ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಬೆಳವಣಿಗಳ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ರಾಜಕೀಯ ಪಕ್ಷಗಳನ್ನು ಒಡೆಯಲು ಮೋದಿ ಸರ್ಕಾರಕ್ಕೆ ಪೂರ್ತಿ ಸಮಯವಿದೆ. ಆದರೆ ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
“ದಿನನಿತ್ಯ ‘ರಾಷ್ಟ್ರೀಯತೆ’ ಎಂದು ಕಹಳೆ ಮೊಳಗಿಸುವವರು ನಮ್ಮ ಸಶಸ್ತ್ರ ಪಡೆಗಳಿಗೆ ಇನ್ನಿಲ್ಲದಂತೆ ದ್ರೋಹ ಮಾಡಿದ್ದಾರೆ. ಪ್ರಸ್ತುತ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಮೋದಿ ಸರ್ಕಾರದ ಬಳಿ ನಮ್ಮ ಸೈನಿಕರಿಗೆ ನೀಡಲು ಹಣವಿಲ್ಲ ಎಂಬುದನ್ನು ಅಗ್ನಿಪಥ್ ಯೋಜನೆ ನೀತಿಯ ಮೂಲಕ ಸ್ಪಷ್ಟವಾಗಿ ಒಪ್ಪಿಕೊಂಡಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
“ಮೋದಿ ಸರ್ಕಾರವು ಒಂದು ಸೇನೆಯಲ್ಲಿ ಒಂದು ಶ್ರೇಣಿ ಹಾಗೂ ಒಂದು ಪಿಂಚಣಿ ಅನುಷ್ಠಾನದಲ್ಲಿ ರಕ್ಷಣಾ ವಲಯಕ್ಕೆ ದ್ರೋಹ ಬಗೆದಿದೆ. ಈ ಯೋಜನೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಉಂಟುಮಾಡುವ ಮೂಲಕ ನಮ್ಮ ವೀರ ಜವಾನರ ನಡುವೆ ವಿಭಜನೆ ಸೃಷ್ಟಿಸಿದೆ. ಬಿಜೆಪಿ ಸರ್ಕಾರಕ್ಕೆ ರಾಷ್ಟ್ರೀಯ ಭದ್ರತೆ ಆದ್ಯತೆಯಾಗಿ ಉಳಿದಿಲ್ಲ. ಜನಾದೇಶಕ್ಕೆ ದ್ರೋಹ ಮಾಡುವುದು ಮಾತ್ರ ಅವರ ಆದ್ಯತೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು; ರಸ್ತೆಯಲ್ಲಿ ಮೃತದೇಹವಿಟ್ಟು ಪ್ರತಿಭಟನೆ
ಟ್ವಿಟರ್‌ನಲ್ಲಿ ಹುದ್ದೆ ಖಾಲಿಯಿರುವ ಬಗ್ಗೆ ಭಾವಚಿತ್ರ ಹಂಚಿಕೊಂಡಿರುವ ಅವರು, ಭೂಸೇನೆಯಲ್ಲಿ ಅಧಿಕಾರಿಗಳು ಸೇರಿದಂತೆ 1.25 ಲಕ್ಷ, ಭಾರತೀಯ ನೌಕಾ ಸೇನೆಯಲ್ಲಿ 13 ಸಾವಿರಕ್ಕೂ ಹೆಚ್ಚು ಹಾಗೂ ವಾಯು ಸೇನೆಯಲ್ಲಿ 6 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬಿಜೆಪಿಯ ವಾಷಿಂಗ್ ಮೆಷಿನ್ ಪ್ರಾರಂಭ
ಮಹಾರಾಷ್ಟ್ರದಲ್ಲಿ ಎನ್‌ಸಿಪಿಯನ್ನು ಒಡೆದಿರುವ ಅನೀತಿ ತಂತ್ರದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಸ್ಪಷ್ಟವಾಗಿ ಬಿಜೆಪಿಯ ‘ವಾಷಿಂಗ್ ಮೆಷಿನ್’ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇಂದು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿರುವ ಹಲವು ಶಾಸಕರು ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ ಅವರೆಲ್ಲರಿಗೂ ಕ್ಲೀನ್ ಚಿಟ್ ಸಿಕ್ಕಿದೆ” ಎಂದು ತಿಳಿಸಿದ್ದಾರೆ.
“ಇದು ಕಾನೂನುಬದ್ಧವಾಗಿ ಚುನಾಯಿತ ಸರ್ಕಾರವಲ್ಲ. ಆದರೆ ಇಡಿಯಿಂದ ಸುಲಭವಾಗಿ ಅಧಿಕಾರವನ್ನು ಪಡೆದುಕೊಳ್ಳುವುದಾಗಿದೆ. ಮಹಾರಾಷ್ಟ್ರ ಸರ್ಕಾರವು ಭ್ರಷ್ಟಾಚಾರ ಮತ್ತು ಪಾಪದ ಕಾರ್ಖಾನೆಯಾಗಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ದೇಶದ್ರೋಹಿಗಳು, ಭ್ರಷ್ಟರು ಮತ್ತು ರಾಜಿ ಮಾಡಿಕೊಂಡ ನಾಯಕರನ್ನು ಜನರು ಚೆನ್ನಾಗಿ ಗುರುತಿಸಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ” ಎಂದು ತಿಳಿಸಿದ್ದಾರೆ.