ನವೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂಪಾಯಿಗೆ ಆರ್‌ಆರ್ ಖರೀದಿಸಿತ್ತು
ಬಿಹಾರದ 14 ವರ್ಷದ ಬಾಲಕ ವಿಶ್ವದ ಗಮನ ಸೆಳೆದಿದ್ದಾನೆ. ಪ್ರಪಂಚದ ಟಿ20 ಲೀಗ್‌ಗಳಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿರುವ ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್)ನಲ್ಲಿ ಅತಿ ವೇಗದ ಶತಕ ಸಿಡಿಸಿದ ಎರಡನೇ ಬ್ಯಾಟರ್ ಆಗಿಯೂ ಮತ್ತು ಭಾರತದ ಮೊದಲ ಬ್ಯಾಟರ್ ಆಗಿಯೂ ಹೊಮ್ಮಿರುವ ವೈಭವ್ ಸೂರ್ಯವಂಶಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.
ರಾಜಸ್ಥಾನ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಅವರು ಗಾಯಗೊಂಡ ಬಳಿಕ ಅವಕಾಶ ಪಡೆದಾಗ ಸೂರ್ಯವಂಶಿಗೆ 14 ವರ್ಷ 23 ದಿನಗಳಾಗಿದ್ದವು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿದ ಮೊದಲ ಮ್ಯಾಚ್‌ನಲ್ಲಿ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರಿಗೆ ಮೊದಲ ಬಾಲ್‌ನಲ್ಲೇ ಸಿಕ್ಸ್ ಹೊಡೆಯುವ ಮೂಲಕ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದ್ದ ಸೂರ್ಯವಂಶಿ, 20 ಎಸೆತಗಳಲ್ಲಿ 34 ರನ್ ಗಳಿಸಿ (3 ಸಿಕ್ಸರ್, 2 ಫೋರ್‌ಗಳು) ಸ್ಟಂಪ್ ಔಟ್ ಆಗಿ ಕಣ್ಣೀರು ಹಾಕುತ್ತಾ ಹೊರನಡೆದಿದ್ದರು. ಆದರೆ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಸೋಮವಾರದ ಪಂದ್ಯದಲ್ಲಿ ಸವಾಲಿನ ಮೊತ್ತ ಬೆನ್ನು ಹತ್ತಿದ ರಾಜಸ್ಥಾನ ರಾಯಲ್ಸ್ ಲೀಲಾಜಾಲವಾಗಿ ಗೆಲುವು ಪಡೆದುಕೊಂಡಿತು. ವೈಭವ್ ಅವರ ಆರ್ಭಟ ಇದಕ್ಕೆ ಕಾರಣ. 209 ರನ್‌ಗಳ ಗೆಲುವಿನ ಗುರಿ ತಲುಪುವಲ್ಲಿ ಯಶಸ್ವಿಯಾದ ರಾಜಸ್ಥಾನ ರಾಯಲ್ಸ್, 166 ರನ್‌ಗಳ ಮೊದಲ ವಿಕೆಟ್ ಜೊತೆಯಾಟ ಆಡಿದ್ದು ವಿಶೇಷ. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕಣಕ್ಕಿಳಿದಿದ್ದ ವೈಭವ್ ಅವರೇ 101 ರನ್ ಕಲೆ ಹಾಕಿದ್ದು ಆಕರ್ಷಕ.
35 ಎಸೆತಗಳಲ್ಲಿ ಶತಕ ಪೂರೈಸಿದ ವೈಭವ್ ಅವರ ಬ್ಯಾಟ್‌ನಿಂದ ಬರೋಬ್ಬರಿ 11 ಸಿಕ್ಸ್, 7 ಫೋರ್‌ಗಳು ಸಿಡಿದವು. ಯಾವುದೇ ಬೌಲರ್ ಎನ್ನದೆ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಿದರು. ಘಟಾನುಘಟಿ ಬೌಲರ್‌ಗಳ ಬೆಂಡೆತ್ತಿದರು. ಮೊದಲ ಪಂದ್ಯವಾಡುತ್ತಿದ್ದ ಕರೀಮ್ ಜನ್ನತ್ ಅವರು ಎಸೆದ ಓವರ್‌ನಲ್ಲಿ 30 ರನ್ ಗಳಿಸಿಬಿಟ್ಟರು. ಅನುಭವಿ ಇಶಾಂತ್ ಶರ್ಮಾ ಅವರಿಗೆ ಒಂದೇ ಓವರ್‌ನಲ್ಲಿ 28 ರನ್ ಹೊಡೆದರು. ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮರಂತಹ ಘಟಾನುಘಟಿ ಬೌಲರ್‌ಗಳು ಬೆಚ್ಚಿ ಬಿದ್ದರು. ರಾಶೀದ್ ಖಾನ್, ಪ್ರಸಿದ್ಧ ಕೃಷ್ಣ ಅವರಿಗೂ ವೈಭವ್ ಹೆದರಿಲ್ಲ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿರುವ ಕರ್ನಾಟಕದ ಪ್ರಸಿದ್ಧ ಕೃಷ್ಣ ಅವರು ವೈಭವ್ ಅವರ ವಿಕೆಟ್ ಪಡೆದರೂ ಕೂಡ ಅಷ್ಟರಲ್ಲಿ ವೇಗದ ಶತಕವನ್ನು ಸಿಡಿಸಿ ಆಗಿತ್ತು. ಆರ್‌ಆರ್ ಗೆಲುವು ಬಹುತೇಕ ನಿರ್ಧಾರವಾಗಿತ್ತು. 15.5 ಓವರ್‌ಗಳಲ್ಲೇ ಮ್ಯಾಚ್ ಮುಗಿದಿತ್ತು.
ಇದನ್ನೂ ಓದಿರಿ: ಐಪಿಎಲ್ 2025 | ಇದು ನನ್ನ ಮೈದಾನ: ಗೆದ್ದ ನಂತರ ಕೆ ಎಲ್ ರಾಹುಲ್‌ಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!
ಆಡಿದ ಕೆಲವೇ ಕೆಲವು ಮ್ಯಾಚ್‌ಗಳಲ್ಲಿಯೇ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ ವೈಭವ್ ಸೂರ್ಯವಂಶಿ. ಐಪಿಎಲ್‌ನಲ್ಲಿ ಅತಿವೇಗದ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಈವರೆಗೆ ಯೂಸುಫ್ ಪಠಾಣ್ ಅವರಿಗಿತ್ತು. 2010ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಆರ್ ಪರ ಯೂಸುಫ್ ಪಠಾಣ್ ಅವರು 37 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅದನ್ನು ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. 35 ಎಸೆತಗಳಲ್ಲೇ ಶತಕ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯೂ ಸೂರ್ಯವಂಶಿಯವರದ್ದಾಗಿದೆ. 14 ವರ್ಷ 32 ದಿನಗಳ ವಯಸ್ಸಿನಲ್ಲಿ ಸೂರ್ಯವಂಶಿ ಶತಕ ಗಳಿಸಿದ್ದರೆ, ಇದಕ್ಕೂ ಮೊದಲು 19 ವರ್ಷ 253 ದಿನಗಳ ವಯಸ್ಸಿನಲ್ಲಿ ಮನೀಶ್ ಪಾಂಡೆ ಅವರು ಡೆಕ್ಕನ್ ಚಾರ್ಜಸ್ ವಿರುದ್ಧ 2009ರಲ್ಲಿ ಆರ್‌ಸಿಬಿ ಪರ ಶತಕ ಹೊಡೆದಿದ್ದರು.
ಅಷ್ಟೇ ಅಲ್ಲದೆ ಟಿ20 ಸ್ವರೂಪದ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಸೂರ್ಯವಂಶಿ ಪಾತ್ರರಾಗಿದ್ದಾರೆ. 2013ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಶ್ಚಿಮ ವಲಯ ಪಂದ್ಯದಲ್ಲಿ ಮುಂಬೈ ವಿರುದ್ಧ ಶತಕ ಗಳಿಸಿದ್ದ ಮಹಾರಾಷ್ಟ್ರದ ವಿಜಯ್ ಜೋಲ್ ಅವರು ಟಿ20ಯಲ್ಲಿ ಶತಕ ಮಾಡಿದ ಅತ್ಯಂತ ಕಿರಿಯ ಎಂಬ ದಾಖಲೆ ಹೊಂದಿದ್ದರು. 18 ವರ್ಷ, 118 ದಿನಗಳಲ್ಲಿ ವಿಜಯ್ ಈ ಸಾಧನೆ ಮಾಡಿದ್ದರು.
ಒಟ್ಟಾರೆಯಾಗಿ, ವೈಭವ್ ಸಿಡಿಸಿದ್ದು ಐಪಿಎಲ್ ಇತಿಹಾಸದಲ್ಲೇ ಎರಡನೇ ಅತಿ ವೇಗದ ಶತಕ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಗಳಿಸಿದ ಶತಕ ಮೊದಲನೇ ಸ್ಥಾನದಲ್ಲಿದೆ.
ಕಿರಿಯ ವಯಸ್ಸಿನಲ್ಲೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಖ್ಯಾತಿ ಸೂರ್ಯವಂಶಿ ಅವರದ್ದಾಗಿದೆ. ಈ ಸಾಧನೆ ಇದಕ್ಕಿಂತ ಮೊದಲಿಗೆ ಪ್ರಯಾಸ್ ರೇ ಬರ್ಮನ್ ಅವರದ್ದಾಗಿತ್ತು. 2019ರಲ್ಲಿ ಪ್ರಯಾಸ್ ಅವರು ಆರ್‌ಸಿಬಿ ತಂಡಕ್ಕಾಗಿ ಆಡಿದಾಗ ಅವರಿಗೆ 16 ವರ್ಷ 157 ದಿನಗಳಾಗಿದ್ದವು. ಆದರೆ 14 ವರ್ಷ 23 ದಿನಗಳಿಗೆಯೇ ಐಪಿಎಲ್‌ನಲ್ಲಿ ಆಡಿ, ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್‌ಗೆ ಕಾಲಿಟ್ಟ ದಾಖಲೆಯನ್ನು ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿರಿ: ಐಪಿಎಲ್ | ಅಂಕಪಟ್ಟಿಯಲ್ಲಿ ಆರ್‌ಸಿಬಿಗೆ ಮೊದಲ ಸ್ಥಾನ: ಪ್ಲೇ-ಆಫ್‌ಗೇರಲು ಯಾವ ತಂಡಕ್ಕೆ ಎಷ್ಟು ಶೇಕಡಾ ಅವಕಾಶ?
ಮೊದಲ ಬಾಲ್‌ನಲ್ಲೇ ಸಿಕ್ಸ್ ಭಾರಿಸಿ ಐಪಿಎಲ್ ಕೆರಿಯರ್ ಆರಂಭಿಸಿದ ಆಟಗಾರರ ಪಟ್ಟಿಗೆ ಸೂರ್ಯವಂಶಿ ಸೇರಿದ್ದಾರೆ. ಆಸ್ಟ್ರೇಲಿಯಾದ ರಾಬ್ ಕ್ವಿನಿ, ಕೆರಿಬಿಯನ್‌ನ ಕೆವೊನ್ ಕೂಪರ್, ವೆಸ್ಟ್ ಇಂಡೀಸ್ ಆಟಗಾರರಾದ ಆಂಡ್ರೆ ರಸೆಲ್, ಕಾರ್ಲೋಸ್ ಬ್ರೈತ್‌ವೈಟ್, ಜಾವೊನ್ ಸಿಯರ್ಲ್ಸ್, ಭಾರತದ ಆಟಗಾರರಾದ ಅನಿಕೇತ್ ಚೌಧರಿ, ಸಮೀರ್ ರಿಜ್ವಿ, ಸಿದ್ಧೇಶ್ ಲಾಡ್, ಶ್ರೀಲಂಕಾದ ಮಹೇಶ್ ತೀಕ್ಷಣಾ ಅವರು ಐಪಿಎಲ್‌ಗೆ ಕಾಲಿಟ್ಟ ಮೊದಲ ಪಂದ್ಯದಲ್ಲಿಯೇ ಮೊದಲ ಬಾಲ್‌ನಲ್ಲೇ ಸಿಕ್ಸ್ ಬಾರಿಸಿದ ಆಟಗಾರರು. ಈ ಪಟ್ಟಿಗೆ ಹೊಸ ಸೇರ್ಪಡೆಯಾದವರು ವೈಭವ್ ಸೂರ್ಯವಂಶಿ.
ನವೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನ ವೇಳೆ ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂಪಾಯಿಗೆ ಆರ್‌ಆರ್ ಖರೀದಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಅಂಡರ್ 19 ಟೆಸ್ಟ್ ಕ್ರಿಕೆಟ್‌ನಲ್ಲಿ ಸೂರ್ಯವಂಶಿ 58 ಎಸೆತಗಳಲ್ಲಿ ಶತಕ ಬಾರಿಸಿದ್ದನ್ನು ಆರ್‌ಆರ್ ಗಮನಿಸಿತ್ತು. ಕ್ರಿಕೆಟ್ ಕೆರಿಯರ್‌ನಲ್ಲಿ ದಾಖಲೆಗಳನ್ನು ಬರೆಯುವ ಸೂಚನೆಗಳನ್ನು ನೀಡಿರುವ ವೈಭವ್ ಸೂರ್ಯವಂಶಿಗೆ ಮತ್ತಷ್ಟು ಅವಕಾಶಗಳು ಸಿಗಲಿ ಎಂಬುದು, ಅವರ ಆಟವನ್ನು ನೋಡಿದ ಕ್ರಿಕೆಟ್ ಪ್ರೇಮಿಗಳ ಆಶಯ. ಈ ಸೋಷಿಯಲ್ ಮೀಡಿಯಾ ತುಂಬಾ ವೈಭವ್ ವೈಬ್ರೇಷನ್. ಸೋಮವಾರ ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ ಅಭಿಮಾನಿಗಳೂ ಬಹಳ ಖುಷಿಯಾಗಿದ್ದಾರೆ. ಇದಕ್ಕೆ ಎರಡು ಕಾರಣಗಳಿವೆ.: ಒಬ್ಬ ಬಾಲನ ಆಟ ಸಹಜವಾಗಿ ಮೆಚ್ಚುಗೆಯಾಗಿದೆ. ಇನ್ನೊಂದು ಕಾರಣ- ಗುಜರಾತ್ ಟೈಟನ್ಸ್ ಗೆದ್ದಿದ್ದರೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಆರ್‌ಆರ್ ಗೆದ್ದದ್ದು ಆರ್‌ಸಿಬಿಗೆ ಒಳ್ಳೆಯದಾಯಿತು.
