್ನುತ್ತಾರೆ” ಎಂದು ಕಣ್ತುಂಬಿಕೊಂಡು ಹೇಳುತ್ತಾಳೆ 11 ವರ್ಷದ ಬಾಲಕಿ ಝೈನಬ್. ಎಂಟು ವರ್ಷದ ಝೆನಿಶ್ ಮತ್ತು ಝೈನಬ್ ಪಾಕಿಸ್ತಾನದ ಪ್ರಜೆಗಳಾಗಿದ್ದು, ಅವರ ತಾಯಿ ಭಾರತದ ಪ್ರಜೆಯಾಗಿದ್ದಾರೆ. ಇಬ್ಬರು ಮಕ್ಕಳು ತನ್ನ ತಾಯಿಯೊಂದಿಗೆ ಅಜ್ಜಿಯನ್ನು ಭೇಟಿಯಾಗಲು ಕಳೆದ ತಿಂಗಳು ದೆಹಲಿಗೆ ಆಗಮಿಸಿದ್ದಾರೆ. ಆದರೆ ಇದೀಗ ತಾಯಿಯನ್ನು ದೆಹಲಿಯಲ್ಲೇ ಬಿಟ್ಟು ಪಾಕಿಸ್ತಾನಕ್ಕೆ ಹಿಂದಿರುಗಬೇಕಾದ ಸ್ಥಿತಿ ಎದುರಾಗಿದೆ.
ಇದನ್ನು ಓದಿದ್ದೀರಾ? ಸಿಂಧು ಜಲ ಒಪ್ಪಂದ ಸ್ಥಗಿತವು ಭಾರತಕ್ಕೇ ಹಾನಿಕಾರಕ; ಯಾಕೆ ಗೊತ್ತೇ?
“ನಾನು ಇಲ್ಲಿ ದೆಹಲಿಯಲ್ಲಿ ಅಜ್ಜಿಯನ್ನು ನೋಡಲೆಂದು ಬಂದೆ. ಆದರೆ ಈಗ ತಾಯಿಯನ್ನು ಇಲ್ಲೇ ಬಿಟ್ಟು ಹೋಗಬೇಕಿದೆ. ನಮ್ಮ ತಾಯಿಯ ಬಳಿ ಭಾರತೀಯ ಪಾಸ್‌ಪೋರ್ಟ್ ಇದೆ. ನಾವು ಪಾಕಿಸ್ತಾನಿಗಳು. ನಮ್ಮ ಜೊತೆಯೇ ಬನ್ನಿ ಎಂದು ಹಲವು ಬಾರಿ ಅಮ್ಮನ ಬಳಿ ಹೇಳಿದೆ. ಆದರೆ ಸರ್ಕಾರ ಆದೇಶ ನೀಡಿದೆ ಎನ್ನುತ್ತಾರೆ” ಎಂದು ಹೇಳುವಷ್ಟರಲ್ಲಿ ತಾಯಿಯಿಂದ ದೂರವಾದ ಆ 11 ವರ್ಷದ ಬಾಲಕಿಯ ಕಣ್ಣು ಒದ್ದೆಯಾಗಿತ್ತು. ಇನ್ನೊಂದೆಡೆ ಆಕೆಯ ಸಹೋದರಿ ಝೆನಿಶ್, “ನನಗೆ ನನ್ನ ತಾಯಿಯನ್ನು ಬಿಟ್ಟಿರಲು ಆಗದು” ಎಂದು ರೋದಿಸಿದ್ದಾಳೆ.
“ನನ್ನ ತಾಯಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಡಿ” ಎಂದು ಅಲ್ಯಾನ್ ಎಂಬ ಬಾಲಕ ಮನವಿ ಮಾಡಿದ್ದಾನೆ. ತನ್ನ ಪತ್ನಿಯನ್ನು ಭಾರತದಲ್ಲೇ ಬಿಟ್ಟು ಹೋಗಬೇಕಾಗಿರುವ ಬಗ್ಗೆ ‘ಇಂಡಿಯಾ ಟುಡೇ’ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬಾಲಕ ಅಲ್ಯಾನ್ ತಂದೆ ಮೊಹಮ್ಮದ್ ಇರ್ಫಾನ್, “ನಾವು ಕರಾಚಿಯಿಂದ ಭಾರತಕ್ಕೆ ಕಳೆದ ತಿಂಗಳು ಬಂದೆವು. ಈಗ ನನ್ನ ಪತ್ನಿ ನಬೀಲಾ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಕಾರಣ ಇಲ್ಲೇ ಬಿಟ್ಟುಹೋಗಬೇಕಾಗಿದೆ. ಈ ಭಯೋತ್ಪಾದಕರು ನಮ್ಮ ಕುಟುಂಬವನ್ನೇ ನಾಶ ಮಾಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು” ಎಂದು ಆಗ್ರಹಿಸಿದ್ದಾರೆ.
ನಾನು ಭಾರತದ ಸೊಸೆ
“ನಾನು ಈ ಹಿಂದೆ ಪಾಕಿಸ್ತಾನದ ಮಗಳಾಗಿದ್ದೆ, ಆದರೆ ಈಗ ನಾನು ಭಾರತದ ಸೊಸೆ” ಎಂದು ಪಾಕಿಸ್ತಾನದ ವೀಸಾಗಳನ್ನು ಭಾರತ ರದ್ದು ಮಾಡಿದ ಬಳಿಕ ಸೀಮಾ ಹೈದರ್ ಹೇಳಿಕೊಂಡಿದ್ದಾರೆ. ತನ್ನ ಪ್ರಿಯಕರ ಸಚಿನ್ ಮೀನಾರನ್ನು ವಿವಾಹವಾಗಲೆಂದು ಪಾಕಿಸ್ತಾನ ತೊರೆದು ಭಾರತಕ್ಕೆ ಬಂದ ಸೀಮಾ ಬಗ್ಗೆ 2023ರಲ್ಲಿ ಭಾರೀ ಸುದ್ದಿಯಾಗಿತ್ತು. ಈಗಾಗಲೇ ವಿವಾಹವಾಗಿದ್ದ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳ ಮಾರ್ಗವಾಗಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದರು. ಆದರೆ ಪ್ರೀತಿಗಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬಂದ ಮಹಿಳೆ ಎಂಬ ಸುದ್ದಿಗಳು ಹೆಚ್ಚು ಜನರನ್ನು ಆಕರ್ಷಿಸಿತ್ತು. ಇದೀಗ “ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಅವರೇ ನಾನು ಭಾರತದಲ್ಲೇ ಉಳಿಯಲು ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿದ್ದಾರೆ.
⏳ 48-hour deadline. Pakistanis leaving India… 🚕 pic.twitter.com/uRF42GpCtS
— Times Always (@timesalways1) April 25, 2025
ವೀಲ್‌ಚೇರ್‌ನಲ್ಲಿರುವ 70 ವರ್ಷದ ಮಹಿಳೆ “ನನ್ನ ಪತಿ ನಿಧನರಾದ ಬಳಿಕ ನಾನು ತನ್ನ ಮಗಳೊಂದಿಗೆ ಭಾರತದಲ್ಲಿ ವಾಸವಿದ್ದೆ. ಈಗ ನಾನು ಎಲ್ಲಿಗೆ ಹೋಗುವುದು? ಪಾಕಿಸ್ತಾನದಲ್ಲಿ ನನಗೆ ಊಟ ಮಾಡಲೂ ಹಣವಿಲ್ಲ” ಎಂದು ಹೇಳಿಕೊಂಡಿದ್ದಾರೆ. ಈ ಮಹಿಳೆಯ ಅಳಿಯ, “ನಾವು ಅವರನ್ನು ನಮ್ಮ ಕುಟುಂಬವೆಂದು ಪರಿಗಣಿಸಿದ್ದೇವೆ. ಅವರು ಕಾನೂನುಬದ್ಧವಾಗಿ ವೀಸಾ ಪಡೆದಿದ್ದಾರೆ. ಈಗ ರಾತ್ರೋರಾತ್ರಿ ಅವರನ್ನು ಹೊರದಬ್ಬಲಾಗುತ್ತಿದೆ. ಇದು ಮನುಷ್ಯರು ಮಾಡುವ ಕೆಲಸವೇ” ಎಂದು ಪ್ರಶ್ನಿಸಿದ್ದಾರೆ. ಉಗ್ರರು ಮಾಡಿದ ತಪ್ಪಿಗೆ ಅಮಾಯಕರನ್ನು ಕೆಂಗಣ್ಣಿನಿಂದ ನೋಡುವ ನಾವೂ ಕೂಡ ನಮ್ಮಲ್ಲಿ ಕೇಳಬೇಕಾದ ಪ್ರಶ್ನೆ “ಇದು ಮಾನವೀಯತೆಯೇ” ಎಂಬುದು.
