ಕಳೆದ ಮೂರು ದಿನಗಳ ಹಿಂದೆ ಮಳೆ ಬಿರುಗಾಳಿಗೆ ಸಿಲುಕಿದ ಬಾಗೂರು, ಬೆಣಚಿಗೆರೆ, ನಿಟ್ಟೂರು, ಮತ್ತಿಘಟ್ಟ, ಅರಿವೇಸಂದ್ರ ಗ್ರಾಮಗಳಲ್ಲಿ ಮನೆಗಳ ಮೇಲ್ಛಾವಣಿ ಹಾರಿವೆ. ತೆಂಗು, ಅಡಿಕೆ, ಬಾಳೆ, ಮಾವಿನ ಮರಗಳು ಧರೆಗುರುಳಿವೆ. ಈ ಅತಿವೃಷ್ಟಿಗೆ ಸಿಲುಕಿದ ಈ ಭಾಗದ ರೈತರಿಗೆ ವಿದ್ಯುತ್ ಸಮಸ್ಯೆ ಮೂರು ದಿನ ಕಳೆದರೂ ಸರಿ ಹೋಗಿಲ್ಲ. ಬಿರುಗಾಳಿಗೆ ಬಿದ್ದ ಮರಗಳ ಕೊಂಬೆಯಿಂದ ವಿದ್ಯುತ್ ಕಂಬ ಬಿದ್ದು ತಂತಿಗಳು ತುಂಡಾಗಿವೆ. ಮೂರು ದಿನವಾದರೂ ಮರಗಳ ತುಂಡು ತೆರವುಗೊಳಿಸಿ ಕಂಬ ತಂತಿ ಸರಿ ಪಡಿಸಲು ಬೆಸ್ಕಾಂ ಮುಂದಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರುತ್ತಿದ್ದಾರೆ.
ನಿಟ್ಟೂರು ಹೋಬಳಿಯಲ್ಲಿ ಮಳೆಯ ಜೊತೆ ದಿಢೀರ್ ಎದ್ದ ಬಿರುಗಾಳಿ ಸುಳಿಗೆ ಸಿಲುಕಿದ ಸಾವಿರಾರು ಮರ ಗಿಡಗಳು ನೆಲಕ್ಕುರುಳಿವೆ. ಜೊತೆಗೆ ಮರಗಳ ಕೊಂಬೆ ವಿದ್ಯುತ್ ಕಂಬ ತಂತಿಗಳನ್ನು ಧರೆಗುರುಳಿವೆ. ಮನೆಯ ಮೇಲ್ಛಾವಣಿ ಸಂತ್ರಸ್ತರೇ ಸರಿ ಪಡಿಸಿಕೊಂಡರು. ಆದರೆ ಶುಕ್ರವಾರ ಸಂಜೆಯಿಂದ ಕರೆಂಟ್ ಇಲ್ಲದೆ ಹೈರಾಣಾಗಿದ್ದಾರೆ. ಕಂಬ ತಂತಿ ಸ್ಪರ್ಶಿಸಲು ಎದುರುವ ಜನರು ಅದರ ಬಳಿ ಸುಳಿಯುವುದಿಲ್ಲ. ರೈತರ ಬದುಕಿನಲ್ಲಿ ಕರೆಂಟ್ ಅನಿವಾರ್ಯ ಎಲ್ಲರಿಗೂ ತಿಳಿದಿದೆ. ಆದರೆ ಈ ಅವಶ್ಯಕತೆ ಬಗ್ಗೆ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರಿರುವುದು ಬೇಸರ ತಂದಿದೆ ಎಂದು ಬಾಗೂರು, ಬೆಣಚಿಗೆರೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ನಿಟ್ಟೂರು ಉಪ ವಿಭಾಗಕ್ಕೆ ಸಂಬಂಧಪಟ್ಟ ಬಾಗೂರು ಮತ್ತು ಬೆಣಚಿಗೆರೆ ಫೀಡರ್ ನಲ್ಲಿ ಮೂರು ದಿನದಿಂದ ವಿದ್ಯುತ್ ಸಮಸ್ಯೆ ಹೇಳತೀರದಾಗಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಶಾಲೆ, ಅಂಗನವಾಡಿ ಕೇಂದ್ರದಲ್ಲಿ ನೀರಿನ ಅಭಾವ ಕಾಣುತ್ತಿದೆ. ಮರದ ಕೊಂಬೆ ತೆರವುಗೊಳಿಸಿ ಕಂಬ ಸರಿಪಡಿಸುವ ಕೆಲಸ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಾರೆ. ಗ್ರಾಮೀಣ ಭಾಗದ ಬಗ್ಗೆ ಬೆಸ್ಕಾಂ ಈ ಮಟ್ಟದ ಬೇಜವಾಬ್ದಾರಿ ತೋರಬಾರದು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಕಿಡಿಕಾರಿದರು.

