ನಾಲ್ಕು ರಾಜ್ಯಗಳಲ್ಲಿ 260ಕ್ಕೂ ಹೆಚ್ಚು ಮನೆಗಳ್ಳತನ ಮಾಡಿ, ಕದ್ದ ಹಣದಲ್ಲಿ ಪಾಪ ಪರಿಹಾರಕ್ಕಾಗಿ ಸಮಾಜ ಸೇವೆ ಮಾಡುವುದರ ಜತೆಗೆ ಐಷಾರಾಮಿ ಜೀವನ ಸಾಗಿಸುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಕಲಬುರಗಿಯ ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಮನೆಗಳ್ಳತನ ಮಾಡುತ್ತಿದ್ದ ತೆಲಂಗಾಣದ ಸಿಕಂದರಬಾದ್ ನಿವಾಸಿ ಶಿವಪ್ರಸಾದ ಅಲಿಯಾಸ್ ಮಂತ್ರಿ ಶಂಕರ(56) ಎಂಬಾತನನ್ನು ಬಂಧಿಸಿ, ₹30 ಲಕ್ಷ ಮೌಲ್ಯದ 412 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ 260ಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ್ದಾನೆ” ಎಂದು ತಿಳಿಸಿದರು.
“ಶಿವಪ್ರಸಾದ 14 ವರ್ಷದವನಿರುವಾಗಲೇ ಕಳ್ಳತನ ಶುರು ಮಾಡಿದ್ದ. ಕಳ್ಳತನದ ಪಾಪ ಪರಿಹಾರಕ್ಕಾಗಿ ದೇವಸ್ಥಾನ, ಜಾತ್ರೆಯಲ್ಲಿ ಅನ್ನ ಸಂತರ್ಪಣೆ, ಬಡ ರೋಗಿಗಳಿಗೆ ಧನಸಹಾಯದಂತಹ ಸಮಾಜ ಸೇವೆಯನ್ನೂ ಮಾಡುತ್ತಿದ್ದ. ಸಹಾಯ ಪಡೆದವರು ಈತನಿಗೆ ಮಂತ್ರಿ ಶಂಕರನೆಂದು ಕರೆಯುತ್ತಿದ್ದರು. ಈತ ಐವರನ್ನು ಮದುವೆ ಆಗಿದ್ದು, ಮಹಾನಗರಗಳ ಡ್ಯಾನ್ಸ್ ಕ್ಲಬ್‌ಗಳಲ್ಲಿ ಹಣವನ್ನು ಖರ್ಚು ಮಾಡುತ್ತಿದ್ದ” ಎಂದರು.
“ಕಳ್ಳತನ ಮಾಡಿದ ಬಳಿಕ ಫಿಂಗರ್ ಪ್ರಿಂಟ್ಸ್ ಗುರುಗಳು ಸಿಗಬಾರದೆಂಬ ಕಾರಣಕ್ಕೆ ಕೈಗಳಿಗೆ ಫೆವಿಕಲ್ ಹಾಕಿಕೊಂಡು ಕೃತ್ಯ ಎಸಗುತ್ತಾನೆ. ಒಂದು ವೇಳೆ ಫೆವಿಕಲ್ ಸಿಗಲಿಲ್ಲ ಅಂದರೆ ಮನೆಗಳ ಡೋರ್‌ಗಳನ್ನು ಒಡೆಯುವಾಗ ಸ್ಕ್ರೂಡ್ರೈವರ್‌ಗಳನ್ನು ಬಳಸಿ ಮನೆಗಳ್ಳತನ ಮಾಡುತ್ತಾನೆ. ಒಂದು ವೇಳೆ ಫಿಂಗರ್ ಪ್ರಿಂಟ್ಸ್ ಬರಬಾರದು ಅಂತ ಬಟ್ಟೆಗಳಿಂದ ನೀಟಾಗಿ ಕ್ಲೀನ್ ಮಾಡ್ತಾನೆ. ಈಗ ಕಳ್ಳತನ ಮಾಡಿರುವ ಮನೆಯಲ್ಲಿಯೂ ಕೂಡಾ ಸಿಕ್ಕಿರಲಿಲ್ಲ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | 8 ಮಂದಿ ಮಕ್ಕಳೊಂದಿಗೆ ಆರಂಭವಾದ ಶಾಲೆಯಲ್ಲಿ ಇಂದು 148 ದಾಖಲಾತಿ; ಕಾರಣವೇನು?
“ಕಲಬುರಗಿಯ ಭಾಗ್ಯವಂತಿ ನಗರದ ಮನೆಯಲ್ಲಿ ಕಳ್ಳತನಕ್ಕಾಗಿ ಕಾಂಪೌಂಡ್ ಹಾರಿದಾಗ ಗಾಯಗೊಂಡಿದ್ದ. ಇದರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಇದಕ್ಕೂ ಮುನ್ನ 210 ಕಳ್ಳತನ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದು, ಸ್ಥಳೀಯ ವಿಶೇಷ ಕಾಯದೆಯಡಿ ನಾಲ್ಕು ವರ್ಷ ಜೈಲಿಗೂ ಹೋಗಿದ್ದ. ಆದರೂ ಕಳ್ಳತನ ಕೃತ್ಯ ಬಿಟ್ಟಿರಲಿಲ್ಲ” ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ಹೇಳಿದರು.