ಆಟೊ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶೆಳ್ಳಿಗಿ ಕ್ರಾಸ್ ಬಳಿ ಸೋಮವಾರ ಸಂಜೆ ನಡೆದಿದೆ.
ಸುರಪುರ ತಾಲೂಕಿನ ದೇವಾಪುರ ಗ್ರಾಮದ ಬುಡ್ಡಪ್ಪ ತಳವಾರ್(32), ದೇವಪ್ಪ ಚಿಂಚೋಡಿ(46) ಹಾಗೂ ರಾಚಯ್ಯ ಸ್ವಾಮಿ (36) ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬುಡ್ಡಪ್ಪ ಹಾಗೂ ದೇವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ರಾಚಯ್ಯಾ ಸ್ವಾಮಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಆಟೊ ನಜ್ಜುಗುಜ್ಜಾಗಿದ್ದು, ದುರ್ಘಟನೆಯಲ್ಲಿ ಕ್ರೂಸರ್ ಹಾಗೂ ಆಟೋದಲ್ಲಿದ್ದ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸುರಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.