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮಳೆ ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬ ತಂತಿ ರಿಪೇರಿ ಕೆಲಸ ಮಾಡಲು ಬೆಸ್ಕಾಂ ಮೀನಾ ಮೇಷ ಎಣಿಸಿದೆ. ಸಿಬ್ಬಂದಿ ಕೊರತೆ ಬಗ್ಗೆ ಹೇಳಿಕೊಂಡು ದಿನ ಕಳೆಯುತ್ತಿದೆ. ಆದರೆ ಕರೆಂಟ್ ಇಲ್ಲದೆ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡಿದ್ದಾರೆ. ತೋಟಗಳು ಬಿಸಿಲಿಗೆ ಒಣಗಿ ನಿಂತಿವೆ. ಈ ಜೊತೆ ಜಾನುವಾರುಗಳು ನೀರಿನ ವ್ಯವಸ್ಥೆ ಮಾಡಲು ಆಗದೇ ರೈತರು ಬೆಸ್ಕಾಂ ಇಲಾಖೆಯನ್ನು ಶಪಿಸಿದ್ದಾರೆ. ಬೆಣಚಿಗೆರೆ ಗ್ರಾಮದಲ್ಲಿ ಕಡಬ ಮೂಲಕ ಬಂದ ನಿರಂತರ ಜ್ಯೋತಿ ಕೂಡಾ ದಿನದಲ್ಲಿ ಎರಡು ಗಂಟೆ ಸರಿಯಾಗಿ ಕರೆಂಟ್ ಸರಬರಾಜು ಆಗುತ್ತಿಲ್ಲ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗೂ ಕರೆಂಟ್ ದಿನವಿಡೀ ಮಾಯ ಆಗುತ್ತದೆ ಎಂದು ಬೆಣಚಿಗೆರೆ ದಯಾನಂದ್ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ಬೆಸ್ಕಾಂ ಇಲಾಖೆ ಗ್ರಾಮೀಣ ಭಾಗದಲ್ಲಿ ರೈತರ ಕಷ್ಟ ಆಲಿಸಬೇಕಿದೆ. ಮೂರು ದಿನದಿಂದ ಕರೆಂಟ್ ಇಲ್ಲದೆ ನಾಲ್ಕೈದು ಗ್ರಾಮಗಳು ರಾತ್ರಿ ವೇಳೆ ಕಗ್ಗತ್ತಲಲ್ಲಿ ಮುಳುಗಿದೆ. ಚಿರತೆ ಹಾವಳಿ ಕೂಡಾ ತುಂಬಾ ಭಯ ತಂದಿದೆ. ರಾತ್ರಿ ಕತ್ತಲಲ್ಲಿ ಊರಿನೊಳಗೆ ಕಾಡು ಪ್ರಾಣಿ ಬರುವ ಸಾಧ್ಯತೆಗೆ ಹೆದರಿ ಮನೆಯಿಂದ ಯಾರೊಬ್ಬರೂ ಬರುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಮೊದಲು ಕರೆಂಟ್ ವ್ಯವಸ್ಥೆ ಮಾಡಬೇಕು. ಕಂಬ ತಂತಿ ಸರಿಪಡಿಸುವ ಮೊದಲೇ ಕರೆಂಟ್ ಪರ್ಯಾಯ ವ್ಯವಸ್ಥೆಗೆ ಅಧಿಕಾರಿಗಳು ಚಿಂತಿಸಬೇಕು ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಟ್ಟೂರು ಬೆಸ್ಕಾಂ ಎಇಇ ರಾಜೇಶ್, ಮಳೆ ಗಾಳಿಗೆ ನಿಟ್ಟೂರು ಶಾಖೆಯಲ್ಲಿ ಒಟ್ಟು 57 ಕಂಬ ನೆಲಕ್ಕುರುಳಿದೆ. ದುರಸ್ಥಿ ಕೆಲಸ ಆರಂಭಿಸಿ ಈಗಾಗಲೇ 40 ಕಂಬ ಸರಿಪಡಿಸಿದ್ದೇವೆ. ಉಳಿದ 17 ಸೋಮವಾರ ಸಂಜೆಗೆ ಸಿದ್ಧವಾಗಲಿದೆ. ಇರುವ ಸಿಬ್ಬಂದಿ ಬಳಸಿಕೊಂಡು ಒಂದೊಂದೇ ಗ್ರಾಮ ಸರಿ ಪಡಿಸಿಕೊಂಡು ಬಂದಿದ್ದೇವೆ. ಇವತ್ತಿಗೆ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದರು.