16ನೇ ವಿಧಾನಸಭೆಯ ಮೊದಲ ದಿನದ ಅಧಿವೇಶನದಲ್ಲಿ ಸಂವಿಧಾನ ಪೀಠಿಕೆ ಓದು ವಿಚಾರವಾಗಿ ಸಭಾಧ್ಯಕ್ಷ ಯು ಟಿ ಖಾದರ್ ನಡೆಯನ್ನು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರವಾಗಿ ಖಂಡಿಸಿದರು.
ಅಧಿವೇಶನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಸಂವಿಧಾನದ ಮೂಲ ಪೀಠಿಕೆ ಪುಟವನ್ನು ಓದಿ ಹೇಳುವುದರ ಜೊತೆಗೆ ಎಲ್ಲರೂ ಅದನ್ನು ಮರು ಓದಿದರು. ಆದರೆ, ಆರಂಭದಲ್ಲೇ ಸಭಾಧ್ಯಕ್ಷರು ಓದಿದ ಮತ್ತು ಸದಸ್ಯರ ಕೈಯಲ್ಲಿ ನೀಡಿದ್ದ ಕಾಪಿ ಬೇರೆ ಬೇರೆಯಾಗಿತ್ತು. ಈ ವಿಚಾರಕ್ಕೆ ಯತ್ನಾಳ್ ಆಕ್ಷೇಪ ಎತ್ತಿದರು.
“ಸಭಾಧ್ಯಕ್ಷರೇ, ಓದಿದ ಸಂವಿಧಾನದ ಮೂಲ ಪೀಠಿಕೆಗೂ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಪೀಠಿಕೆಗೂ ವ್ಯತ್ಯಾಸವಿದೆ. ಇದು ಸರಿಯಲ್ಲ. ಸಂವಿಧಾದನ ಆಶಯ ಬದಲಾಗಬಾರದು. ಈ ನಡೆಯನ್ನು ನಾನು ಕಟುವಾಗಿ ಖಂಡಿಸುವೆ. ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾದುದು. ಮೂಲ ಸಂವಿಧಾನದ ಪೀಠಿಕೆಯಲ್ಲಿ ಒಂದಕ್ಷರವೂ ಬದಲಾಗದಂತೆ ಬೋಧಿಸಬೇಕು” ಎಂದರು.
ಯತ್ನಾಳ್ ಮಾತಿಗೆ ಆಡಳಿತ ಪಕ್ಷದ ಸದಸ್ಯರೊಬ್ಬರು ಎದ್ದು ನಿಂತು, “ಬಿಜೆಪಿ ಸಂವಿಧಾನವನ್ನೇ ಬದಲಿಸಲು ಹೊರಟಿದ್ದನ್ನು ನಾವು ಮರೆತಿಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ” ಎಂದು ವ್ಯಂಗ್ಯವಾಡಿದರು.
ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, “ಬಿಜೆಪಿ ಸದಸ್ಯರ ಆಕ್ಷೇಪವನ್ನು ತೆಗೆದುಹಾಕದೆ ಅವರಿಗೆ ಸಮಾಧಾನ ಮಾಡುವಂತೆ ಮುಂದಿನ ದಿನಗಳಲ್ಲಿ ಈ ತಪ್ಪನ್ನು ಸರಿಪಡಿಸಿಕೊಳ್ಳಲಾಗುವುದು” ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡು ಅದನ್ನು ಅಲ್ಲಿಗೇ ಬಿಡಲು ಹಾಗೂ ಜನಪರ ಕೆಲಸ ಮಾಡುವ ವಿಷಯದ ಬಗ್ಗೆ ಗಮನ ಕೊಡಲು ಸದಸ್ಯರಲ್ಲಿ ಮನವಿ ಮಾಡಿಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, “ಸಭಾಧ್ಯಕ್ಷರು ಓದಿದ ಸಂವಿಧಾನ ಪೀಠಿಕೆ ಪ್ರತಿಗೂ ಮತ್ತು ನಮಗೆ ಕೊಟ್ಟ ಪ್ರತಿಗೂ ವ್ಯತ್ಯಾಸವಿದೆ. ಆದರೆ, ಆಶಯ ಒಂದೇ ಎಂದು” ಸಮಜಾಯಿಷಿ ನೀಡಿದರು.