ಕೆಲವರು ಇಂದಿಗೂ ಪಾಕಿಸ್ತಾನದ ಪಾಸ್‌ಪೋರ್ಟ್ ಹೊಂದಿದ್ದರೂ ಅಲ್ಲಿ ತನ್ನವರೆಂದು ಯಾರನ್ನೂ ಹೊಂದಿಲ್ಲ. ಇದೀಗ ದಿಢೀರ್ ಆಗಿ ದೇಶ ಬಿಟ್ಟು ತೊರೆಯಬೇಕೆಂದರೆ ನಾವು ಎಲ್ಲಿ ನೆಲೆಸುವುದು? ನಮಗೆ ಅಲ್ಲಿ ಯಾರಿದ್ದಾರೆ? ಎಂಬುದು ಇನ್ನೂ ಕೆಲವರ ಪ್ರಶ್ನೆ. ಇವೆಲ್ಲವುದರ ನಡುವೆ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿರುವುದು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದವರು. ಚಿಕಿತ್ಸೆಯನ್ನು ಪೂರ್ಣಗೊಳಿಸದೆಯೇ ಭಾರತ ಬಿಟ್ಟು ಹೋಗಬೇಕಾದ ಸಂದಿಗ್ಧ ಸ್ಥಿತಿ ತಲುಪಿದ್ದಾರೆ.
ಇದನ್ನು ಓದಿದ್ದೀರಾ? ಭಾರತದ ಜತೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದ ಪಾಕ್‌ನಲ್ಲಿ ಔಷಧ ಪೂರೈಕೆಗೆ ವ್ಯತ್ಯಯ
“ಭಯೋತ್ಪಾದಕರಿಗೆ ಯಾವುದೇ ಧರ್ಮ ಅಥವಾ ರಾಷ್ಟ್ರೀಯತೆಯಿಲ್ಲ. ಉಗ್ರರು ದಾಳಿ ಮಾಡಿದ ಕಾರಣಕ್ಕೆ ಅಮಾಯಕರನ್ನು ಶಿಕ್ಷಿಸುವುದು ಇನ್ನಷ್ಟು ಉದ್ವಿಗ್ನತೆಗೆ ಕಾರಣವಾಗುತ್ತದೆ. ಭಾರತವನ್ನು ನ್ಯಾಯ ಮತ್ತು ಘನತೆಯ ನಾಡು ಎಂದೇ ಪರಿಗಣಿಸಲಾಗುತ್ತದೆ. ಹೀಗಿರುವಾಗ ಸಾಮಾನ್ಯರ ಮೇಲೆ ಈ ದಬ್ಬಾಳಿಕೆ ಯಾಕೆ” ಎಂದು ಮಾನವ ಹಕ್ಕುಗಳ ಹೋರಾಟಗಾರ, ವಕೀಲ ಮೆಹ್ಮೂದ್ ಪ್ರಾಚಾ ಪ್ರಶ್ನಿಸಿದ್ದಾರೆ.
ಭಯೋತ್ಪಾದಕ ದಾಳಿಯ ಬಳಿಕ ಉಂಟಾದ ಉದ್ವಿಗ್ನತೆಯಿಂದಾಗಿ ಮಕ್ಕಳು ತಾಯಿಯಿಂದ, ಪತಿ ಪತ್ನಿಯಿಂದ ದೂರವಾಗಿರುವ ಇಂತಹ ಅದೆಷ್ಟೋ ನಿದರ್ಶನಗಳಿವೆ. ಉಭಯ ಗಡಿಗಳ ದಾಟಿ ನೋವು ಸಾಗಿದೆ. ಉಗ್ರರ ಕೃತ್ಯವನ್ನು ಖಂಡಿಸುತ್ತಾ, ಸರ್ಕಾರದ ನಿರ್ಧಾರವನ್ನು ಇತ್ತ ದೂರಲೂ ಆಗದ, ದೂಷಿಸಲೂ ಆಗದ ಸ್ಥಿತಿ ಹಲವರದ್ದು. ಆದರೆ ದುರುಳರ ಕೃತ್ಯಕ್ಕೆ ಬಲಿಯಾಗುವುದು ಎಂದಿಗೂ ಅಮಾಯಕರು. ಇಲ್ಲೂ ಅದರದೇ ಮೇಲಾಟ. ಉಗ್ರರು ಮಾಡಿದ ಹೇಯ ಕೃತ್ಯಕ್ಕೆ ತಲ್ಲಣಕ್ಕೊಳಗಾಗಿರುವುದು ಸಾಮಾನ್ಯರ ಬದುಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.